ಅತ್ತ ತಡೆಯಾಜ್ಞೆ ಕೊಟ್ಟಿದ್ದರೆ, ಇತ್ತ ಚಿತ್ರ ನೋಡಿ ಎಂದು ಟ್ವೀಟ್ ಮಾಡಿದ ಯಶ್.!
ಯಶ್ ಅಭಿಮಾನಿಗಳು ನಿರೀಕ್ಷೆ ಮಾಡದ ಆಘಾತಕಾರಿ ಸುದ್ದಿಯೊಂದು ಇಂದು ಸಂಜೆ ಬ್ರೇಕ್ ಆಯ್ತು. ಇಷ್ಟು ದಿನ ಯಾವುದೇ ವಿವಾದಗಳಿಂದ ಸದ್ದು ಮಾಡದ 'ಕೆ.ಜಿ.ಎಫ್' ಚಿತ್ರಕ್ಕೆ ಲೀಗಲ್ ತಲೆಬಿಸಿ ಎದುರಾಗಿದೆ.
'ಕೆ.ಜಿ.ಎಫ್' ಚಿತ್ರ ಬಿಡುಗಡೆಗೆ ಬೆಂಗಳೂರಿನ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಜನವರಿ 7, 2019 ರವರೆಗೂ 'ಕೆ.ಜಿ.ಎಫ್' ಬಿಡುಗಡೆಗೆ ತಡೆ ನೀಡಲಾಗಿದೆ. ರೌಡಿ ತಂಗಂ ಜೀವನಚರಿತ್ರೆಯ ಹಕ್ಕು ಪಡೆದಿದ್ದ ರಾಜೇಶ್ವರಿ ಕಂಬೈನ್ಸ್ ನ ವೆಂಕಟೇಶ್ ಎಂಬುವರು 'ಕೆ.ಜಿ.ಎಫ್' ಸಿನಿಮಾ ರೌಡಿ ತಂಗಂ ಕಥೆ ಹೊಂದಿದೆ ಎಂದು ಆರೋಪಿಸಿ, ಬಿಡುಗಡೆಗೆ ತಡೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.

ಅತ್ತ 'ಕೆ.ಜಿ.ಎಫ್' ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದರೆ, ಇತ್ತ 'ಕೆ.ಜಿ.ಎಫ್' ಚಿತ್ರವನ್ನ ಕಣ್ತುಂಬಿಕೊಳ್ಳಿ ಎಂದು ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿದ್ದಾರೆ.
''ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ 'ಕೆ.ಜಿ.ಎಫ್' ಚಿತ್ರವನ್ನ ವೀಕ್ಷಿಸಿ. ಕೂಡಲೆ ಟಿಕೆಟ್ ಬುಕ್ ಮಾಡಿ'' ಎಂದು ನಟ ಯಶ್ ಟ್ವೀಟ್ ಮಾಡಿದ್ದಾರೆ.
ಇನ್ನೂ, ''ಇದುವರೆಗೆ ನಮಗೆ ತಡೆಯಾಜ್ಞೆ ಅಂತ ಯಾವುದೇ ನೋಟೀಸ್ ಬಂದಿಲ್ಲ. ನಾಳೆ ಚಿತ್ರ ಬಿಡುಗಡೆ ಆಗಲಿದೆ. ಕೋರ್ಟ್ ನಿಂದ ಆದೇಶ ಬಂದರೆ, ಅದಕ್ಕೆ ಉತ್ತರ ಕೊಡುವೆ. ನಾನು ಆಫೀಸ್ ನಲ್ಲಿ ಇಲ್ಲ. ನನಗೆ ಯಾವುದೇ ನೋಟೀಸ್ ಅಧಿಕೃತವಾಗಿ ಬಂದಿಲ್ಲ. 'ಕೆ.ಜಿ.ಎಫ್' ಚಿತ್ರದಲ್ಲಿ ಯಾವ ರೌಡಿ ಕಥೆಯೂ ಇಲ್ಲ'' ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











