ಕನ್ನಡದ ಬಾಲ ನಟಿಯಾಗಿ ಗೆದ್ದಿದ್ದ ನಟಿ ಈಗ IAS ಅಧಿಕಾರಿ; 5 ಬಾರಿ ಸೋತು ಗೆದ್ದಿದ್ದೇಗೆ?
ಸಿನಿಮಾಗಳಲ್ಲಿ ನಟ-ನಟಿಯರನ್ನು IAS ಅಧಿಕಾರಿಯಾಗಿ ನೋಡುತ್ತಿರುತ್ತೇವೆ. ಅವರನ್ನು ನೋಡಿ ಅದೆಷ್ಟೋ ಮಂದಿ ಸ್ಪೂರ್ತಿ ಪಡೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬಹುದು. ಅದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ, ಇತ್ತೀಚೆಗಷ್ಟೇ ತೆರೆಕಂಡಿದ್ದ ಬಾಲಿವುಡ್ ಸಿನಿಮಾ '12th ಫೇಲ್'. ಬಾಲಿವುಡ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದ ಸಿನಿಮಾವಿದು.
ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಮನೋಜ್ ಕುಮಾರ್ ಶರ್ಮಾ ಕಷ್ಟವನ್ನು ಎದುರಿಸಿ IPS ಅಧಿಕಾರಿಯಾಗಿದ್ದನ್ನು '12th ಫೇಲ್'ನಲ್ಲಿ ತೆರೆಮೇಲೆ ತರಲಾಗಿತ್ತು. ಈ ಸಿನಿಮಾ ದೇಶಾದ್ಯಂತ ಮೆಚ್ಚುಗೆ ಗಳಿಸಿತ್ತು. ಆದರೆ, ಸಿನಿಮಾದಲ್ಲಿ ನಟಿಸುತ್ತಿದ್ದವರೇ ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಹೇಗಿರುತ್ತೆ? ಇದೂ ಕನ್ನಡದ ನಟಿ ಈ ಸಾಧನೆ ಮಾಡಿದರೆ?

ಐಎಎಸ್ ಪರೀಕ್ಷೆಯನ್ನು ಕ್ಲಿಯರ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಮಾಡಬೇಕು. ಆದರೂ ಛಲ ಬಿಡದೆ ಕನ್ನಡದ ನಟಿಯೊಬ್ಬರು ಯುಪಿಎಸ್‌ಸಿ ಪರೀಕ್ಷೆ ಬರೆದು IAS ಅಧಿಕಾರಿಯಾಗಿದ್ದಾರೆ. ಅವರೇ ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ಎಚ್ ಎಸ್ ಕೀರ್ತನಾ. ಇವರ ಸಕ್ಸಸ್‌ಫುಲ್ ಸ್ಟೋರಿ ಇಲ್ಲಿದೆ.
ಕೀರ್ತನಾರನ್ನು ಕನ್ನಡದ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ನೋಡಿರುತ್ತೀರಿ. ರಮೇಶ್ ಅರವಿಂದ್, ಶಿವಣ್ಣ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. 'ಕರ್ಪೂರದ ಗೊಂಬೆ', 'ಗಂಗಾ ಯಮುನಾ', 'ಮುದ್ದಿನ ಅಳಿಯ', 'ಉಪೇಂದ್ರ', 'ಎ', 'ಕಾನೂರು ಹೆಗ್ಗಡತಿ', 'ಸರ್ಕಲ್ ಇನ್‌ಸ್ಪೆಕ್ಟರ್', 'ಓ ಮಲ್ಲಿಗೆ', 'ಲೇಡಿ ಕಮಿಷನರ್', 'ದೊರೆ', 'ಸಿಂಹಾದ್ರಿ', 'ಚಿಗುರು', 'ಪುಟಾಣಿ ಎಜೆಂಟ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು.
ಇಷ್ಟೊಂದು ಸಿನಿಮಾಗಳಲ್ಲಿ ನಟಿಸಿದ್ದ ಕೀರ್ತನಾ ಸಿನಿಮಾಗಳಲ್ಲಿಯೇ ಮುಂದುವರೆಯಬಹುದಿತ್ತು. ಆದರೆ, ಎಂಜಿನಿಯರಿಂಗ್ ಮುಗಿಸಿ ಸ್ಟಾಫ್ಟ್ ಇಂಜಿನಿಯರ್ ಆಗಿದ್ದರು. ಹಾಗೇ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದರು. ಸಿನಿಮಾಗಳಲ್ಲಿ ನಟಿಸುವಾಗ ಕೆಲವು ಪಾತ್ರಗಳು ಇವರನ್ನು ಕಾಡಿದ್ದವು. ಅಲ್ಲದೆ, ನ್ಯೂಸ್ ಪೇಪರ್‌ಗಳಲ್ಲಿ ಬರುತ್ತಿದ್ದ ರೈತರ ಆತ್ಮಹತ್ಯೆ ಸುದ್ದಿಗಳು ಇವರನ್ನು ವಿಚಲಿತಗೊಳಿಸಿದ್ದವು.

ಕೀರ್ತನಾ ಅವರ ತಂದೆಗೆ ಮಗಳು ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆಯಿತ್ತು. ಈ ಆಸೆಯನ್ನು ಪೂರೈಸುವುದಕ್ಕೆಂದು ಐಎಎಸ್ ಅಧಿಕಾರಿಯಲು ನಿರ್ಧರಿಸಿದ್ದರು. ಆದರೆ, ಐಎಎಸ್ ಅಧಿಕಾರಿಯಾಗುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಒಂದಲ್ಲ ಎರಡಲ್ಲ ಐದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೂ, ಉತ್ತೀರ್ಣಗಾಗಿರಲಿಲ್ಲ. ಆರನೇ ಬಾರಿಗೆ ಉತ್ತೀರ್ಣರಾದರು.
ಐಎಎಸ್ ಪರೀಕ್ಷೆಗೆ ತಯಾರಿ ನಡೆಸುವುದಕ್ಕೂ ಮುನ್ನ ಕೆಎಎಸ್‌ನಲ್ಲಿ ಉತ್ತೀರ್ಣರಾಗಿದ್ದರು. ಎರಡು ವರ್ಷ ಕೆಎಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಬಳಿಕ ಐಎಎಸ್ ಅಧಿಕಾರಿ ಆಗಲೇಬೇಕೆಂದು ನಿರ್ಧರಿಸಿ, ತಯಾರಿ ಆರಂಭಿಸಿದ್ದರು. 2013ರಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದಿದ್ದರು. 2020ರಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. 167ನೇ ರ್‍ಯಾಂಕ್ ಪಡೆದು, ಮಂಡ್ಯ ಜಿಲ್ಲೆಗೆ ಅಸಿಸ್ಟೆಂಟ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.


Click it and Unblock the Notifications











