"ದುರಾದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ"; ಹರ್ಷಿಕಾ
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಆರೋಪ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಈಗಾಗಲೇ ಅವರ ವಿರುದ್ಧ ದೂರುಗಳು ದಾಖಲಾಗುತ್ತಿದೆ. ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ, ಬೆದರಿಕೆ ಒಡ್ಡಿದ ಹಾಗೂ ಅಪಹರಣ ಪ್ರಕರಣಗಳು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸಿನಿಮಾ ತಾರೆಯರು ಸಹ ದನಿ ಎತ್ತಿದ್ದಾರೆ.
ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈಗಾಗಲೇ ಸರ್ಕಾರ SIT ತಂಡ ರಚಿಸಿದ್ದು ವಿಚಾರಣೆ ಆರಂಭವಾಗಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಈ ಅಶ್ಲೀಲ ವಿಡಿಯೋ ಪ್ರಕರಣ ಕೋಲಾಹಲಕ್ಕೆ ಕಾರಣವಾಗಿದೆ. ಜನ ಛಿ.. ಥೂ ಎಂದು ಮಾತನಾಡುವಂತಾಗಿದೆ.

ತಮಿಳು ನಟಿ ಕಸ್ತೂರಿ, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಆರೋಪ ಪ್ರಕರಣದ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ತೆಲುಗು ನಟಿ, ನಿರೂಪಕ ಪರೋಕ್ಷವಾಗಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದರು. ಖ್ಯಾತ ನಟ-ನಟಿಯರು ಈ ಬಗ್ಗೆ ಇನ್ನು ಮೌನವಾಗಿರುವ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಟಿ ಶ್ರುತಿ ಸೇರಿದಂತೆ ಪರಭಾಷಾ ತಾರೆಯರು ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಟ್ವಿಟರ್‌ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. "ದುರದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು" ಎಂದು ಹರ್ಷಿಕಾ ಆಗ್ರಹಿಸಿದ್ದಾರೆ.
"ಪಾಪ ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಬಗ್ಗೆ ನನಗೆ ಬಹಳ ನೋವಾಗುತ್ತಿದೆ. ಅವರೆಲ್ಲರೂ ಸಭ್ಯ ಮತ್ತು ಸಾಮಾನ್ಯ ಕುಟುಂಬದ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ" ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.
"ಕೊನೆಪಕ್ಷ ಅಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ. ಇನ್ನು ಮುಂದೆ ನಮ್ಮ ಜನ ಅವರನ್ನು ಯಾವ ದೃಷ್ಟಿಕೋನದಲ್ಲಿ ನೋಡಬಹುದು ಎಂದು ವಿವರಿಸಿ ಹೇಳಬೇಕಾಗಿಲ್ಲ. ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ? ಎಂದು ಹರ್ಷಿಕಾ ಕಳವಳ ವ್ಯಕ್ತಪಡಿಸಿದ್ದು ಆ ಮಹಿಳೆಯರು ಈಗ ಅನುಭವಿಸುತ್ತಿರುವ ಮಾನಸಿಕ ನೋವು ಎಂತಹದ್ದು ಎನ್ನುವುದನ್ನು ಆಲೋಚಿಸಿ ಎಂದು ಹರ್ಷಿಕಾ ಪ್ರಶ್ನಿಸಿದ್ದಾರೆ.
ಹರ್ಷಿಕಾ ಪೂಣಚ್ಚ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ನಾಪತ್ತೆ ಆಗಿರುವ ಪ್ರಜ್ವಲ್ ರೇವಣ್ಣ ಸದ್ಯಕ್ಕೆ ಎಲ್ಲಿದ್ದಾರೆ ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. ಎಸ್‌ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ಇನ್ನು ಪ್ರಜ್ವಲ್ ತಂದೆ ಮಾಚಿ ಸಚಿವ ಹೆಚ್.ಡಿ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ.


Click it and Unblock the Notifications










