ನಟಿ ಲಾಸ್ಯ ನಾಗರಾಜ್ ತಾಯಿಯ ಮೇಲೆ ಸ್ವಂತ ತಂಗಿಯಿಂದಲೇ ದೈಹಿಕ ಹಲ್ಲೆ
ಕನ್ನಡ ನಟಿ ಲಾಸ್ಯ ನಾಗರಾಜ್ ಮನೆಯಲ್ಲಿ ಇಲ್ಲದೇ ವೇಳೆ ಅವರ ತಾಯಿ ಮೇಲೆ ಹಲ್ಲೆ ನಡೆದಿದೆ. ಖುದ್ದು ಸಹೋದರಿ ಹಾಗೂ ಸಹೋದರಿಯ ಪತಿ ಲಾಸ್ಯ ಅವರ ತಾಯಿ ಡಾ. ಸುಧಾ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಲಾಸ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಸವೇಶ್ವರ ನಗರದಲ್ಲಿರೋ ನಿವಾಸದಲ್ಲಿ ಈ ಘಟನೆ ನಡೆದಿದೆ. ಡಾ.ಸುಧಾ ನಾಗರಾಜ್ ಅವರ ಮೇಲೆ ಸಹೋದರಿ ಮಂಗಳ ಶಶಿಧರ್ ಮತ್ತು ಅವರ ಪತಿ ಶಶಿಧರ್ ಹಲ್ಲೆ ಮಾಡಿದ್ದಾರೆ. ಡ್ಯಾನ್ಸ್ ಕ್ಲಾಸ್ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿದೆ. ಈ ವೇಳೆ ಸುಧಾ ಜೊತೆ ಮಂಗಳ ಕಿರಿಕ್ ತೆಗೆದಿದ್ದಾರೆ. ಒಂದೇ ಕಟ್ಟಡದ ಬೇರೆ ಬೇರೆ ಅಂತಸ್ತಿನಲ್ಲಿ ಅಕ್ಕ-ತಂಗಿ ಫ್ಯಾಮಿಲಿ ವಾಸಿಸುತ್ತಿದೆ.

ಕೆಳಮಹಡಿಯಲ್ಲಿ ಮಂಗಳ ಕುಟುಂಬ ವಾಸಿಸುತ್ತಿದೆ. ಮೇಲಿನ ಮಹಡಿಯಲ್ಲಿ ಲಾಸ್ಯ ನಾಗರಾಜ್ ಕುಟುಂಬ ಇದೆ. ಸುಧಾ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು ಗ್ರೌಂಡ್ ಫ್ಲೋರ್ ಪಾರ್ಕಿಂಗ್ ಜಾಗದಲ್ಲಿ ಡಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಸುಧಾ ಹಾಗೂ ಮಂಗಳ ಇಬ್ಬರ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು. ಮತ್ತೊಮ್ಮೆ ಜಗಳ ನಡೆದು ಇದೀಗ ಸುಧಾ ಮೇಲೆ ಮಂಗಳ ಹಾಗೂ ಅವರ ಪತಿ ಶಶಿಧರ್ ಹಲ್ಲೆ ನಡೆಸಿದ್ದಾರೆ.
"17 ವರ್ಷಗಳ ಹಿಂದೆ ಮನೆ ಕಟ್ಟಿದ್ದು. ಅಮ್ಮ ಕ್ಲಾಸಿಕಲ್ ಡ್ಯಾನ್ಸರ್ ಆಗಿರುವುದರಿಂದ ಪಾರ್ಕಿಂಗ್ ಜಾಗದಲ್ಲಿ ಕ್ಲಾಸ್ ನಡೆಸುತ್ತಿದ್ದರು. ಆದರೆ ಕಾರ್ ತೆಗೆಯಲು ಸಮಸ್ಯೆ ಅದು ಇದು ಅಂತೆಲ್ಲಾ ಕ್ಲಾಸ್ ನಡೆಸದಂತೆ ನಮ್ಮ ಚಿಕ್ಕಮ್ಮ ಗಲಾಟೆ ಮಾಡುತ್ತಿದ್ದರು. ಡ್ಯಾನ್ಸ್ ಕಲಿಯೋಕೆ ಬರುವ ಮಕ್ಕಳನ್ನು ಬೈಯುತ್ತಿದ್ದರು. ಟೆರೇಸ್ ಮೇಲೆ ಕ್ಲಾಸ್ ನಡೆಸೋಣ ಎಂದು ಕೊಂಡರೆ ಅದಕ್ಕೂ ಬಂದು ಗಲಾಟೆ ಮಾಡಿದ್ದಾರೆ" ಎಂದು ಲಾಸ್ಯ ನಾಗರಾಜ್ ನ್ಯೂಸ್18 ವಾಹಿನಿಗೆ ಮಾಹಿತಿ ನೀಡಿದ್ದಾರೆ.
"ನನಗೆ ತಂದೆ ಇಲ್ಲ. ಕೋವಿಡ್ ಸಮಯದಲ್ಲಿ ಅವರು ತೀರಿ ಹೋದರು. ಬಸವೇಶ್ವರ ನಗರದಲ್ಲಿರೋ ಮನೆಯಲ್ಲಿ ಅಮ್ಮ ಮಾತ್ರ ಇದ್ದಾರೆ. ನಾವು ಯಾರಾದರೂ ಇದ್ದಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲ. ನಾನು ಕೂಡಲೇ ಕೆನಡಾದಿಂದ ಭಾರತಕ್ಕೆ ಹೊರಟಿದ್ದೇನೆ. ಬೆಂಗಳೂರಿಗೆ ಬಂದ ಮೇಲೆ ದೂರು ನೀಡುತ್ತೇನೆ" ಎಂದು ಲಾಸ್ಯ ಮಾಹಿತಿ ನೀಡಿದ್ದಾರೆ.
ನಟಿ ಲಾಸ್ಯ ನಾಗರಾಜ್ ಸದ್ಯ ಕೆನಡಾದಲ್ಲಿದ್ದಾರೆ. ಮನೆಯಲ್ಲಿ ನಡೆದ ಗಲಾಟೆ ವಿಷಯ ಗೊತ್ತಾಗಿ ಆತಂಕಗೊಂಡಿದ್ದಾರೆ. ಮನೆ ಬಳಿ ನಡೆದ ಘಟನೆಯ ಸಿಸಿಟಿವಿ ಫುಟೇಜ್ ವೈರಲ್ ಆಗುತ್ತಿದೆ. ಅದರಲ್ಲಿ ಮಂಗಳಾ ಹಾಗೂ ಪತಿ ಶಶಿಧರ್ ಬಂದು ಡಾ. ಸುಧಾ ಅವರ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. 'ಅಸತೋಮ ಸದ್ಗಮಯ' ಚಿತ್ರದ ಮೂಲಕ ಲಾಸ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಮಂಗಳವಾರ ರಜಾದಿನ', 'ರಂಗನಾಯಕಿ', 'ದೃಶ್ಯ', 'ಲೈಫ್ ಈಸ್ ಬ್ಯೂಟಿಫುಲ್', 'ಹೋಮ್ ಮಿನಿಸ್ಟರ್', 'ಕೃಷ್ಣ ಟಾಕೀಸ್' ಹಾಗೂ 'ಶೋಕಿವಾಲ' ಚಿತ್ರಗಳಲ್ಲಿ ಆಕೆ ನಟಿಸಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್-5ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಲಾಸ್ಯ 20 ದಿನಗಳ ಕಾಲ ದೊಡ್ಮೆನೆ ಒಳಗಿದ್ದರು.
ಲಾಸ್ಯ ಕೆನಾಡದಲ್ಲಿ ಸಿನಿಮಾ ಮೇಕಿಂಗ್ ಹಾಗೂ ನಿರ್ದೇಶನದ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಬೇರೆ ಬೇರೆ ದೇಶದವರು ಅಲ್ಲಿ ಲಾಸ್ಯ ಜೊತೆ ಸಿನಿಮಾ ಮೇಕಿಂಗ್ ಬಗ್ಗೆ ಕಲಿಯುತ್ತಿದ್ದಾರೆ. ಕೆನಡಾದಲ್ಲಿ ಭಾರತೀಯ ಸಿನಿಮಾಗಳ ಬಗ್ಗೆ ಮುಖ್ಯವಾಗಿ ದಕ್ಷಿಣದ ಸಿನಿಮಾಗಳ ಕುರಿತು ಬಹಳ ಆಸಕ್ತಿ ಇದೆ. ಅವರೆಲ್ಲರ ಜೊತೆ ಕಲಿಯುತ್ತಿರುವುದು ಖುಷಿ ಕೊಟ್ಟಿದೆ ಎಂದು ಲಾಸ್ಯ ಹೇಳಿಕೊಂಡಿದ್ದರು. ಭರತನಾಟ್ಯ ಕಲಿತಿರುವ ಲಾಸ್ಯ ಕೆನಡಾದಲ್ಲಿ ಕೆಲ ಮಕ್ಕಳಿಗೆ ಅದನ್ನು ಕಲಿಸುತ್ತಿದ್ದಾರೆ.


Click it and Unblock the Notifications











