ಇನ್ಮುಂದೆ ಫೋನ್ ಪೇಯಲ್ಲಿ ಹಣ ಕಳಿಸಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಾಯ್ಸ್ ಕೇಳಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಅಪ್‌ಡೇಟ್ ಕೊಡದೇ ಚಿತ್ರತಂಡ ಅಭಿಮಾನಿಗಳನ್ನು ಸತಾಯಿಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.
ಈಗಾಗಲೇ ನಟ ಕಿಚ್ಚ ಸುದೀಪ್ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಂದ ಪ್ರಮುಖ ಸಂಸ್ಥೆಗೆ ಸುದೀಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ. ಡಿಜಿಟಲ್ ಮನಿ ಟ್ರಾನ್ಸ್‌ಫರ್ ಆಪ್ ಫೋನ್ ಪೇ ಜೊತೆ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ.

ಫೋನ್ ಪೇ ಮೂಲಕ ಹಣ ಪಾವತಿಸಿದಾಗ ಕಂಪ್ಯೂಟರ್‌ನಿಂದ ರಚಿಸಲಾದ ಧ್ವನಿಯಲ್ಲಿ ಹಣವನ್ನು ಸ್ವೀಕರಿಸಲಾಗಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಸದ್ಯದಲ್ಲೇ ಆ ಧ್ವನಿಯ ಬದಲು ಕಿಚ್ಚನ ಗತ್ತಿನ ಧ್ವನಿ ಕೇಳಿ ಬರಲಿದೆ. ಇದಕ್ಕಾಗಿ ಫೋನ್ ಪೇ ಕಂಪನಿಯ ಪ್ರತಿನಿಧಿಗಳು ಸುದೀಪ್ ಅವರ ಧ್ವನಿ ಮಾದರಿಗಳನ್ನು ತೆಗೆದುಕೊಂಡು ಎಐ ತಂತ್ರಜ್ಞಾನದಲ್ಲಿ ಧ್ವನಿಯನ್ನು ರಚಿಸಿದ್ದಾರೆ. ಅಂದರೆ ಇನ್ಮುಂದೆ ಸುದೀಪ್ ಅವರ ಧ್ವನಿಯೊಂದಿಗೆ ಫೋನ್ ಪೇ ಸ್ಮಾರ್ಟ್ ಸ್ಪೀಕರ್‌ಗಳಲ್ಲಿ ನಗದು ವಹಿವಾಟುಗಳನ್ನು ಆಲಿಸಬಹುದು.
ಈಗಾಗಲೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ವಾಯ್ಸ್ ಫೋನ್ ಪೇ ಸ್ಪೀಕರ್‌ಗಳಲ್ಲಿ ಕೇಳಿಸುತ್ತಿದೆ. ಇನ್ನು ಮುಂದೆ ಕರ್ನಾಟಕದಲ್ಲಿ ಸುದೀಪ್ ಹಾಗೂ ಆಂಧ್ರ, ತೆಲಂಗಾಣದಲ್ಲಿ ಮಹೇಶ್ ಬಾಬು ವಾಯ್ಸ್ ಕೇಳಿಸಲಿದೆ. ಸುದೀಪ್ ರೀತಿಯಲ್ಲೇ ಮಹೇಶ್ ಬಾಬು ಜೊತೆಗೂ ಫೋನ್ ಪೇ ಒಪ್ಪಂದ ಮಾಡಿಕೊಂಡಿದೆ.
"ಒಂದು ರೂಪಾಯಿ ಫೋನ್ ಪೇಯಲ್ಲಿ ಸ್ವೀಕರಿಸಲಾಗಿದೆ ಧನ್ಯವಾದಗಳು" ಎಂದು ಸುದೀಪ್ ಹೇಳಿರುವ ಆಡಿಯೋ ರೆಕಾರ್ಡ್ ಮಾಡಲಾಗಿದೆ. ಇದೇ ವಾಯ್ಸ್ ಇನ್ನು ಮುಂದೆ ಫೋನ್ ಪೇ ಸ್ಪೀಕರ್‌ಗಳಲ್ಲಿ ಕೇಳಿಸಲಿದೆ. ಹಣದ ಮೊತ್ತ ಮಾತ್ರ ಎಐ ತಂತ್ರಜ್ಞಾನದ ಮೂಲಕ ಆಯಾ ಪಾವತಿಗೆ ತಕ್ಕಂತೆ ಬದಲಾಗುತ್ತದೆ.
ಇನ್ನು ತೆಲುಗಿನಲ್ಲಿ ಮಹೇಶ್ ಬಾಬು "ಥ್ಯಾಂಕ್ಯೂ ಬಾಸ್" ಎಂದು ಹೇಳುವ ವಾಯ್ಸ್ ಕೇಳಬಹುದು. ಅದಕ್ಕೂ ಮುನ್ನ ಬರುವ ಪಾವತಿ ಮೊತ್ತ ಎಷ್ಟು ಎನ್ನುವುದನ್ನು ಮಾತ್ರ ಎಐ ತಂತ್ರಜ್ಞಾನ ಬಳಸಿ ಕ್ರಿಯೇಟ್ ಮಾಡಲಾಗಿದೆ. ಅಂದಹಾಗೆ ಮಲಯಾಳಂ ನಟ ಮಮ್ಮುಟಿ ಧ್ವನಿಯನ್ನು ಕೂಡ ಇದೇ ರೀತಿ ಫೋನ್ ಪೇ ಬಳಸಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ಈ ಆಪ್‌ನಲ್ಲಿ ಗ್ರಾಹಕರು ಹಣ ವರ್ಗಾವಣೆ ಮಾಡಿದಾಗ ಅಮಿತಾಬ್ ಬಚ್ಚನ್ ಧ್ವನಿ ಕೇಳಿದಾಗ, ಅವರ ಅಭಿಮಾನಿಗಳು ಖುಷಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಪೋಸ್ಟ್‌ಗಳು ವೈರಲ್ ಆಗಿತ್ತು. ಇದೀಗ ಸುದೀಪ್ ವಾಯ್ಸ್ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಫೋನ್ ಪೇ ರೀತಿಯ ದೊಡ್ಡ ಆಪ್ ನಮ್ಮ ನೆಚ್ಚಿನ ನಟನ ಧ್ವನಿ ಬಳಸಿಕೊಳ್ಳುತ್ತಿದೆ ಎಂದು ಖುಷಿಯಾಗಿ ಕಾಲರ್ ಎಗರಿಸುತ್ತಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಸುದೀಪ್ ಒಂದೂವರೆ ವರ್ಷದ ಹಿಂದೆ 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿದ್ದರು. ಬಳಿಕ ಬರೋಬ್ಬರಿ 1 ವರ್ಷ ಬಿಡುವು ಪಡೆದಿದ್ದರು. ಈ ನಡುವೆ 3 ಸ್ಕ್ರಿಪ್ಟ್ ಫೈನಲ್ ಮಾಡಿದ್ದರು. ಅದರಲ್ಲಿ ತಮಿಳು ನಿರ್ದೇಶನಕ 'ಮ್ಯಾಕ್ಸ್' ಸಹ ಒಂದು. ಮಹಾಬಲೀಪುರಂನಲ್ಲಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಕಲೈಪುಲಿ ಎಸ್ ತನು ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ಸಿಸಿಎಲ್ ಕ್ರಿಕೆಟ್ ಹೊಸ ಟೂರ್ನಿಗೆ ಸುದೀಪ್ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿ ಕೂಡ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ತಮ್ಮದೇ ನಿರ್ದೇಶನದಲ್ಲಿ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಚೇರನ್ ಹಾಗೂ ಅನುಫ್ ಭಂಡಾರಿ ನಿರ್ದೇಶನದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











