ದರ್ಶನ್ ಅಭಿಮಾನಿಗಳಿಗೆ ಸುದೀಪ್ ಅಭಿಮಾನಿಗಳಿಂದ ಬಹಿರಂಗ ಪತ್ರ
ಸ್ಯಾಂಡಲ್ ವುಡ್ ನಲ್ಲಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ಕಿತ್ತಾಟ ಜೋರಾಗಿದೆ. ಪೈಲ್ವಾನ್ ಪೈರಸಿ ವಿಚಾರಕ್ಕೆ ಹೆಚ್ಚಾದ ಗಲಾಟೆ ಈಗ ಧಗಧಗಿಸುತ್ತಿದೆ. ಅಭಿಮಾನಿಗಳ ವಾರ್ ಜೊತೆಗೀಗ ಸ್ಟಾರ್ ನಟರು ಟ್ವೀಟ್ ಮಾಡಿರುವುದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ.
ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಬೇಡಿ ಎಂದು ದರ್ಶನ್ ಒಂದೆಡೆ ಹೇಳಿದ್ರೆ ಮತ್ತೊಂದೆಡೆ ಸುದೀಪ್ ನಾನು ಯಾರಿಗೂ ವಾರ್ನಿಂಗ್ ಕೊಡಲ್ಲ, ಸ್ವೀಕರಿಸುವುದು ಇಲ್ಲ ಎಂದಿದ್ದಾರೆ. ಇಬ್ಬರು ಸ್ಟಾರ್ಸ್ ಟ್ವೀಟ್ ಮಾಡುವ ಮೊದಲು ಅಭಿಮಾನಿಗಳು ಬಹಿರಂಗ ಪತ್ರ ಬರೆಯುವ ಮೂಲಕ ಒಬ್ಬರು ಇನ್ನೊಬ್ಬರಿಗೆ ಪರಸ್ಪರ ಟಾಂಗ್ ಕೊಡುತ್ತಿದ್ದಾರೆ.

ಜಗಳ ಪ್ರಾರಂಭವಾಗಿದ್ದು ದರ್ಶನ್ ಅಭಿಮಾನಿಗಳಿಂದ
ನಾವು ಕಿಚ್ಚನ ಅಭಿಮಾನಿಗಳು ನಾವು ಯಾವುದೆ ಕಾರಣಕ್ಕೂ ಯಾವುದೆ ನಟ ಅಥವಾ ಅವರ ಅಭಿಮಾನಿಗಳ ಬಗ್ಗೆ ಅಪಪ್ರಚಾರ ಮಾಡಿದವರಲ್ಲ. ಏಕೆಂದರೆ ನಾವು ನಮ್ಮ ಅಣ್ಣ ಕಿಚ್ಚನ ಹಾದಿಯಲ್ಲೆ ನಡೆಯುವವರು. ದರ್ಶನ್ ಅಭಿಮಾನಿಗಳೆ ನೀವು ಹೇಳಿದಿರಿ ನಮ್ಮ ನಟ ಮತ್ತು ಅವರ ಅಭಿಮಾನಿಗಳ ಬಗ್ಗೆ ಸುದೀಪ್ ಅಭಿಮಾನಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು, ನೀವು ಹಾಗೆ ಹೇಳುವುದಕ್ಕು ಮೊದಲು ಒಂದನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು. ಜಗಳ ಪ್ರಾರಂಭವಾಗಿದ್ದು ದರ್ಶನ್ ಅಭಿಮಾನಿಗಳಿಂದ ಹೊರತು ಸುದೀಪ್ ಅಣ್ಣನ ಅಭಿಮಾನಿಗಳಿಂದ ಅಲ್ಲ.

ಅವರ ಅಭಿಮಾನಿಗಳ ಪ್ರಚಾರ ನಮಗೆ ಅವಶ್ಯಕತೆ ಇಲ್ಲ
"ನಿಮ್ಮ ಹೀರೋ ಚಿತ್ರರಂಗಕ್ಕೆ ಕಾಲಿಡುವ ಮೊದಲೆ 25 ವಾರಗಳ ಕಾಲ ಚಿತ್ರಮಂದಿರದಲ್ಲಿ ಓಡುವ ಚಿತ್ರವನ್ನು ಕೊಟ್ಟು ಸ್ಟಾರ್ ಆದವರು ಸುದೀಪಣ್ಣ. ಅಪಪ್ರಚಾರದ ನಡುವೆಯು ಭರ್ಜರಿ ಪ್ರದರ್ಶನ ಕಾಣುತ್ತಿರುವ ನಮ್ಮ ಪೈಲ್ವಾನ್ ಸಿನಿಮಾಕ್ಕೆ ದರ್ಶನ್ ಅಥವಾ ಅವರ ಅಭಿಮಾನಿಗಳ ಪ್ರಚಾರ ನಮಗೆ ಅವಶ್ಯಕತೆ ಇಲ್ಲ. ಒಳ್ಳೆಯ ಚಿತ್ರಗಳು ಬಂದರೆ ನಮ್ಮ ಕನ್ನಡ ಅಭಿಮಾನಿಗಳೆ ಗೆಲ್ಲಿಸುತ್ತಾರೆ"

ಸುದೀಪಣ್ಣ ದರ್ಶನ್ ರ ಪ್ರಚಾರ ಪಡೆದಿಲ್ಲ
"ದರ್ಶನ್ ಅಭಿಮಾನಿಗಳಿಂದ ಸಿನಿಮಾ ಗೆಲ್ಲುವುದಾಗಿದ್ದರೆ ಅಂಬರೀಶ, ವಿರಾಟ್, ಚಕ್ರವರ್ತಿ ಮತ್ತು ತಾರಕ್ ಸಿನಿಮಾಗಳು 50 ದಿನವನ್ನು ಪೂರೈಸದೇ ಮುಖ್ಯ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುತ್ತಿರಲಿಲ್ಲ. ಯಾವ ಚಿತ್ರಕ್ಕೂ ಸುದೀಪಣ್ಣ ದರ್ಶನ್ ರ ಪ್ರಚಾರ ಪಡೆದಿಲ್ಲ. ಕೆಲವೊಮ್ಮೆ ಸುದೀಪಣ್ಣನೆ ದರ್ಶನ್ ಗೆ ಬೆನ್ನೆಲುಬಾಗಿ ನಿಂತಿದ್ದರು. ಸಾರಥಿ ಸಿನಿಮಾ ಬಿಡುಗಡೆ ಸಮಯದಲ್ಲಿ ದರ್ಶನ್ ಜೈಲಿಗೆ ಹೋದಾಗ ದಿನಕರ್ ಗೆ ಧೈರ್ಯ ಹೇಳಿ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದು ದರ್ಶನ್ ಪರವಾಗಿ ನಿಂತವರು ಸುದೀಪಣ್ಣ"

ದರ್ಶನ್ ಅನ್ ಫಾಲೋ ಮಾಡಲು ಕಾರಣವಿದು
"ಸುದೀಪ್ ಯಶಸ್ಸಿಗೆ ದರ್ಶನ್ ಅಭಿಮಾನಿಗಳೆ ಕಾರಣ ಎಂದು ದರ್ಶನ್ ಸುದೀಪ್ ಅಣ್ಣನನ್ನು ಟ್ವಿಟ್ಟರ್ ನಿಂದ ಅನ್ ಫಾಲೋ ಮಾಡಿದ್ರು. ಇದಾದ ನಂತರವೇ ದರ್ಶನ್ ಅಭಿನಯದ ಕೆಲವು ಚಿತ್ರಗಳು ನೆಲಕಚ್ಚಿದವು. ಸುದೀಪ್ ಅಣ್ಣನ ಚಿತ್ರಗಳು ಭರ್ಜರಿ ಯಶಸ್ಸು ಕಂಡವು. ಹಾಗಾದರೆ ದರ್ಶನ್ ಚಿತ್ರವನ್ನು ಅವರ ಅಭಿಮಾನಿಗಳು ಕೈ ಬಿಟ್ಟರಾ?"

ಗಣೇಶ್ ಬಗ್ಗೆ ಮಾತನಾಡಿ ದರ್ಶನ್ ಹೊಗಳಿದ್ದಾರೆ
"ಬೇರೆ ಹೀರೋಗಳ ಬಗ್ಗೆ ಅಣ್ಣ ಮಾತನಾಡಿರುವ ವಿಷಯದ ಬಗ್ಗೆ ಹೇಳುವವರು ತಿಳಿದುಕೊಳ್ಳಿ ಗಣೇಶ್ ಸರ್ ಬಗ್ಗೆ ಮಾತನಾಡುವಾಗ ತನ್ನ ಗೆಳೆಯ ದರ್ಶನ್ ರನ್ನು ಹೊಗಳಿದ್ದಾರೆ ಹೊರತು ತನ್ನನ್ನಲ್ಲ. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಜಗಳವಾಡಿದ್ದರು ಕೂಡ. ಅದನ್ನೆಲ್ಲ ಮರೆತು ಮೊದಲಿನಂತೆಯೆ ಎಲ್ಲರ ಜೊತೆ ಅನ್ಯೂನ್ಯವಾಗಿದ್ದಾರೆ. ಇದು ನಮ್ಮ ಕಿಚ್ಚನ ಗುಣ" ಎಂದು ದೀರ್ಘವಾಗಿ ಪತ್ರ ಬರೆದಿದ್ದಾರೆ.


Click it and Unblock the Notifications











