ಬೆಂಗಳೂರು: ರ್ಯಾಪಿಡೊ ಚಾಲಕನಿಂದ ನಟಿಗೆ ಲೈಂಗಿಕ ಕಿರುಕುಳ
ನಟಿ ಹಾಗೂ ಡಬ್ಬಿಂಗ್ ಕಲಾವಿದೆಯೊಬ್ಬರಿಗೆ ರ್ಯಾಪಿಡೊ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಕುಟುಂಬದೊಂದಿಗೆ ವಾಸವಿರುವ ನಟಿ ಹಾಗೂ ಡಬ್ಬಿಂಗ್ ಕಲಾವಿದೆಯೊಬ್ಬರು ಈ ಕೆಟ್ಟ ಅನುಭವ ಎದುರಿಸಿದ್ದು, ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದು ಹದಿನೈದು ದಿನಗಳಾಗಿದ್ದು, ತಡವಾಗಿ ವರದಿಯಾಗಿದೆ.
ಅಕ್ಟೋಬರ್ 30 ರಂದು ರಾತ್ರಿ 10:30ಕ್ಕೆ ನಟಿಯು ಹೆಣ್ಣೂರಿನಿಂದ ಮನೆಗೆ ತೆರಳಲು ರ್ಯಾಪಿಡೊ ಬುಕ್ ಮಾಡಿದ್ದಾರೆ. ಕೆಎ 51 ಎಚ್ 5965 ಸಂಖ್ಯೆಯ ರ್ಯಾಪಿಡೋ ಬೈಕ್ ಚಲಾಯಿಸಿಕೊಂಡು ಮಂಜುನಾಥ ತಿಪ್ಪೇಸ್ವಾಮಿ ಎಂಬಾತ ನಟಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡಿದ್ದಾನೆ.

ಬೈಕ್‌ನಲ್ಲಿ ಹೋಗುತ್ತಿರುವಾಗ ಹಿಂದೆ ಕೂತಿದ್ದ ನಟಿಯ ಎದೆ ಹಾಗೂ ತೊಡೆ ಭಾಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ. ಇದರಿಂದ ನಟಿ ಆತಂಕಗೊಂಡಿದ್ದಾರೆ. ಬಳಿಕ ಮನೆ ತಲುಪಿ ಕುಟುಂಬದವರೊಟ್ಟಿಗೆ ಸೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ಜೊತೆಗೆ ರ್ಯಾಪಿಡೊ ಸಂಸ್ಥೆಯ ಮೇಲೂ ನಟಿ ದೂರು ದಾಖಲಿಸಿದ್ದಾರೆ.
ಈ ಹಿಂದೆಯೂ ಬೆಂಗಳೂರಿನಲ್ಲಿ ಖಾಸಗಿ ಕ್ಯಾಬ್ ಸಂಸ್ಥೆಗಳು, ಬೈಕ್ ಸರ್ವೀಸ್ ಸೇವಾ ಸಂಸ್ಥೆಗಳಿಂದ ಮಹಿಳೆಯರಿಗೆ ಕಿರುಕುಳ ಆದ ಹಲವು ಉದಾಹರಣೆಗಳಿವೆ. ನಟಿ ಸಂಜನಾ ಗಲ್ರಾನಿ ಸಹ ಖಾಸಗಿ ಕ್ಯಾಬ್ ಸೇವಾ ಸಂಸ್ಥೆಯೊಂದರ ವಿರುದ್ಧ ಕ್ಯಾಬ್ ಚಾಲಕನೊಬ್ಬನ ವಿರುದ್ಧ ದೂರು ದಾಖಲಿಸಿದ್ದು ಸುದ್ದಿಯಾಗಿತ್ತು.


Click it and Unblock the Notifications