ರಾಮ ನವಮಿಯಂದು ರಾಮ ನಾಮ ಸ್ಮರಣೆ ಮಾಡಿದ ಚೈತ್ರಾ ಆಚಾರ್, ಮೆಚ್ಚಿಕೊಂಡ ರಮ್ಯಾ !
ಇವತ್ತು ಶ್ರೀರಾಮ ನವಮಿ.. ಚೈತ್ರಮಾಸದ ಒಂಬತ್ತನೇ ದಿನವಾದ ಇಂದು ರಾಮನ ಹುಟ್ಟುಹಬ್ಬ. ಭೂಮಿ, ಆಕಾಶ, ಬೆಟ್ಟ-ಗುಡ್ಡ, ಮರ-ಗಿಡ, ಪ್ರಾಣಿ-ಪಕ್ಷಿ ಹೀಗೆ ಯಾವುದನ್ನು ಬಿಡದೇ ಎಲ್ಲವನ್ನು ಬೆಳ್ಳಿಪರದೆ ಮೇಲೆ ತಂದು ತೋರಿಸುವ ಸಿನಿಮಾ ಮಂದಿ ರಾಮನ ಹೆಸರನ್ನು ಬಳಸಿಕೊಂಡು ಸಾಕಷ್ಟು ಹಾಡುಗಳನ್ನು ತೆರೆಗೆ ತಂದಿದ್ದಾರೆ. ದೇವರನ್ನು ರೀಲ್‌ನಲ್ಲಿ ಚಿತ್ರಿಸಿದ್ದಾರೆ. ಹಲವು ಚಿತ್ರಗಳಲ್ಲಿ ಹಾಡಿನುದ್ದಕ್ಕೂ ರಾಮ ಭಜನೆ ಸಾಗಿ ಬಂದಿದೆ.
ಹೀಗಿರುವಾಗ ಚೈತ್ರಾ ಆಚಾರ್ ಸುಮ್ಮನೆ ಇರಲು ಹೇಗೆ ಸಾಧ್ಯ ? ರಾಮನವಮಿಯ ಪ್ರಯುಕ್ತ ಚೈತ್ರಾ ಆಚಾರ್ ರಾಮನ ಸ್ಮರಣೆಯನ್ನು ಮಾಡಿದ್ಧಾರೆ. ತಮ್ಮ ಮಧುರ ಕಂಠದಿಂದ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಹೌದು, ಚೈತ್ರಾ ಆಚಾರ್, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಇವರಲ್ಲಿದೆ. ಇದಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಇತ್ತೀಚಿನ ಉದಾಹರಣೆ.

ಯಾರ ಬಳಿಯೂ ಅಭಿನಯದ ಅಕ್ಷರಾಭ್ಯಾಸ ಮಾಡದೇ, ಯಾವ ಗಾಡ್ ಫಾದರ್ ಸಹಾಯ ಇಲ್ಲದೇ, ಕನ್ನಡ ಚಿತ್ರರಂಗಕ್ಕೆ ಬಂದು ತನ್ನ ಕಾಲ ಮೇಲೆ ನಿಂತಿರುವ ಚೈತ್ರಾ ಆಚಾರ್ ಅತ್ಯುತ್ತಮ ನಾಯಕಿ ಮಾತ್ರವಲ್ಲ ಅತ್ಯುತ್ತಮ ಗಾಯಕಿ ಕೂಡ ಹೌದು. ಇದಕ್ಕೆ ಸೋಜುಗಾದ ಸೂಜಿ ಮಲ್ಲಿಗೆ ಹಾಡು ಅತ್ಯುತ್ತಮ ಸಾಕ್ಷಿ. 2021ರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜಿ ಮಲ್ಲಿಗೆ ಹಾಡಿಗೆ ಚೈತ್ರಾ ಧ್ವನಿಯಾಗಿದ್ದರು. ಇಷ್ಟೇ ಅಲ್ಲ ಸೈಮಾದಲ್ಲಿ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡಿದ್ದರು.
ಇಂಥಾ ಚೈತ್ರಾ ಆಚಾರ್ ಈಗ ರಾಮ ನವಮಿಯ ಪ್ರಯುಕ್ತ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ಹಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಚೈತ್ರಾ ಆಚಾರ್ ಅವರ ಈ ಹಾಡುಗಾರಿಕೆಗೆ ಅನೇಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಅಂದ್ಹಾಗೇ ಚೈತ್ರಾ ಆಚಾರ್ ಅವರನ್ನು ಕಂಡರೆ ಒಂದು ವರ್ಗ ಸದಾ ಕಾಲ ಕಿಡಿ ಕಾರುತ್ತಿರುತ್ತೆ. ಟ್ರೋಲ್ ಹೆಸರಿನಲ್ಲಿ ಅಶ್ಲೀಲ ಭಾಷೆಯನ್ನು ಬಳಸುತ್ತೆ. ಇವರೆಲ್ಲರ ಗಮನ ಚೈತ್ರಾ ಅವರ ಅಭಿನಯದ ಮೇಲಾಗಲಿ ಅವರಲ್ಲಿನ ಪ್ರತಿಭೆಯ ಮೇಲಾಗಲಿ ಇರುವುದಿಲ್ಲ. ಬದಲಿಗೆ ಚೈತ್ರಾ ಹಾಕಿಕೊಳ್ಳುವ ಉಡುಗೆ ತೊಡುಗೆಯ ಮೇಲಿರುತ್ತೆ. ಮಾತೆತ್ತಿದರೆ ಸಂಸ್ಕಾರ-ಸಂಪ್ರದಾಯ - ಆಚಾರ-ವಿಚಾರದ ಪಾಠವನ್ನು ಚೈತ್ರಾ ಅವರಿಗೆ ಈ ಗುಂಪು ಮಾಡುತ್ತೆ.
ಇನ್ನು, ದೇವರ ಹಾಡು ಹಾಡಿದರಂತೂ ಮುಗೀತು. ಇಂತಹ ಬಟ್ಟೆ ಹಾಕುತ್ತೀರಾ ಅದರ ಮೇಲೆ ದೇವರ ಹಾಡು ಹಾಡುತ್ತೀರಾ ನಾಚಿಕೆಯಾಗಲ್ವಾ ಎಂದೆಲ್ಲ ಈ ಬಣ ಕಿಡಿ ಕಾರಲು ಶುರು ಮಾಡುತ್ತೆ. ಚೈತ್ರಾ ಆಚಾರ್ ಅವರಿಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದರ ಅನುಭವ ಆಗಿದೆ ಕೂಡ. ಹೀಗಾಗಿಯೇ ಕಾಮೆಂಟ್ ಸೆಕ್ಷನ್ ಆಫ್ ಮಾಡಿ ಚೈತ್ರಾ ಈಗೀಗ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದ್ರಂತೆ ಈ ವಿಡಿಯೋವನ್ನು ಕೂಡ ಚೈತ್ರಾ ಹಂಚಿಕೊಂಡಿದ್ಧಾರೆ. ಕಾಮೆಂಟ್‌ಗಳನ್ನು ಸೀಮಿತಗೊಳಿಸಿದ್ದಾರೆ.
ಸದ್ಯ ಚೈತ್ರಾ ಹಾಡಿರುವ ಈ ಹಾಡನ್ನು ಅನೇಕರು ಮೆಚ್ಚಿಕೊಂಡು ಲೈಕ್ ಬಟನ್ ಒತ್ತಿದ್ದಾರೆ. ಆ ಪೈಕಿ ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ರಮ್ಯಾ ಕೂಡ ಒಬ್ಬರು ಎನ್ನುವುದು ವಿಶೇಷ. ಇನ್ನುಳಿದಂತೆಕನ್ನಡದ ಉತ್ತರಕಾಂಡ ಚಿತ್ರದಲ್ಲಿ ಅಭಿನಯಿಸುತ್ತಿರುವ ಚೈತ್ರಾ , ತಮಿಳಿನಲ್ಲಿ ಸಿದ್ಧಾರ್ಥ್ ಜೊತೆಗಿನ ಚಿತ್ರವಲ್ಲದೇ ಮತ್ತೊಂದು ಚಿತ್ರದಲ್ಲಿ ಕೂಡ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ಶಶಿಕುಮಾರ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.


Click it and Unblock the Notifications










