'ಪೆದ್ದಿ' ಚಿತ್ರದಲ್ಲಿ ಕನ್ನಡ ಕಲಾವಿದರ ಕರಾಮತ್ತು; ಶಿವಣ್ಣ ಜೊತೆ ಬೇರೆ ಯಾರೆಲ್ಲಾ ನಟಿಸಿದ್ದಾರೆ ಗೊತ್ತಾ?
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಬಿಡುಗಡೆಯಾಗಿ ಸಖತ್ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿರುವ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ರಾಮ್‌ಚರಣ್ ಜೊತೆಗೆ ಶಿವರಾಜ್‌ಕುಮಾರ್, ಜಗಪತಿ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಬಾಲಿವುಡ್ ಚೆಲುವೆ ಜಾನ್ವಿ ಕಪೂರ್ ಮಿಂಚಿದ್ದಾರೆ.
ಬಹಳ ದಿನಗಳಿಂದ 'ಪೆದ್ದಿ' ಸಿನಿಮಾ ಸದ್ದು ಮಾಡ್ತಾ ಬಂದಿತ್ತು. 'ಉಪ್ಪೆನ' ರೀತಿಯ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಹಾಗೂ ರಾಮ್‌ಚರಣ್ ಕೈಜೋಡಿಸಿದ್ದಾರೆ ಅಂದಾಗಲೇ ನಿರೀಕ್ಷೆ ಗರಿಗೆದರಿತ್ತು. ಪೋಸ್ಟರ್, ಟೀಸರ್, ಸಾಂಗ್ಸ್, ಟ್ರೈಲರ್ ಎಲ್ಲವೂ ನಿರೀಕ್ಷೆ ಹೆಚ್ಚಿಸುತ್ತಾ ಬಂದಿತ್ತು. ಏಪ್ರಿಲ್ 30ರಂದು ತೆರೆಗೆ ಬರಬೇಕಿದ್ದ ಸಿನಿಮಾ ಒಂದು ತಿಂಗಳು ತಡವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಒಂದಷ್ಟು ತಪ್ಪುಗಳ ಹೊರತಾಗಿಯೂ ಸಿನಿಮಾ ಗಮನ ಸೆಳೆದಿದೆ.

'ಪೆದ್ದಿ' ಚಿತ್ರದಲ್ಲಿ ಹಳ್ಳಿಯ ಕ್ರಿಕೆಟ್ ಆಟಗಾರ ಹಾಗೂ ಕುಸ್ತಿ ಪೈಲ್ವಾನ್ ಆಗಿ ರಾಮ್‌ಚರಣ್ ನಟಿಸಿದ್ದಾರೆ. ಕೊನೆಗೆ ಪ್ಯಾರಾ ಅಥ್ಲೀಟ್ ಆಗಿಯೂ ಕಮಾಲ್ ಮಾಡಿದ್ದಾರೆ. ಪೈಲ್ವಾನ್ 'ಪೆದ್ದಿ' ಗುರುವಿನ ಉಸ್ತಾದ್ ಗೌರ್ನಾಯ್ಡು ಪಾತ್ರದಲ್ಲಿ ಶಿವಣ್ಣ ನಟಿಸಿರೋದು ವಿಶೇಷ. ಮೊದಲಿನಿಂದಲೂ ಅವರದ್ದು ಅತಿಥಿ ಪಾತ್ರ ಎಂದೇ ಭಾವಿಸಲಾಗಿತ್ತು. ಆದರೆ ಸಿನಿಮಾ ಬಿಡುಗಡೆಯಾದ ಬಳಿಕ ಅವರ ಪಾತ್ರ ಎಷ್ಟು ಮಹತ್ವದ್ದು ಎಂದು ಗೊತ್ತಾಗಿದೆ.
ಕ್ರಿಕೆಟರ್ ಆಗಿದ್ದ 'ಪೆದ್ದಿ'ಯನ್ನು ಕುಸ್ತಿ ಪೈಲ್ವಾನ್ ಆಗಿ ತಿದ್ದಿ ತೀಡುವ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಕೇಲವೇ ನಿಮಿಷಗಳು ತೆರೆಮೇಲೆ ಬಂದರೂ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತಹ ಪಾತ್ರ ಅದು. ಇನ್ನು ಪೆದ್ದಿ ಹಾಗೂ ಗೌರ್ನಾಯ್ಡು ಕಾಂಬಿನೇಷನ್ ಸನ್ನಿವೇಶಗಳು ಹೈಲೆಟ್ ಎನಿಸಿಕೊಂಡಿದೆ.

ಬುಚ್ಚಿಬಾಬು ಕಥೆ ಹೇಳಿದ ಕೂಡಲೇ ಶಿವಣ್ಣ ಇಷ್ಟಪಟ್ಟು ನಟಿಸೋಕೆ ಒಪ್ಪಿದ್ದರು. ಬಳಿಕ ಅವರಿಗೆ ಕ್ಯಾನ್ಸರ್ ಇರುವ ಸಂಗತಿ ಗೊತ್ತಾಗಿತ್ತು. ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಬೇಕಿತ್ತು. ಈ ವಿಚಾರವನ್ನು ಚಿತ್ರತಂಡಕ್ಕೆ ಹೇಳಿದ್ದರು. ಒಂದು ಹಂತದಲ್ಲಿ ಈ ಸಿನಿಮಾದಲ್ಲಿ ನಟಿಸೋದು ಬೇಡ ಎನ್ನುವ ಆಲೋಚನೆ ಕೂಡ ಬಂದಿತ್ತಂತೆ. ಇದೇ ಮಾತನ್ನು ಚಿತ್ರತಂಡಕ್ಕೆ ಹೇಳಿದಾಗ ಒಪ್ಪದೇ ನೀವೇ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಹಾಗಾಗಿ ಚಿಕಿತ್ಸೆ ಮುಗಿಸಿ ಬರುವವರೆಗೂ ಕಾದು ನಟಿಸಿದ್ದರು. ಈಗ ತೆಲುಗು ಪ್ರೇಕ್ಷಕರು ಶಿವಣ್ಣನ ನಟನೆಗೆ ಬಹುಪರಾಕ್ ಎನ್ನುತ್ತಿದ್ದಾರೆ.
ಶಿವಣ್ಣನ ಜೊತೆಗೆ ಮತ್ತೊಂದು ಕುಸ್ತಿ ಪೈಲ್ವಾನ್ ವೀರಭದ್ರ ಪಾತ್ರದಲ್ಲಿ ಕನ್ನಡ ನಟ ತಾರಕ್ ಪೊನ್ನಪ್ಪ ಮಿಂಚಿದ್ದಾರೆ. 'ಪುಷ್ಪ'-2 ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ತಾರಕ್ ನಟಿಸಿ ಗೆದ್ದಿದ್ದರು. ಅಲ್ಲಿ ಅವರ ನಟನೆ ನೋಡಿ ಬುಚ್ಚಿಬಾಬು ಈ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಅದನ್ನು ತಾರಕ್ ಸದ್ಬಳಕೆ ಮಾಡಿಕೊಂಡಿದ್ದಾರೆ. ರಾಮ್‌ಚರಣ್ ಜೊತೆಗೆ ಪೈಪೋಟಿಗೆ ಬೀಳುವ 'ಪೆದ್ದಿ' ಕಥೆಗೆ ದೊಡ್ಡ ಟ್ವಿಸ್ಟ್ ಕೊಡುವ ಪಾತ್ರ ಅದು. ಆ ಟ್ವಿಸ್ಟ್ ಏನು ಎನ್ನುವುದನ್ನು ತೆರೆಮೇಲೆ ನೋಡಬೇಕು. ಈ ಸಿನಿಮಾ ಮೂಲಕ ತಾರಕ್ ಪೊನ್ನಪ್ಪಗೆ ಮತ್ತಷ್ಟು ಅವಕಾಶಗಳು ಸಿಗುವುದರಲ್ಲಿ ಅನುಮಾನವಿಲ್ಲ.
ಕನ್ನಡದ ಮತ್ತಿಬ್ಬರು ಕಲಾವಿದರಾದ ನಂದ ಗೋಪಾಲ್ ಹಾಗೂ ಪ್ರಶಾಂತ್ ನಟನಾ ಕೂಡ ಚಿತ್ರದ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ 'ಪೆದ್ದಿ' ಚಿತ್ರದಲ್ಲಿ ಕನ್ನಡ ಕಲಾವಿದರ ದರ್ಬಾರ್ ಜೋರಾಗಿದೆ. ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಸಿನಿಮಾ ಭಾರೀ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ತೆರೆಗೆ ಬಂದಿದೆ. ಬಾಕ್ಸಾಫೀಸ್‌ನಲ್ಲಿ ಮುಂದೆ ಹೇಗೆಲ್ಲಾ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications