Manvitha Kamath Marriage:ಮಾನ್ವಿತಾ ಕಾಮತ್ ದು ಲವ್ ಮ್ಯಾರೇಜಾ? ಅರೇಂಜಾ? ಸ್ಪಷ್ಟನೆ ಕೊಟ್ಟ ಟಗರು ಪುಟ್ಟಿ
ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಡಗರದಲ್ಲಿರೋದು ಟಗರು ಪುಟ್ಟಿ ಮಾನ್ವಿತಾ ಕಾಮತ್. ಗಾಂಧಿನಗರದ ಹಿರಿಯ ಕಿರಿಯರನ್ನೆಲ್ಲಾ ಭೇಟಿಯಾಗಿ ಮದುವೆ ಆಮಂತ್ರಣ ಕೊಡುತ್ತಿರೋ ಇವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೇಳ್ತಿರೋ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಂತಲೇ ಒಂದು ಪತ್ರಿಕಾಗೋಷ್ಟಿ ನಡೆಸಿದ್ದರು. "ಮಾನ್ವಿತಾ ಕಾಮತ್ ಅವರದ್ದು ಲವ್ ಮ್ಯಾರೇಜಾ? ಅಥವಾ ಅರೇಂಜಾ?" ಎನ್ನುವ ಅತಿ ದೊಡ್ಡ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಟ್ಟರು.
ಮಾನ್ವಿತಾ ಮದುವೆಯಾಗ್ತಿರುವ ಹುಡುಗನ ಹೆಸರು ಅರುಣ್ ಕುಮಾರ್. ಅರುಣ್ ಒಬ್ಬ ಐಟಿ ಪ್ರೊಫೆಶನಲ್ ಮತ್ತು ಮ್ಯೂಸಿಕ್ ಪ್ರೊಡ್ಯೂಸರ್. ಅವರಿಗೆ ಸಿನಿಮಾರಂಗದ ನಂಟಿಲ್ಲ, ಚಿತ್ರರಂಗಕ್ಕೆ ಬರೋ ಆಸಕ್ತಿ ಕೂಡಾ ಇಲ್ವಂತೆ. ಈ ಜೋಡಿ ಮುಂಬರುವ ಮೇ 1ನೇ ತಾರೀಖು ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದೆ.

ಮುದ್ದು ಮುಖದ ಈ ನಟಿ ತನ್ನ ಮದುವೆಯ ಗುಟ್ಟನ್ನು ಇಂದು ಸಂಪೂರ್ಣವಾಗಿ ಮಾಧ್ಯಮದ ಎದುರು ಬಿಚ್ಚಿಟ್ಟರು. ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎಂದರು. ಕೆಲ ತಿಂಗಳ ಹಿಂದೆ ತೀರಿಕೊಂಡ ತಮ್ಮ ತಾಯಿ ತನ್ನ ಮದುವೆ ವಿಚಾರ ಮಾತನಾಡಿದ್ದ ಕುಟುಂಬದ ಹುಡುಗ ಅರುಣ್. ಆತನನ್ನೇ ತಾನು ಮದುವೆಯಾಗ್ತಿದ್ದು, ಇದು ಲವ್ ಮ್ಯಾರೇಜ್ ಅಲ್ಲ ಎಂದು ನಟಿ ಮಾನ್ವಿತಾ ಕಾಮತ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಏಪ್ರಿಲ್ 29ರಂದು ಮೆಹೆಂದಿ, 30ಕ್ಕೆ ಅರಿಶಿನ ಶಾಸ್ತ್ರ ಮತ್ತು ಮೇ 1ಕ್ಕೆ ಮದುವೆ ನಡೆಯಲಿದೆ. ಇನ್ನು ಮದುವೆಯ ನಂತರ ಅನೇಕ ನಟನಟಿಯರು ಚಿತ್ರರಂಗದಿಂದ ನಟನೆಯಿಂದ ದೂರವಿರುತ್ತಾರೆ. ಈ ಬಗ್ಗೆ ನಿಮ್ಮ ಫ್ಯೂಚರ್ ಪ್ಲಾನ್ ಏನು? ಎಂದಿದ್ದಕ್ಕೆ "ನಾನು ಮದುವೆಯ ನಂತರ ನಟನೆ ಮುಂದುವರೆಸುವುದಾಗಿ ಮಾನ್ವಿತಾ ತಿಳಿಸಿದ್ದಾರೆ. ನನ್ನ ಪ್ರೊಫೆಶನಲ್ ಮತ್ತು ಪರ್ಸನಲ್ ಲೈಫನ್ನು ಬೇರೆಯಾಗಿ ಇಡುತ್ತೇನೆ. ಚಿತ್ರರಂಗದಿಂದ ದೂರವಿರುವುದಿಲ್ಲ. ಅರುಣ್‌ಗೂ ಇದು ಒಪ್ಪಿಗೆ ಇದೆ" ಎಂದು ತಿಳಿಸಿದ್ದಾರೆ.
ಮಾನ್ವಿತಾ ಮದುವೆಯಾಗುತ್ತಿರುವ ಯುವಕ ಅರುಣ್ ಕುಮಾರ್ ಮೈಸೂರಿನವರು. ಮದುವೆ ಯಾಕೆ ಕಳಸದಲ್ಲಿ ಆಗ್ತಿದ್ದೀರಾ ಅಂದಿದ್ದಕ್ಕೆ ಮಾನ್ವಿತಾ ತನ್ನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು. ನಾನು ಹತ್ತನೇ ತರಗತಿವರಗೆ ಕಳಸದಲ್ಲೇ ಕಲಿತದ್ದು. ಈ ಊರಿನೊಂದಿಗೆ ನನಗೆ ನಂಟಿದೆ, ಅಪ್ಪ- ಅಮ್ಮನ ಜೊತೆ ಇಲ್ಲೇ ವಾಸವಿದ್ದೆ. ಹಾಗಾಗಿ ಮದುವೆ ಇಲ್ಲೇ ಆಗುವುದರ ಬಗ್ಗೆ ಅರುಣ್ ಮತ್ತು ಅವರ ಪೋಷಕರಿಗೆ ತಿಳಿಸಿದಾಗ ಅವರು ಖುಷಿಯಿಂದಲೇ ಒಪ್ಪಿದರು. ಇನ್ನು ಮದುವೆಯಾಗುತ್ತಿರುವ ಸ್ಥಳ, 500 ವರ್ಷದ ಇತಿಹಾಸ ಇರುವ ವೆಂಕಟಮಣ ಸ್ವಾಮಿ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿದೆ. ಮೇ 1 ಆ ದೇವಸ್ಥಾನದಲ್ಲಿ ವಿಶಿಷ್ಟ ಪೂಜೆ ನಡೆಯುವ ದಿನ, ಅಂದೇ ಮದುವೆ ನಡೆಯುತ್ತಿದೆ.
ಕೊಂಕಣಿ ಸಂಪ್ರದಾಯದಲ್ಲಿ ಫೂಲ್ ಮುದ್ದಿ ಎನ್ನುವ ಸಮಾರಂಭವಿದೆ. ಫೂಲ್ ಎಂದರೆ ಹೂವು, ಮುದ್ದಿ ಎಂದರೆ ಉಂಗುರ. ಇದೊಂದು ಕಾರ್ಯಕ್ರಮ ಮದುವೆಯ ಹಿಂದಿನ ದಿನ ನಡೆಯುತ್ತದೆ. ಕಳಸದ ಬಳಿಯಿರುವ ಬೈನೆಕಾಡು ಹೋಮ್ ಸ್ಟೇನಲ್ಲಿ ಮೆಹಂದಿ ಮತ್ತು ಹಳದಿ ಶಾಸ್ತ್ರ ನಡೆಯಲಿದೆ ಎಂದು ಮಾನ್ವಿತಾ ತಮ್ಮ ಮದುವೆ ಸಮಾರಂಭದ ವಿವರಗಳನ್ನು ಬಿಚ್ಚಿಟ್ಟರು.
ಇನ್ನು ಮದುಮಗ ಅರುಣ್ ಚಿತ್ರರಂಗದಲ್ಲಿ ಇರದೇ ಇದ್ದರೂ ಚಿತ್ರರಂಗಕ್ಕೆ ಲಿಂಕ್ ಇದೆ. ಮೈಸೂರಿನ ಅರುಣ್ ತಂದೆ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಂದೆ ಹಿರಿಯ ನಟ ತೂಗುದೀಪ ಶ್ರೀನಿವಾಸ್ ಮೈಸೂರಿನಲ್ಲಿ ಉತ್ತಮ ಒಡನಾಟ ಹೊಂದಿದ್ದರು. ದರ್ಶನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆದ ನಂತರ ಸಂಪರ್ಕ ಕಡಿದು ಹೋಯ್ತು. ಆದರೆ ಅವರನ್ನು ಮದುವೆಗೆ ಕರೆಯಲು ಅನೇಕ ದಿನಗಳಿಂದ ಪ್ರಯತ್ನಿಸ್ತಾ ಇದ್ದೇವೆ, ಅವರು ಎಲೆಕ್ಷನ್ ಬ್ಯುಸಿಯಲ್ಲಿದ್ದರು ಎಂದು ಮಾನ್ವಿತಾ ತಿಳಿಸಿದ್ದಾರೆ.
ಯುವ ದಸರಾ ಕಾರ್ಯಕ್ರಮದಲ್ಲಿ ಮಾನ್ವಿತಾ ಕಾಮತ್ ನೃತ್ಯ ಪ್ರದರ್ಶನ ನೀಡಿದ್ದರು. ಆ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡುತ್ತಾ ನಾನು ಮೈಸೂರಿನ ಹುಡುಗನನ್ನೇ ಮದುವೆಯಾಗ್ತೀನಿ ಎಂದಿದ್ದರಂತೆ. ಕೊನೆಗೆ ವಿಧಿಯೇ ನಿರ್ಧರಿಸಿದಂತೆ ಮೈಸೂರಿನ ಅರುಣ್ ಕುಮಾರ್ ನ್ನೇ ಮದುವೆಯಾಗುತ್ತಿದ್ದಾರೆ.
ಒಟ್ನಲ್ಲಿ ಟಗರು ಪುಟ್ಟಿ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ಮುದ್ದಾದ ಈ ಜೋಡಿ ಹೊಸಜೀವನದ ಹೊಸ್ತಿಲಲ್ಲಿದ್ದಾರೆ. ಇವರ ಸಂತೋಷ ಮತ್ತಷ್ಟು ಹೆಚ್ಚಾಗಲಿ ಎನ್ನುವುದೇ ಎಲ್ಲರ ಹಾರೈಕೆ.


Click it and Unblock the Notifications











