ವಿಷ್ಣುದಾದಾ ಜೊತೆ ಬಾಂಧವ್ಯ ಬೆಸೆದಿದ್ದು ಹೇಗೆಂದು ಹೇಳಿಕೊಂಡ ಸುದೀಪ್
Recommended Video

ಡಾ ವಿಷ್ಣುವರ್ಧನ್ ಅವರ ಅಭಿಮಾನಿ ಮತ್ತು ಅವರ ಆದರ್ಶಗಳನ್ನ ಪಾಲಿಸುವ ವ್ಯಕ್ತಿ ಕಿಚ್ಚ ಸುದೀಪ್. ವಿಷ್ಣುಗೆ ಸಂಬಂಧಪಟ್ಟ ಕಾರ್ಯಕ್ರಮಗಳು, ಸಿನಿಮಾಗಳು ಅಂದ್ರೆ ಅಲ್ಲಿ ಕಿಚ್ಚ ಸುದೀಪ್ ಇರ್ತಾರೆ. ವಿಷ್ಣುವರ್ಧನ್ ಅಭಿಮಾನಿಗಳು ಇಷ್ಟ ಪಡುವ ಮತ್ತೊಬ್ಬ ನಟ ಕೂಡ ಸುದೀಪ್ ಅಂದ್ರೆ ತಪ್ಪಾಗಲಾರದು.
ಅಂದ್ಹಾಗೆ, ಸುದೀಪ್ ವಿಷ್ಣುದಾದಾಗೆ ಅಭಿಮಾನಿಯಾಗಿದ್ದು ನಿನ್ನೆ ಮೊನ್ನೆಯಿಂದಲ್ಲ. ಸಿನಿಮಾವನ್ನ ಇಷ್ಟಪಟ್ಟ ದಿನದಿಂದ....ಸಿನಿಮಾದ ಸಂಪರ್ಕ ಹೊಂದಿದ ದಿನದಿಂದ....ಅಮ್ಮನ ಜೊತೆ ಸಿನಿಮಾ ನೋಡಲು ಹೋದಾಗನಿಂದ....ಈ ಕಥೆಯನ್ನ ಸ್ವತಃ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
ಇಂದು ಸಾಹಸ ಸಿಂಹ ಅವರ ಹುಟ್ಟುಹಬ್ಬ. ಈ ದಿನ ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು ವಿಷ್ಣು ಅವರಿಗೆ ಶುಭಕೋರಿದ್ದಾರೆ. ಸ್ವಲ್ಪ ವಿಶೇಷವಾಗಿ ಶುಭಾಶಯ ತಿಳಿಸಿರುವ ಸುದೀಪ್ ಮನಬಿಚ್ಚಿ ಮಾತನಾಡಿದ್ದಾರೆ. ವಿಷ್ಣುವರ್ಧನ್ ಅವರ ಬಗ್ಗೆ ಮತ್ತು ಅವರ ಮೇಲಿನ ಅಭಿಮಾನದ ಬಗ್ಗೆ ಹೃದಯಪೂರ್ವಕವಾಗಿ ಬರೆದುಕೊಂಡಿದ್ದಾರೆ. ಸಿಂಹದ ಬಗ್ಗೆ ಕಿಚ್ಚನ ಮಾತು ಮುಂದೆ ಓದಿ....
(ಕೃಪೆ: ಪತ್ರಕರ್ತ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿರುವ ಸದಾಶಿವ ಶಣೈ ಅವರು ಇತ್ತೀಚಿಗಷ್ಟೆ ಡಾ ವಿಷ್ಣುವರ್ಧನ್ ಅವರ ಕುರಿತು 'ಮುಗಿಯದಿರಲಿ ಬಂಧನ' ಎಂಬ ಪುಸ್ತಕ ಬರೆದಿದ್ದರು. ವಿಷ್ಣು ಹುಟ್ಟುಹಬ್ಬದಂದು ಆ ಪುಸ್ತಕ ಲೋಕಾರ್ಪಣೆಗೊಂಡಿದೆ. ಈ ಪುಸ್ತಕದಲ್ಲಿ ಕಿಚ್ಚ ಸುದೀಪ್ ಮುನ್ನುಡಿ ಬರೆದಿದ್ದಾರೆ. ಆ ಪುಸ್ತಕದಲ್ಲಿ ಬರೆದಿರುವ ಯಥಾವತ್ ಸಾಲುಗಳನ್ನೇ ಗೂಗಲ್ ಪ್ಲಸ್ ಖಾತೆಯಲ್ಲೂ ಪೋಸ್ಟ್ ಮಾಡಿ ವಿಷ್ಣುದಾದಾ ಜೊತೆಗಿನ ನೆನಪನ್ನ ಹೇಳಿಕೊಂಡಿದ್ದಾರೆ)

ನನ್ನ ಗಮನ ಸೆಳೆದ ನಟ
''ನನ್ನ ಬಾಲ್ಯದಿಂದ ನಾನು ಹೆಚ್ಚು ಹೊಂದಿಕೊಂಡು ಬೆಳೆದ ಮಾಧ್ಯಮ ಸಿನಿಮಾ. ನಾನು ಬಹುತೇಕ ಚಿತ್ರಗಳಿಗೆ ಅಮ್ಮನ ಜೊತೆಯಲ್ಲೇ ಹೋಗಿರುವುದು. ಅಮ್ಮನೇ ನನ್ನನು ಕರೆದುಕೊಂಡು ಹೋಗಿದ್ದಾರೆ. ಎಲ್ಲ ಮಕ್ಕಳಂತೆ ನನಗೂ ಸಿನಿಮಾ ಮೇಲೆ ಹೆಚ್ಚು ಆಕರ್ಷಣೆ. ನನ್ನ ಗಮನವನ್ನ ಸೆಳೆದ ಒಬ್ಬ ನಟ. ಅವರ ಅಂದ, ಆಕರ್ಷಣೆ ಮಾಡುವಂತಹ ಕಣ್ಣು, ಅದ್ಭುತವಾದ ಫೈಟ್. ಆ ದಿನಗಳಲ್ಲಿ ಫೈಟ್ ಅಂದ್ರೆ ಮಕ್ಕಳಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿತ್ತು. ನಾನು ಕೂಡ ಅದರಿಂದ ಹೊರತಾಗಿರಲಿಲ್ಲ.

ನಾನು ಆರಾಧಿಸಿದ ವ್ಯಕ್ತಿ
''ನಾನು ಬೆಳೆಯುತ್ತಿದ್ದಂತೆ ಆ ವ್ಯಕ್ತಿಯನ್ನ ಹೆಚ್ಚು ಆರಾಧಿಸಲು ಆರಂಭಿಸಿದೆ. ಅವರ ಸಿನಿಮಾಗಳನ್ನ ಯಾವುದು ಮಿಸ್ ಮಾಡುವುದಿಲ್ಲ. ಅವರನ್ನು ನೋಡುವ ಅವಕಾಶ ಸಿಕ್ಕರೆ ಎಂದಿಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾನೊಬ್ಬ ನಟನಾಗಿ ಬೆಳೆದ ನಂತರವೂ ಆ ಗೌರವ ಸ್ವಲ್ಪವೂ ಕಮ್ಮಿಯಾಗಿಲ್ಲ. ಅವರ ಮೇಲಿನ ಅಭಿಮಾನ ಇನ್ನು ಹೆಚ್ಚಾಯಿತು.''

ಶಾಂತಿ ಹಾಗೂ ವಿನಯದ ಸಂಕೇತ
''ಅವರ ಬಳಿ ನನ್ನನ್ನು ಕರೆದೊಯ್ಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಅವರ ಬಳಿ ಹೆಚ್ಚು ಸಮಯ ಕಳೆದೆ. ಅವರ ಬಗ್ಗೆ ಮತ್ತಷ್ಟು ತಿಳಿದುಕೊಂಡೆ. ಅವರು ನಮ್ರತೆ, ಶಾಂತಿ ಹಾಗೂ ವಿನಯದ ಸಂಕೇತವಾಗಿದ್ದರು. ಅವರ ಜೀವನದಲ್ಲಿ ಯಾರೇ ಪ್ರವೇಶ ಮಾಡಿದರೂ ಮತ್ತೆ ಹಿಂತಿರುಗಿ ಹೋಗುವ ಮಾತೇ ಇಲ್ಲ. ಅವರು ಇಂದಿಗೂ, ಮುಂದೆಯೂ ನನಗೆ ಅಡಿಕ್ಷನ್ ಆಗಿಯೇ ಇರುತ್ತಾರೆ. ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ''

ನಾನು ಅವರ ಅಭಿಮಾನಿ
''ನಾನು ಅವರ ಹೆಸರಿನ ಹಚ್ಚೆ ಹಾಕಿಸಿಕೊಳ್ಳದೇ ಇರಬಹುದು. ಅವರಿಗಾಗಿ ಏನನ್ನು ನೀಡದೇ ಇರಬಹುದು. ನಾನು ಅವರ ಮುಂದೆ ಏನೇನೂ ಅಲ್ಲ. ಆದರೇ ನಾನು ಎಂದೆಂದಿಗೂ ವಿಷ್ಣು ದಾದರ ದೊಡ್ಡ ಅಭಿಮಾನಿ. ಲವ್ ಯೂ ವಿಷ್ಣು ಸಾರ್.... ನಿಮ್ಮ ಜೀವನದಲ್ಲಿ ನಾನು ಕೂಡ ಭಾಗಿಯಾಗುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಹಾಗೂ ನನ್ನ ಮೇಲೆ ಪ್ರೀತಿ ತೋರಿದಕ್ಕೆ ಧನ್ಯವಾದ'' ಎಂದು ಹೇಳುವ ಮೂಲಕ ನಿಮ್ಮ ಕಿಚ್ಚ ವಿಷ್ಣು ಸರ್ ಅವರಿಗೆ ಇದನ್ನ ಅರ್ಪಿಸಿದ್ದಾರೆ.


Click it and Unblock the Notifications











