Breaking news: ಮಂಚು ವಿಷ್ಣು- ಪ್ರಭಾಸ್ ನಟನೆಯ 'ಕಣ್ಣಪ್ಪ' ಚಿತ್ರದಲ್ಲಿ ಶಿವಣ್ಣ ನಟಿಸೋದು ಕನ್ಫರ್ಮ್
ಭಾರತೀಯ ಚಿತ್ರರಂಗದಲ್ಲೀಗ ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಒಂದೇ ಭಾಷೆಯ ಸ್ಟಾರ್‌ಗಳು ಅಲ್ಲ. ಅಕ್ಕಪಕ್ಕದ ಚಿತ್ರರಂಗದ ನಟರನ್ನು ಸೇರಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಲೆಕ್ಕಾಚಾರ ನಡೀತಿದೆ. ಸ್ಟಾರ್ ನಟರನ್ನು ಅತಿಥಿ ಪಾತ್ರಗಳಲ್ಲಿ ತೋರಿಸುವುದು ಕೂಡ ಹೆಚ್ಚಾಗುತ್ತಿದೆ. ಇದೀಗ ಬಹುನಿರೀಕ್ಷಿತ ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸೋದು ಖಚಿತವಾಗಿದೆ.
ತೆಲುಗಿನಲ್ಲಿ ಮೋಹನ್ ಬಾಬು ತಮ್ಮ ಮಗ ಮಂಚು ವಿಷ್ಣು ಲೀಡ್ ರೋಲ್‌ನಲ್ಲಿ 'ಕಣ್ಣಪ್ಪ' ಚಿತ್ರ ಮಾಡ್ತಿರೋದು ಗೊತ್ತೇಯಿದೆ. ಈಗಾಗಲೇ ಈ ಚಿತ್ರದಲ್ಲಿ ಬಾಹುಬಲಿ ಪ್ರಭಾಸ್, ಮೋಹನ್ ಲಾಲ್ ನಟಿಸೋದು ಪಕ್ಕಾ ಆಗಿದೆ. ನಯನತಾರ ಕೂಡ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಇದೀಗ ಶಿವಣ್ಣ ಕೂಡ ಚಿತ್ರದ ಭಾಗವಾಗುತ್ತಿರುವುದನ್ನು ಮಂಚು ವಿಷ್ಣು ಖಚಿತಪಡಿಸಿದ್ದಾರೆ. ಈ ಹಿಂದೆ ಫಿಲ್ಮಿಬೀಟ್‌ನಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿತ್ತು.

ಅಚ್ಚರಿ ಎಂದೆ 'ಶಿವ ಮೆಚ್ಚಿನ ಕಣ್ಣಪ್ಪ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಕಣ್ಣಪ್ಪನ ಪಾತ್ರ ಮಾಡಿದ್ದರು. ಆದರೆ ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ಶಿವನ ಪಾತ್ರ ಮಾಡ್ತಾರೆ ಎನ್ನಲಾಗ್ತಿದೆ. ಅದೇ ನಿಜವಾದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. 'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಶಿವಣ್ಣ ಈಗಾಗಲೇ ಅಕ್ಕಪಕ್ಕದ ಇಂಡಸ್ಟ್ರಿಯಲ್ಲಿ ಭಾರೀ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. 'ಕಣ್ಣಪ್ಪ' ರೀತಿಯ ಭಕ್ತಿಪ್ರಧಾನ ಪೌರಾಣಿಕ ಸಿನಿಮಾ ಮತ್ತಷ್ಟು ಅಭಿಮಾನಿಗಳನ್ನು ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
ಡಾ. ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದೆ ಹೆಚ್ಚು ಕಡಿಮೆ ಇದೇ ಕಥೆಯ 'ಶಿವ ಮೆಚ್ಚಿನ ಕಣ್ಣಪ್ಪ' ಚಿತ್ರದಲ್ಲಿ ಪುತ್ರ ಶಿವರಾಜ್‌ಕುಮಾರ್ ನಟಿಸಿದರು. ಈ ಚಿತ್ರದಲ್ಲಿ ಅಣ್ಣಾವ್ರು ಶಿವನ ಪಾತ್ರ ಮಾಡಿದ್ದು ವಿಶೇಷ. ಇಬ್ಬರು ಕೂಡ ಕಣ್ಣಪ್ಪನ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದರು. ಇದೀಗ 'ಕಣ್ಣಪ್ಪ' ಚಿತ್ರದಲ್ಲಿ ಮಂಚು ವಿಷ್ಣು ಟೈಟಲ್ ರೋಲ್ ಪ್ಲೇ ಮಾಡುತ್ತಿದ್ದಾರೆ.
'ಬೇಡರ ಕಣ್ಣಪ್ಪ' ಚಿತ್ರವನ್ನು ತೆಲುಗಿನಲ್ಲಿ ಪ್ರಭಾಸ್ ಚಿಕ್ಕಪ್ಪ ಕೃಷ್ಣಂ ರಾಜು ರೀಮೇಕ್ ಮಾಡಿದ್ದರು. ಆ ನಂತರ ಇದೇ ಚಿತ್ರದಲ್ಲಿ ಪ್ರಭಾಸ್ ಹೀರೊ ಆಗಿ ನಟಿಸಬೇಕು ಎನ್ನುವುದು ಕೃಷ್ಣಂರಾಜು ಆಸೆಯಾಗಿತ್ತು. ಯಂಗ್ ರೆಬಲ್ ಸ್ಟಾರ್ ಕೂಡ ಇದಕ್ಕೆ ಒಪ್ಪಿದ್ದರು. ಆದರೆ ಸಿನಿಮಾ ಶುರುವಾಗಲಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಮೋಹನ್ ಬಾಬು 'ಕಣ್ಣಪ್ಪ' ಸಿನಿಮಾ ಮಾಡುವ ಕನಸು ಕಂಡರು. ಈಗ ಅದಕ್ಕೆ ವೇದಿಕೆ ಸಿದ್ಧವಾಗಿದೆ.

ನ್ಯೂಜಿಲೆಂಡ್‌ನಲ್ಲಿ 'ಕಣ್ಣಪ್ಪ' ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆಯಲಿದೆ. ಈಗಾಗಲೇ 7 ಟ್ಯಾಂಕರ್‌ಗಳಲ್ಲಿ ಚಿತ್ರೀಕರಣಕ್ಕೆ ಬೇಕಾದ ಸೆಟ್, ಪ್ರಾಪರ್ಟಿ ಎಲ್ಲವನ್ನು ಅಲ್ಲಿಗೆ ತಲುಪಿಸಲಾಗಿದೆ. ನ್ಯೂಜಿಲೆಂಡ್ ಕಾಡಿನಲ್ಲಿ ಸೆಟ್ ನಿರ್ಮಾಣ ಕೆಲಸಗಳು ನಡೀತಿದೆ. ಪ್ರಭಾಸ್ ಬಳಿಕ ಮೋಹನ್ ಲಾಲ್ ಕೂಡ ಚಿತ್ರದ ಪಾತ್ರವೊಂದರಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸರದಿ.
'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಶಿವನಾಗಿ ನಟಿಸ್ತಾರೆ ಎನ್ನಲಾಗ್ತಿದೆ. ಅಭಿಮಾನಿಗಳು ಶಿವನ ರೂಪದಲ್ಲಿ ಪ್ರಭಾಸ್ ಪೋಸ್ಟರ್‌ಗಳನ್ನು ವೈರಲ್ ಮಾಡುತ್ತಿದ್ದಾರೆ. ಆದರೆ ಈಗ ಸೆಂಚುರಿ ಸ್ಟಾರ್ ಶಿವನ ಪಾತ್ರ ಮಾಡುತ್ತಾರೆ ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗುವ ಸಾಧ್ಯತೆಯಿದೆ. 100 ಕೋಟಿ ರೂ. ಬಜೆಟ್‌ನಲ್ಲಿ 'ಕಣ್ಣಪ್ಪ' ಸಿನಿಮಾ ಮೂಡಿ ಬರಲಿದೆ. ಶಿವಣ್ಣ ಚಿತ್ರದಲ್ಲಿ ನಟಿಸುವ ವಿಚಾರವನ್ನು ಎಕ್ಸ್(ಟ್ವಿಟ್ಟರ್‌ನಲ್ಲಿ) ಮಂಚು ವಿಷ್ಣು ಅಧಿಕೃತಗೊಳಿಸಿದ್ದಾರೆ.
ಶಿವಣ್ಣ ಈಗಾಗಲೇ ತೆಲುಗಿನಲ್ಲಿ ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಯಾವುದೇ ಪಾತ್ರದಲ್ಲಿ ನಟಿಸಿಲ್ಲ. 'ಕಣ್ಣಪ್ಪ' ಟಾಲಿವುಡ್‌ನಲ್ಲಿ ಸೆಂಚುರಿ ಸ್ಟಾರ್ ಮೊದಲ ಸಿನಿಮಾ ಆಗಲಿದೆ.


Click it and Unblock the Notifications











