ಕನ್ನಡದಲ್ಲಿ ಮಾತನಾಡಿದ ಅರ್ನಾಲ್ಡ್ ನೋಡಿ ಖುಷಿಯಾದ ಸುದೀಪ್
ಹಾಲಿವುಡ್ ನ ಖ್ಯಾತ ನಟ ಅರ್ನಾಲ್ಡ್ ಅಭಿನಯದ ಟರ್ಮಿನೇಟರ್: ಡಾರ್ಕ್ ಫೇಟ್ ಕನ್ನಡದಲ್ಲಿ ರಿಲೀಸ್ ಆಗಿದೆ. ಅರ್ನಾಲ್ಡ್ ಕನ್ನಡ ಮಾತನಾಡಲು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಕನ್ನಡಕ್ಕೆ ಡಬ್ ಆಗಿರುವ ಟರ್ಮಿನೇಟರ್ ಟ್ರೈಲರ್ ಅನ್ನು ಸುದೀಪ್ ಇತ್ತೀಚಿಗಷ್ಟೆ ರಿಲೀಸ್ ಮಾಡಿ ಕನ್ನಡದಲ್ಲಿ ಸಿನಿಮಾ ನೋಡಿ ಎಂದು ಹೇಳಿದ್ದರು.
ವಿಶ್ವದಾದ್ಯಂತ ಇಂದು ಟರ್ಮಿನೇಟರ್: ಡಾರ್ಕ್ ಫೇಟ್ ಸಿನಿಮಾ ತೆರೆಗೆ ಬಂದಿದೆ. ಇಂದು ಸುದೀಪ್ ಅವರ ಥಿಯೇಟರ್ ನಲ್ಲಿ ಖಾಸಗಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಸುದೀಪ್ ಮತ್ತು ಸ್ನೇಹಿತರು ಟರ್ಮಿನೇಟರ್: ಡಾರ್ಕ್ ಫೇಟ್ ಸಿನಿಮಾವನ್ನು ಕನ್ನಡದಲ್ಲಿ ನೋಡಿ ಸಂತಸ ಪಟ್ಟಿದ್ದಾರೆ. ಅಲ್ಲದೆ ಕನ್ನಡದಲ್ಲೆ ಸಿನಿಮಾ ನೋಡುವಂತೆ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ "ನನ್ನ ಥಿಯೇಟರ್‌ನಲ್ಲಿ #Terminatordarkfate ಖಾಸಗಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದ್ದಕ್ಕಾಗಿ FoxStudios, ಹಾಗೂ ನೋಡಲು ಜೊತೆ ಗೂಡಿದ ನನ್ನ ಸೆಲೆಬ್ ಮತ್ತು ಕ್ರಿಕೆಟಿಂಗ್ ಸ್ನೇಹಿತರಿಗೆ ಧನ್ಯವಾದಗಳು. 1ನೇ ಚೇಸ್ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಕನ್ನಡದಲ್ಲಿ ಚಿತ್ರ ನೋಡುವುದಕ್ಕೆ ಹೆಮ್ಮೆ. ಇಂದು ಬಿಡುಗಡೆ. ತಪ್ಪದೆ ಕನ್ನಡದಲ್ಲಿ ನೋಡಿ" ಎಂದು ಹೇಳಿದ್ದಾರೆ.

ಅಂದ್ಹಾಗೆ 'ಟರ್ಮಿನೇಟರ್: ಡಾರ್ಕ್ ಫೇಟ್' ಟರ್ಮಿನೇಟರ್ ಪ್ರಾಂಚೈಸ್ ನ 6ನೇ ಆವೃತ್ತಿ ಇದಾಗಿದೆ. ಚಿತ್ರಕ್ಕೆ ಟಿಮ್ ಮಿಲ್ಲರ್ ಆಕ್ಷನ್ ಕಟ್ ಹೇಳಿದ್ದಾರೆ. ಇದೆ ಮೊದಲ ಬಾರಿಗೆ ಟರ್ಮಿನೇಟರ್ ಆವೃತ್ತಿ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗಿದೆ.


Click it and Unblock the Notifications











