ಕಹಿ ಘಟನೆಯನ್ನು ಬಹಿರಂಗ ಪಡಿಸಿದ ನಟಿ ಫ್ಲೋರಾ ಸೈನಿ
ಕನ್ನಡ ಸಿನಿ ಪ್ರಿಯರಿಗೆ ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ ಪರಿಚಯ ಇದ್ದೇ ಇದೆ. 'ಕೋದಂಡರಾಮ', 'ಗಿರಿ', 'ನಮ್ಮಣ್ಣ', 'ಧಿಮಾಕು' ಸೇರಿದಂತೆ ಕೆಲ ಕನ್ನಡ ಚಿತ್ರಗಳಲ್ಲಿ ಫ್ಲೋರಾ ಸೈನಿ ಅಭಿನಯಿಸಿದ್ದಾರೆ.
ಸ್ಯಾಂಡಲ್ ವುಡ್ ಮಾತ್ರ ಅಲ್ಲ ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿಯೂ ಫ್ಲೋರಾ ಸೈನಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಆದ ಹಿಂದಿಯ 'ಸ್ತ್ರೀ' ಚಿತ್ರದಲ್ಲೂ ನಟಿಸಿದ್ದ ಫ್ಲೋರಾ ಸೈನಿ ಇದೀಗ ತಮ್ಮ ಬದುಕಿನ ಕಹಿ ಪುಟಗಳನ್ನು ತೆರೆದಿಟ್ಟಿದ್ದಾರೆ.
ಭಾರತದಾದ್ಯಂತ #ಮೀಟೂ ಅಭಿಯಾನ ಸದ್ದು ಸುದ್ದಿ ಮಾಡುತ್ತಿರುವಾಗಲೇ, ತಮ್ಮ ಜೀವನದಲ್ಲಿ ನಡೆದ ಘೋರ ಘಟನೆಯನ್ನ ಫ್ಲೋರಾ ಸೈನಿ ಫೇಸ್ ಬುಕ್ ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

2007 ರಲ್ಲಿ ನಡೆದ ಘಟನೆ
''ಆ ಫೋಟೋದಲ್ಲಿ ಇರುವುದು ನಾನೇ. 2007 ರ ವ್ಯಾಲೆಂಟೈನ್ಸ್ ಡೇ ದಿನ ಖ್ಯಾತ ನಿರ್ಮಾಪಕ ಗೌರಂಗ್ ದೋಷಿ ನನ್ನ ಮೇಲೆ ಹಲ್ಲೆ ನಡೆಸಿದ ಮೇಲೆ ತೆಗೆದ ಫೋಟೋ ಅದು. ಅಂದು ಗೌರಂಗ್ ನ ನಾನು ಪ್ರೀತಿಸುತ್ತಿದ್ದೆ. ಒಂದು ವರ್ಷ ನರಕ ಅನುಭವಿಸಿದೆ. ಅವತ್ತೇ ನಾನು ಈ ಘಟನೆ ಬಗ್ಗೆ ಮಾತನಾಡಿದ್ದರೆ, ಯಾರೂ ನನ್ನನ್ನು ನಂಬುತ್ತಿರಲಿಲ್ಲ. ಯಾಕಂದ್ರೆ, ಆತ ಅಷ್ಟು ಪ್ರಭಾವಿ, ನಾನು ಚಿತ್ರರಂಗಕ್ಕೆ ಹೊಸಬಳು'' - ಫ್ಲೋರಾ ಸೈನಿ, ನಟಿ

ಬೆದರಿಕೆ ಹಾಕಿದ್ದ.!
''ನನಗೆ ಸಿನಿಮಾ ಅವಕಾಶಗಳು ಸಿಗದಂತೆ ಮಾಡುವೆ ಎಂದು ಆತ ಅನೇಕ ಬಾರಿ ಬೆದರಿಕೆ ಹಾಕಿದ್ದ. ಕೆಲವು ಸಿನಿಮಾಗಳಲ್ಲಿ ನನ್ನ ಬದಲು ಬೇರೆ ನಟಿಯನ್ನ ಆಯ್ಕೆ ಮಾಡಿದ್ದೂ ಇದೆ. ಯಾರೂ ನನ್ನನ್ನ ಆಡಿಷನ್ ಗೂ ಕರೆಯುತ್ತಿರಲಿಲ್ಲ. ನಾನು ತಪ್ಪು ಮಾಡಿದೆ. ನಾನು ಸುಮ್ಮನೆ ಇರಬೇಕಿತ್ತು ಅಂತ ಎಷ್ಟೋ ಬಾರಿ ಅಂದುಕೊಂಡೆ'' - ಫ್ಲೋರಾ ಸೈನಿ, ನಟಿ

ನನ್ನ ತಪ್ಪಿಲ್ಲ
''ನನ್ನ ತಪ್ಪಿಲ್ಲದೇ ಇದ್ದರೂ ಗೌರಂಗ್ ದೋಷಿಯಿಂದ ನಾನು ದೌರ್ಜನ್ಯಕ್ಕೆ ಒಳಗಾದೆ. ನಾನು ಮಾತ್ರ ಅಲ್ಲ, ನನ್ನ ನಂತರ ಹಲವು ಹುಡುಗಿಯರು ಕೂಡ ಗೌರಂಗ್ ನಿಂದ ಕಿರುಕುಳ ಅನುಭವಿಸಿದರು. ಆದರೆ, ಯಾರೂ ಬಹಿರಂಗ ಪಡಿಸುವ ಧೈರ್ಯ ಹೊಂದಿರಲಿಲ್ಲ'' - ಫ್ಲೋರಾ ಸೈನಿ, ನಟಿ
ನನ್ನ ಸೂಪರ್ ಹೀರೋಗಳು
''ತಮ್ಮ ಮೇಲೆ ಆಗಿರುವ ದೌರ್ಜನ್ಯ, ಕಿರುಕುಳವನ್ನ ಹೊರಹಾಕುತ್ತಿರುವ ಎಲ್ಲಾ ಮಹಿಳೆಯರಿಗಾಗಿ ನಾನು ಈ ಪೋಸ್ಟ್ ಹಾಕುತ್ತಿದ್ದೇನೆ. ದೌರ್ಜನ್ಯ ಎಸಗಿರುವವರು ಮರೆತು ಹೋಗಿರಬಹುದು. ಆದ್ರೆ, ಕಿರುಕುಳ ಅನುಭವಿಸಿದವರಿಗೆ ಅದು ಸಾಧ್ಯವಿಲ್ಲ. ಇಂದು ಧೈರ್ಯದಿಂದ ಮಾತನಾಡುತ್ತಿರುವ ಹೆಣ್ಮಕ್ಕಳೇ ನನ್ನ ಸೂಪರ್ ಹೀರೋಗಳು'' ಅಂತಾರೆ ನಟಿ ಫ್ಲೋರಾ ಸೈನಿ


Click it and Unblock the Notifications











