ಸೆಂಚುರಿ ಸ್ಟಾರ್ ಈಸ್ ಬ್ಯಾಕ್; ವಿಗ್ ಧರಿಸಿ ಚಿತ್ರೀಕರಣದಲ್ಲಿ ಶಿವಣ್ಣ ಭಾಗಿ
ಕ್ಯಾನ್ಸರ್ ಚಿಕಿತ್ಸೆ ಬಳಿಕ ನಟ ಶಿವರಾಜ್‌ಕುಮಾರ್ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ನಿನ್ನೆ(ಮಾರ್ಚ್ 3) ತಮ್ಮ 131ನೇ ಸಿನಿಮಾ ಚಿತ್ರೀಕರಣದಲ್ಲಿ ಶಿವಣ್ಣ ಕಾಣಿಸಿಕೊಂಡರು. ಆರತಿ ಬೆಳಗಿ ಅವರನ್ನು ಸೆಟ್‌ಗೆ ಚಿತ್ರತಂಡ ಬರಮಾಡಿಕೊಂಡಿದೆ. ವಿಗ್ ಧರಿಸಿ ವಿಭಿನ್ನ ಲುಕ್‌ನಲ್ಲಿ ಅವರು ಮಿಂಚಿದ್ದಾರೆ.
ಸೆಪ್ಟೆಂಬರ್‌ನಲ್ಲೇ ಶಿವಣ್ಣ131 ಚಿತ್ರದ ಫಸ್ಟ್ ಶೆಡ್ಯೂಲ್ ಮುಕ್ತಾಯವಾಗಿತ್ತು. ಅದೇ ಸಮಯದಲ್ಲಿ 'ಟಾಕ್ಸಿಕ್' ಸಿನಿಮಾ ಸೆಟ್‌ಗೆ ಕೂಡ ಶಿವಣ್ಣ ಭೇಟಿ ನೀಡಿದ್ದರು. ಕಾರ್ತಿಕ್ ಅದ್ವೈತ್ ಶಿವಣ್ಣ131 ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದ ವರ್ಷ ಶಿವಣ್ಣ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಗೊತ್ತಾಗಿತ್ತು. ಡಿಸೆಂಬರ್‌ನಲ್ಲಿ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕ್ಯಾನ್ಸರ್ ಚಿಕಿತ್ಸೆ ಬಳಿಕ ಕೆಲ ದಿನಗಳ ಕಾಲ ಶಿವಣ್ಣ ವಿಶ್ರಾಂತಿ ಪಡೆದರು. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದರೂ ಕೂಡ ಸಿನಿಮಾ ಚಿತ್ರೀಕರಣ ಕೊಂಚ ತಡ ಮಾಡಿದ್ದರು. ಅಂತಿಮವಾಗಿ ಸಿನಿಮಾ ಸೆಟ್‌ಗೆ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಶಿವಣ್ಣ131 ಚಿತ್ರದ ಮೊದಲ ದಿನದ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ.
ಪತ್ನಿ ಹಾಗೂ ಮಗಳ ಜೊತೆ ಡಿಸೆಂಬರ್ 18ರಂದು ಶಿವಣ್ಣ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. 40 ದಿನಗಳ ಕಾಲ ಅಲ್ಲೇ ಉಳಿದಿದ್ದರು. ವಾಪಸ್ ಬಂದ ಬಳಿಕ ಧನಂಜಯ್- ಧನ್ಯಾ ಮದುವೆ ಸಮಾರಂಭ ಸೇರಿದಂತೆ ಕೆಲ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರು. ಕ್ಯಾನ್ಸರ್ ಚಿಕಿತ್ಸೆ ಸಮಯದಲ್ಲಿ ಅವರ ತಲೆ ಕೂದಲು ಉದುರಿರಲಿಲ್ಲ. ಆದರೆ ತಿರುಪತಿಗೆ ತೆರಳಿ ಮುಡಿ ಕೊಟ್ಟಿದ್ದರು. ಇದೀಗ ವಿಗ್ ಧರಿಸಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಶಿವಣ್ಣ131 ಚಿತ್ರದ ಪಾತ್ರದ ಲುಕ್‌ಗೆ ತಕ್ಕಂತ ಶಿವಣ್ಣ ವಿಗ್ ಧರಿಸಿದ್ದಾರೆ. ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ಕೂಡ ಇದೇ ವಿಗ್ ಧರಿಸಿ ಕಾಣಿಸಿಕೊಂಡಿದ್ದರು. ಗಡ್ಡ, ಮೀಸೆ ಟ್ರಿಮ್ ಮಾಡಿ ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದಾರೆ. ಮೊದಲಿನಂತೆ ಸಿಕ್ಕಾಪಟ್ಟೆ ಎನರ್ಜಿ ಹಾಗೂ ಜೋಶ್‌ನೊಂದಿಗೆ ಸೆಂಚುರಿ ಸ್ಟಾರ್ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದಾರೆ.
ಶೀಘ್ರದಲ್ಲೇ ತೆಲುಗಿನ RC16 ಸಿನಿಮಾ ಚಿತ್ರೀಕರಣದಲ್ಲಿ ಕೂಡ ಶಿವಣ್ಣ ಭಾಗವಹಿಸಲಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಶಿವಣ್ಣನಿಗಾಗಿ ಬುಚ್ಚಿಬಾಬು ಒಂದೊಳ್ಳೆ ಪಾತ್ರ ಬರೆದಿದ್ದಾರೆ. ಅದನ್ನು ಕೇಳಿದಾಗಲೇ ಬಹಳ ಮೆಚ್ಚಿ ಶಿವಣ್ಣ ನಟಿಸಲು ಒಪ್ಪಿದ್ದರು.
ತಮ್ಮ 131ನೇ ಸಿನಿಮಾದಲ್ಲಿ ಶಿವಣ್ಣ ದೇವ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 3 ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಈ ಲುಕ್ ಸಹ ಒಂದು. ಯಶವಂತಪುರ ಬಳಿ ಚಿತ್ರೀಕರಣ ನಡೆದಿದೆ. ಸ್ಯಾಮ್ ಸಿ ಎಸ್ ಸಂಗೀತ ಹಾಗೂ ಮಹೇನ್ ಸಿಂಹ ಛಾಯಾಗ್ರಹಣ ಇನ್ನು ಹೆಸರಿಡದ ಈ ಚಿತ್ರಕ್ಕಿದೆ. 'ಗುಲ್ಟು' ನವೀನ್ ಶಂಕರ್ ಕೂಡ ಈ ಚಿತ್ರ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಯಶಸ್ವಿ ಕ್ಯಾನ್ಸರ್ ಚಿಕಿತ್ಸೆ ಮುಗಿಸಿ ಬಂದಿದ್ದ ಶಿವಣ್ಣನನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದರು. ಇದೀಗ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಿರುವುದು ನೋಡಿ ಖುಷಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊ, ವೀಡಿಯೋ ಹಂಚಿಕೊಂಡು ಶಿವಣ್ಣ ಈಸ್ ಬ್ಯಾಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'A ಫಾರ್ ಆನಂದ್', 'ಭೈರವನ ಕೊನೆಪಾಠ' ಹೀಗೆ ಹಲವು ಸಿನಿಮಾಗಳು ಅವರ ಕೈಯಲ್ಲಿದೆ.
ಶ್ರೀನಿ ನಿರ್ದೇಶನದ 'A ಫಾರ್ ಆನಂದ್' ಚಿತ್ರವನ್ನು ಸ್ವತಃ ತಮ್ಮದೇ ಬ್ಯಾನರ್ ಅಡಿಯಲ್ಲಿ ಶಿವಣ್ಣ ನಿರ್ಮಿಸುತ್ತಿದ್ದಾರೆ. ಇನ್ನು ರಜನಿಕಾಂತ್ ಜೊತೆ 'ಜೈಲರ್'-2 ಸಿನಿಮಾದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











