'ಮನ್ವಂತರ' ಧಾರಾವಾಹಿ ಸಮಯದಲ್ಲಿ ಗುರುಪ್ರಸಾದ್ ಹೇಗಿದ್ದರು ? ಆ ದಿನಗಳನ್ನು ನೆನೆದು ಭಾವುಕರಾದ ಮಾಳವಿಕಾ ಅವಿನಾಶ್..!
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಇದಕ್ಕೆ ಗುರುಪ್ರಸಾದ್ ಸದ್ಯದ ಉದಾಹರಣೆ.
ಹೌದು, ಹಿಂದೊಮ್ಮೆ ನಾವು ಕ್ಲಾಪ್ ಹೊಡಿಯೋದಲ್ಲ, ಜನ ಕ್ಲಾಪ್ ಹೊಡಿಬೇಕು ಅನ್ನೋ ಕಾಮನ್ ಸೆನ್ಸ್ ನಮಗಿದೆ ಎಂಬರ್ಥದಲ್ಲಿ ಮಾತನಾಡಿದ್ದ ಗುರು ಪ್ರಸಾದ್, ಈಗ ಎದ್ದು ನಡೆದಿದ್ದಾರೆ. ಬದುಕಿನ ಜಂಜಾಟಗಳಿಂದ ಬೇಸತ್ತು ಉಸಿರು ಚೆಲ್ಲಿದ್ದಾರೆ. ಸಹಜವಾಗಿ ಗುರು ಪ್ರಸಾದ್ ಅವರ ಈ ಸಾವು ಕನ್ನಡ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಯಾಕೆಂದರೆ ಗುರುಪ್ರಸಾದ್ ಪ್ರತಿಭಾವಂತ. ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡಕ್ಕೊಂದು ಆಸ್ಕರ್ ತರಬೇಕೆಂದು ಕನಸು ಕಂಡಿದ್ದವರು ಗುರುಪ್ರಸಾದ್.

ಇಂಥಾ ಗುರುಪ್ರಸಾದ್ ಹೀಗೆ ಕೊನೆಯುಸಿರೆಳೆಯುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಹೀಗಾಗಿಯೇ ದಿಗ್ಬ್ರಾಂತರಾಗಿರುವ ಅನೇಕರು ತಮ್ಮ ಮನದ ನೋವನ್ನು ಹೊರ ಹಾಕುತ್ತಿದ್ದಾರೆ. ಗುರು ಪ್ರಸಾದ್ ಜೊತೆಗಿದ್ದ ನೆನಪುಗಳನ್ನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಕನ್ನಡ ಚಿತ್ರರಂಗದ ಹಿರಿಯ ನಟಿ ಮಾಳವಿಕಾ ಅವಿನಾಶ್, ಏಕಾಂಗಿಯಾಗಿ ಗುರುಪ್ರಸಾದ್ ಬದುಕನ್ನು ಅಂತ್ಯ ಮಾಡಿಕೊಂಡಿರುವುದು ಬೇಜಾರಿನ ಸಂಗತಿ ಎಂದು ಭಾವುಕರಾಗಿದ್ದಾರೆ.
ಹೌದು, ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಮಾಳವಿಕಾ ಅವಿನಾಶ್,20 ವರ್ಷಗಳ ಹಿಂದೆ 'ಮನ್ವಂತರ' ಧಾರಾವಾಹಿಯಲ್ಲಿ ಗುರುಪ್ರಸಾದ್ ಜೊತೆ ಕೆಲಸ ಮಾಡುವಾಗ ಹೇಗಿದ್ದರು ಎನ್ನುವುದನ್ನು ನೆನಪು ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಇಷ್ಟೆಲ್ಲ ಆದರೂ ಕೂಡ ಅವರ ಕುಟುಂಬಸ್ಥರು ಅವರ ಜೊತೆ ಇಲ್ಲದಿರುವುದು ಕಂಡು ಆಶ್ಚರ್ಯ ಆಗುತ್ತಿದೆ ಎಂದು ಹೇಳಿರುವ ಮಾಳವಿಕಾ ಅವಿನಾಶ್, ಎಲ್ಲರಿಗೂ ಒಂದಿಲ್ಲೊಂದು ಕಷ್ಟಗಳಿರುತ್ತಾವೆ ಹಾಗೇ ಕಲಾವಿದರು ಕೂಡ ಯಾಕೆಂದರೆ ಅವರು ಕೂಡ ಮನುಷ್ಯರೇ ತಾನೇ ಎಂದು ಪ್ರಶ್ನೆ ಕೇಳಿದ್ದಾರೆ.
ಇನ್ನೂ ಗುರುಪ್ರಸಾದ್ ಎಲ್ಲರಿಗೂ ಬುದ್ದಿವಾದ ಹೇಳುತ್ತಿದ್ದರು. ತುಂಬಾನೇ ಓದಿಕೊಂಡಿದ್ದರು ಎಂದಿರುವ ಮಾಳವಿಕಾ ಅವಿನಾಶ್, ಪ್ರತಿಭಾವಂತ ವ್ಯಕ್ತಿ ಈ ತರಹದ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ. ಮನ್ವಂತರ ಧಾರಾವಹಿಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮನ್ವಂತರ ಧಾರಾವಾಹಿಗೆ ಗುರುಪ್ರಸಾದ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಎಂದಿರುವ ಮಾಳವಿಕಾ ಅವಿನಾಶ್ ಆಗೆಲ್ಲ ಗುರುಪ್ರಸಾದ್ ವಿಪರೀತ ಮಾತನಾಡುತ್ತಿದ್ದರು, ಸದಾ ಉತ್ಸಾಹದಿಂದ ಓಡಾಡಿಕೊಂಡು ಇರುತ್ತಿದ್ದರು ಎಂದು ಹೇಳಿದ್ದಾರೆ.
ಇನ್ನೂ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಸಾಲದ ಹೊರೆ ಕಾರಣವಾಗಿದ್ದರು ಆಗಿರಬಹುದು ಆದರೆ ಬದುಕಿಗಿಂತ ಯಾವ ಕಾರಣ ದೊಡ್ದಲ್ಲ ಎಂದಿರುವ ಮಾಳವಿಕಾ ಸೋಲನ್ನು ಯಾರು ಅನುಭವಿಸಿಲ್ಲ, ಸೋಲು-ಗೆಲುವು ಬದುಕಿನ ಒಂದು ಭಾಗ, ಸೋತವರು ಮತ್ತೆ ಗೆದ್ದು ಬಂದಿದ್ದು ಇದೆ ಯಾಕೆ ಹೀಗೆ ಮಾಡಿಕೊಂಡರು ಅನ್ನುವುದೇ ಅರ್ಥವಾಗುತ್ತಿಲ್ಲ ಇದು ನಿಜಕ್ಕೂ ನೋವಿನ ಸಂಗತಿ ಎಂದು ತಮ್ಮ ಮನದ ನೋವನ್ನು ಮಾಳವಿಕಾ ಅವಿನಾಶ್ ಹಂಚಿಕೊಂಡಿದ್ದಾರೆ.
ಮುಂದುವರೆದು ಈಗಲ್ಲ 20 ವರ್ಷಗಳ ಹಿಂದೆಯೇ ಅವರ ಬರವಣಿಗೆ ಚೆನ್ನಾಗಿತ್ತು ಎಂದಿರುವ ಮಾಳವಿಕಾ ಅವಿನಾಶ್ ಬದುಕಿನ ಆಗು-ಹೋಗುಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದ ವ್ಯಕ್ತಿ ಈ ತರ ಮಾಡಿಕೊಂಡಿರೋದು ಸರಿಯಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ಅವರ ಆತ್ಮಹತ್ಯೆಯ ನಿರ್ಧಾರವನ್ನು ಯಾಕೆ ಯಾರಿಂದ ಕೂಡ ತಪ್ಪಿಸೋಕೆ ಸಾಧ್ಯವಾಗಲಿಲ್ಲ ಎಂಬ ನೋವು ನನ್ನನ್ನೂ ಕಾಡುತ್ತಿದೆ ಎಂದಿದ್ದಾರೆ. 52 ಖಂಡಿತ ಸಾಯುವ ವಯಸ್ಸೇ ಅಲ್ಲ ಎಂದಿರುವ ಮಾಳವಿಕಾ ಅವಿನಾಶ್ ಅವತ್ತು ಯಾರಾದರೂ ಅವರ ಮನೆಗೆ ಹೋಗಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತೇನೋ ಎಂದು ಹೇಳಿದ್ದಾರೆ. ಗುರುಪ್ರಸಾದ್ ಅವರ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.


Click it and Unblock the Notifications











