Shivarajkumar: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕಳೆದ ಕೆಲವು ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಪತ್ನಿ ಗೀತಾ ಪರ ಶಿವಮೊಗ್ಗ ಸುತ್ತಮುತ್ತ ಸುತ್ತಾಡಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪತ್ನಿಯನ್ನು ಗೆಲ್ಲಿಸುವಂತೆ ಮತದಾರರಲ್ಲಿ ಕೇಳಿಕೊಂಡಿದ್ದರು. ಶಿವಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದರು. ಈಗ ಅನಾರೋಗ್ಯ ಹಿನ್ನಲೆ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಒಂದು ಹಂತದ ಚುನಾವಣಾ ಪ್ರಚಾರ ಮುಗಿಸಿ ಶಿವರಾಜ್‌ಕುಮಾರ್ ಬೆಂಗಳೂರಿಗೆ ಹಿಂತಿರುಗಿದ್ದರು. ಈ ವೇಳೆ ಅವರು ಅನಾರೋಗ್ಯ ಎದುರಾಗಿದ್ದು, ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೂಲಗಳ ಪ್ರಕಾರ, ಶಿವರಾಜ್‌ಕುಮಾರ್‌ಗೆ ಯಾವುದೇ ಗಂಭೀರ ಸಮಸ್ಯೆಯಿಲ್ಲ. ಜನರಲ್ ಚೆಕಪ್‌ಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಶಿವಣ್ಣ ದಾಖಲಾಗಿದ್ದರು ಎನ್ನಲಾಗುತ್ತಿದೆ. ಇಂದು (ಏಪ್ರಿಲ್ 1) ಶಿವರಾಜ್‌ಕುಮಾರ್ ಸಂಜೆ ವೇಳೆ ಆಸ್ಪತ್ರೆಯಿಂದ ನಿರ್ಗಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತಿವೆ.
ಶಿವರಾಜ್‌ಕುಮಾರ್ ಆಗಾಗ ಜನರಲ್ ಚೆಕಪ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗಾಗಿ ಈ ಬಾರಿಗೆ ಶಿವಣ್ಣ ಜನರಲ್ ಚೆಕಪ್ ಮಾಡಿಸಿಕೊಳ್ಳುವುದಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಹೆಚ್ಚು ಬಳಲಿದ್ದರು. ಈ ಬೆನ್ನಲ್ಲೇ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಪತ್ನಿ ಗೀತಾ ಅವರಿಗೆ 2024ರ ಲೋಕಸಭೆ ಟಿಕೆಟ್ ಅನೌನ್ಸ್ ಆಗುತ್ತಿದ್ದಂತೆ ಶಿವರಾಜ್‌ಕುಮಾರ್ ಆಕ್ಟಿವ್ ಆಗಿದ್ದರು. ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪತ್ನಿಯನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಕೆಲವು ದಿನಗಳಿಂದಲೇ ಪ್ರಚಾರ ಆರಂಭಿಸಿದ್ದರು. ಬಿಸಿಲು ಎನ್ನದೆ ಪತ್ನಿ ಪರ ಪ್ರಚಾರ ಮಾಡಿದ್ದರು. ಇದರಿಂದ ಶಿವಣ್ಣ ಬಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಶಿವರಾಜ್‌ಕುಮಾರ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಶಿವಣ್ಣ ಬಹು ನಿರೀಕ್ಷಿತ 'ಬೈರತಿ ರಣಗಲ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣ ಹಾಗೂ ಆರ್. ಚಂದ್ರು ಕಾಂಬಿನೇಷನ್‌ನ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಇಷ್ಟೊಂದು ಬ್ಯುಸಿಯಾಗಿದ್ದರೂ ಬಿಡುವು ಸಿಕ್ಕಾಗಲೆಲ್ಲಾ ಚುನಾವಣಾ ಪ್ರಚಾರಕ್ಕೂ ಆಗಮಿಸುವುದಾಗಿ ಶಿವಣ್ಣ ಭರವಸೆ ನೀಡಿದ್ದಾರೆ. ಸದ್ಯ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಜನರಲ್ ಚೆಕಪ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು (ಏಪ್ರಿಲ್ 1) ಅಥವಾ ನಾಳೆ (ಏಪ್ರಿಲ್ 2) ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತಿವೆ.


Click it and Unblock the Notifications











