ಕನ್ನಡ ನಟಿಗೆ ಲೈಂಗಿಕ ಕಿರಕುಳ ಆರೋಪ ಪ್ರಕರಣ; ಕೊನೆಗೂ ಮೌನ ಮುರಿದ ನಟಿ
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ವಿರುದ್ಧ ಕನ್ನಡ ಸಿನಿಮಾ ನಟಿ ಲೈಂಗಿಕ ಕಿರಕುಳ ಆರೋಪ ಮಾಡಿರುವುದು ಗೊತ್ತೇಯಿದೆ. ಕಳೆದ ಮೂರ್ಲಾಲ್ಕು ದಿನಗಳಿಂದ ಈ ವಿಚಾರ ಬಾರಿ ಸದ್ದು ಮಾಡ್ತಿದೆ. ಪ್ರಕರಣ ಸಂಬಂಧ ಗೋವಿಂದರಾಜ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಜಾಮೀನಿನ ಮೇಲೆ ಆರೋಪಿ ಎ.ವಿ. ಆರ್ ಗ್ರೂಪ್ ವ್ಯವಸ್ಥಾಪಕನ ನಿರ್ದೇಶಕ ಅರವಿಂದ್ ವೆಂಕಟೇಶ್ ರೆಡ್ಡಿ ಹೊರ ಬಂದಿದ್ದಾರೆ. ಅಕ್ಟೋಬರ್ 10ರಂದು ನಟಿ ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ 78(2)
79, 352, 351(2), ರೆ/ವಿ 3(5) ಅಡಿ ಪ್ರಕರಣ ದಾಖಲಾಗಿದೆ.

ಇದೀಗ ಆ ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ಕಳೆದ ಕೆಲವು ದಿನಗಳು ನನಗೆ ತುಂಬಾ ಭಾರವಾಗಿದ್ದವು. ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ. ಪೊಲೀಸರ, ಕಾನೂನು, ಮಾಧ್ಯಮ ಮತ್ತು ಅನೇಕ ಜನರ ಬೆಂಬಲ ಸಿಕ್ಕಿದ್ದಕ್ಕೆ ನಾನು ಕೃತಜ್ಞೆ. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ. ಎಲ್ಲರೂ ನನ್ನನ್ನು ನಂಬಲೇಬೇಕು ಅಥವಾ ಬೆಂಬಲಿಸಲೇಬೇಕು ಅನ್ನೋ ನಿರೀಕ್ಷೆ ನನಗಿಲ್ಲ. ಆದ್ರೆ ಯಾರನ್ನಾದರೂ ಕೆಡವೋ, ಕೀಳು ಮಾತಾಡೋ ಹಕ್ಕು ಯಾರಿಗೂ ಇಲ್ಲ. ಸೋಶಿಯಲ್ ಮೀಡಿಯಾದ ದ್ವೇಷ ಬುಲ್ಲಿಯಿಂಗ್ ಎಲ್ಲರೂ ತಾಳಲು ಸಾಧ್ಯವಾಗುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ನನ್ನ ಸುರಕ್ಷತೆ, ನನ್ನ ಮನಶಾಂತಿ ಮತ್ತು ನನ್ನ ಬದುಕಿಗಾಗಿ ನಾನು ಮಾಡಬೇಕಾದುದನ್ನೇ ಮಾಡಿದ್ದೇನೆ. ನನ್ನ ಸತ್ಯದ ಮೇಲೆ ನಾನು ದೃಢವಾಗಿದ್ದೇನೆ. ನನ್ನ ಜೊತೆ ನಿಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು" ಎಂದು ಆಕೆ ಬರೆದುಕೊಂಡಿದ್ದಾರೆ. ಜಾಮೀನು ಪಡೆದು ಬಿಡುಗಡೆ ಆಗಿರುವ ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಆಕೆಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ವೆಂಕಟೇಶ್ ರೆಡ್ಡಿ ತಿರುಗೇಟು ನೀಡಿದ್ದಾರೆ. "ನನಗೆ 2023ರಲ್ಲಿ ಆಕೆ ಪರಿಚಯವಾಗಿದ್ದು. ಶ್ರೀಲಂಕಾದಲ್ಲಿ ನಡೆದ ಕ್ರಿಕೆಟ್ ಟೂರ್ನಿ ಉದ್ಘಾಟನೆ ಕಾರ್ಯಕ್ರಮಕ್ಕೆ ಡ್ಯಾನ್ಸ್ ಮಾಡಲು ಆ ನಟಿ ಬಂದಿದ್ರು. ಆಗ ಆಕೆಯ ಪರಿಚಯ ಆಗಿತ್ತು. ಬಳಿಕ ನಮ್ಮ ಸ್ನೇಹಿತರಿಗೂ ಹತ್ತಿರವಾಗಿದ್ದರು. ನಮ್ಮಿಬ್ಬರ ನಡುವೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದೆವು. ಇತ್ತೀಚೆಗೆ ಆಕೆ ಬೇರೆ ಹುಡುಗನ ಜೊತೆ ಇದ್ದಿದ್ದು ಗೊತ್ತಾಯ್ತು. ಅದನ್ನು ಕೇಳಿದ್ದಕ್ಕೆ ನನ್ನನ್ನು ದೂರ ಇಟ್ಟಳು. ನಾವಿಬ್ಬರು ದೂರಾದೆವು" ಎಂದಿದ್ದರು.
ಆಕೆಯ ಫೋಟೊಗಳನ್ನು ನಾನು ತಪ್ಪಾಗಿ ಬಿಂಬಿಸುತ್ತಿದ್ದೀನಿ ಎಂದು ಕಳೆದ ವರ್ಷ ಆರೋಪಿಸಿದ್ರು ಎಂದು ವೆಂಕಟೇಶ್ ರೆಡ್ಡಿ ತಿಳಿಸಿದ್ದಾರೆ. "ನಾವು ರಿಲೇಷನ್‌ಶಿಪ್‌ನಲ್ಲಿ ಇದ್ದಾಗ ಕ್ಲಿಕ್ಕಿಸಿದ ಫೋಟೊಗಳು. ಅದಕ್ಕೆ ಕೆಟ್ಟದ್ದು ಏನು ಇಲ್ಲ. ಆಕೆಯ ಅಭಿಮಾನಿಗಳು ಕೂಡ ಅದೇ ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಬಳಿಕ ನಾನು ಆಕೆಯ ಮನೆಗೆ ಸ್ನೇಹಿತರಿಗೆ ಲೆಟರ್, ಫೋಟೊಗಳನ್ನು ಕಳ್ಸಿರಬಹುದು ಎಂದು ಆರ್ ಆರ್ ನಗರ ಠಾಣೆಯಲ್ಲಿ ದೂರು ಕೊಟ್ಟಿದ್ರು. ಹಾಗಾಗಿ ಶ್ರೀಲಂಕಾದಿಂದ ಬೆಂಗಳೂರಿಗೆ ಬರುವಾಗ ಬಂಧಿಸಿದ್ರು" ಎಂದಿದ್ದರು.
ಆಕೆಗೆ ಪೋರ್ಷೆ ಕಾರ್ ಕೊಡಿಸಿದ್ದೆ. ಅವಳ ಮನೆಯ ಇಂಟೀರಿಯರ್‌ಗಾಗಿ ಸಾಕಷ್ಟು ಹಣ ಸಹಾಯ ಕೂಡ ಮಾಡಿದ್ದೆ. ಸೈಟ್ ಕೂಡ ರಿಜಿಸ್ಟರ್ ಮಾಡಿಸಿದ್ದೀನಿ. ಆಕೆಯ ಬೇರೆ ಹುಡುಗನ ಜೊತೆ ಇರುವುದನ್ನು ಕೇಳಿದ್ದಕ್ಕೆ ನಾನು ಯಾರಿಗೂ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಳು. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ, ಆಕೆ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಆಕೆಗೆ ಶಿಕ್ಷೆ ಆಗಲಿ" ಎಂದು ವೆಂಕಟೇಶ್ ವಿವರಿಸಿದ್ದರು.


Click it and Unblock the Notifications











