'ನಿನ್ನ ಸುಂದರ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನೋಡುವೆ' ಪ್ರೀತಿಯ ಮಡದಿಗೆ ಉಪ್ಪಿ ಬರ್ತಡೇ ವಿಶ್
ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿ ಪ್ರಿಯಾಂಕಾ ಉಪೇಂದ್ರಗೆ ಇಂದು ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಇಂದು ಕುಟುಂಬ ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಂದನೂ ಪ್ರಿಯಾಂಕಾ ಉಪೇಂದ್ರಗೆ ಜನ್ಮದಿನದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿವೆ.
ಇದರ ಜೊತೆಗೆ ಪ್ರೀತಿಯ ಮಡದಿಗೆ ರಿಯಲ್ ಸ್ಟಾರ್ ಉಪೇಂದ್ರ ವಿಶೇಷವಾಗಿ ಶುಭಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಉಪೇಂದ್ರ "ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಪ್ರಿಯಾ. ನೀನು ನನ್ನ ಅಂತರಾಳದ ಭಾವನೆಗಳ ಕನ್ನಡಿ. ನಿನ್ನ ಸುಂದರ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನೋಡುವೆ. ಇದು ನನ್ನನ್ನು ಸರಿಪಡಿಸಕೊಳ್ಳಲು ಸದಾ ಸಹಾಯ ಮಾಡುತ್ತೆ. ಎಲ್ಲದಕ್ಕು ಧನ್ಯವಾದಗಳು. ಯಾವಾಗಲು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಮುದ್ದು ಮಡದಿಗೆ ವಿಶ್ ಮಾಡಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಮೂಲತಃ ಪಶ್ಚಿಮ ಬಂಗಾಳದ ಬೆಡಗಿ. 'ಕೋಟಿಗೊಬ್ಬ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ಪ್ರಿಯಾಂಕಾ ನಂತರ ಕನ್ನಡ ನಟಿಯಾಗಿದ್ದಲ್ಲದೆ ಉಪೇಂದ್ರ ಕೈ ಹಿಡಿಯುವ ಮೂಲಕ ಕನ್ನಡದ ಸೊಸೆ ಆದರು. 2003ರಲ್ಲಿ ಪ್ರಿಯಾಂಕಾ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಹಸೆ ಮಣೆ ಏರಿದರು. ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರಿಯಾಂಕಾ ಕನ್ನಡ, ತೆಲುಗು, ತಮಿಳು, ಬೆಂಗಾಲಿ ಮತ್ತು ಒಡಿಯಾ ಭಾಷೆಯಲ್ಲಿ ಮಿಂಚಿದ್ದಾರೆ.

ಇತ್ತೀಚಿಗಷ್ಟೆ ಪ್ರಿಯಾಂಕಾ ಅಭಿನಯದ ದೇವಕಿ ಸಿನಿಮಾ ರಿಲೀಸ್ ಆಗಿದೆ. ಈಗ ಮತ್ತೊಂದು ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರಿಯಾಂಕಾ ಉಪೇಂದ್ರ ಈಗ ವರ್ಕೌಟ್ ಶುರು ಮಾಡಿದ್ದಾರೆ. ಯೋಗ ಜೊತೆಗೆ ಜಿಮ್ ನಲ್ಲಿಯೂ ಬೆವರಿಳಿಸುತ್ತಿದ್ದಾರೆ. ಪ್ರಿಯಾಂಕಾ ಮತ್ತಷ್ಟು ಸಿನಿಮಾಗಳನ್ನು ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿರಲಿ ಎನ್ನುವುದು ಚಿತ್ರಪ್ರಿಯಾರ ಆಶಯ.


Click it and Unblock the Notifications











