ಬೆಂಗಳೂರಿನ ಕೋರ್ಟ್ ಎದುರು ನಟಿ ರಮ್ಯಾ ದಿಢೀರ್ ಪ್ರತ್ಯಕ್ಷ!
ನಟಿ ರಮ್ಯಾ ಇದ್ದಕ್ಕಿದ್ದಂತೆ ಕಣ್ಮರೆ ಆಗಿಬಿಡುತ್ತಾರೆ. ದಿಢೀರನೆ ಮತ್ತೆ ಕಾಣಿಸಿಕೊಳ್ಳುತ್ತಾರೆ. ಮಂಡ್ಯದಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದ ರಮ್ಯಾ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ವಿದೇಶಕ್ಕೆ ತೆರಳಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಇದೀಗ ದಿಢೀರನೆ ಬೆಂಗಳೂರಿನ ನ್ಯಾಯಾಲಯದ ಎದುರು ಪ್ರತ್ಯಕ್ಷ ಆಗಿದ್ದಾರೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ವಿರುದ್ಧ ನಟಿ ರಮ್ಯಾ ಹಿಂದೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆಗಾಗಿ ಇಂದು(ಜನವರಿ 7) ರಮ್ಯಾ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ಬಹಳ ವರ್ಷಗಳ ಬಳಿಕ ರಮ್ಯಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಬಳಿಕ ಚಿತ್ರದ ಭಾಗವಾಗಿರಲು ನಿರಾಕರಿಸಿದ್ದರು.

ತಾವು ನಟಿಸಿರುವ ದೃಶ್ಯಗಳನ್ನು ಕತ್ತರಿಸಿ ಸಿನಿಮಾ ಬಿಡುಗಡೆ ಮಾಡುವಂತೆ ರಮ್ಯಾ ಚಿತ್ರತಂಡಕ್ಕೆ ಹೇಳಿದ್ದರಂತೆ. ಅದಕ್ಕೆ ನಿರ್ಮಾಪಕರು ಒಪ್ಪಿಕೊಂಡಿದ್ದರು. ಆದರೆ ಬಳಿಕ ಚಿತ್ರದ ಟ್ರೈಲರ್‌ನಲ್ಲಿ ರಮ್ಯಾ ಇರುವ ದೃಶ್ಯಗಳನ್ನು ಬಳಸಿಕೊಳ್ಳಲಾಗಿತ್ತು. ರಮ್ಯಾ ಕಂಬ್ಯಾಕ್ ಸಿನಿಮಾ ಎಂದು ಪ್ರಚಾರ ಮಾಡಲಾಗಿತ್ತು. ಇದು ಆಕೆಯ ಅಸಮಾಧಾನಕ್ಕೆ ಕಾರಣವಾಗಿತ್ತು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ತಾವೇ ಒಪ್ಪಿ ಸಿನಿಮಾದಲ್ಲಿ ನಟಿಸಿದ್ದ ರಮ್ಯಾ ಕೊನೆಗೆ ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದರು ಅಚ್ಚರಿ ಮೂಡಿಸಿತ್ತು. ಆದರೆ ಕೋರ್ಟ್ ಸಿನಿಮಾ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿತ್ತು. ಆದರೆ ರಮ್ಯಾ ಅವರ ವಿರುದ್ಧ ತೀರ್ಪು ಬಂದಿರಲಿಲ್ಲ. 50 ಲಕ್ಷ ರೂ. ಡೆಪಾಸಿಟ್ ಇಟ್ಟು ಸಿನಿಮಾ ಬಿಡುಗಡೆಗೆ ಅವಕಾಶ ನೀಡಿತ್ತು.
ಕಡೆ ಕ್ಷಣದಲ್ಲಿ ರಮ್ಯಾ ಅವರು ನಟಿಸಿದ್ದ ಭಾಗವನ್ನು ಕತ್ತರಿಸಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಹಿಂದೇಟು ಹಾಕಿತ್ತು. ರಮ್ಯಾ ಅವರು ತಮ್ಮ ಭಾಗದ ದೃಶ್ಯಗಳನ್ನು ಕತ್ತರಿಸಬೇಕು ಎಂದಾಗ ಅದಕ್ಕೆ ಒಪ್ಪಿದ್ದ ಚಿತ್ರತಂಡ ಬಳಿಕ ಉಲ್ಟಾ ಹೊಡೆದಿತ್ತು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಆದರೆ ಅಷ್ಟರಲ್ಲಿ ಸಿನಿಮಾ ಸೆನ್ಸಾರ್ ಮುಗಿದಿತ್ತು. ಸಿನಿಮಾ ಬಿಡುಗಡೆ ತಡವಾಗದೇ ನಷ್ಟವಾಗುತ್ತದೆ ಎಂದು ಭಾವಿಸಿ ಸಿನಿಮಾ ಬಿಡುಗಡೆಗೆ ಸಮ್ಮತಿಸಿತ್ತು.
2023 ಜುಲೈ 21ರಂದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿತ್ತು. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಚಿತ್ರದಲ್ಲಿ ಹೊಸ ಕಲಾವಿದರೇ ದಂಡೇ ನಟಿಸಿತ್ತು. ವರುಣ್, ಪ್ರಜ್ವಲ್, ಅರವಿಂದ್ ಹಾಗೂ ನಿತಿನ್ ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಮ್ಯಾ ತಮ್ಮ ಕಂಬ್ಯಾಕ್ ಚಿತ್ರವಾಗಿ ಇದನ್ನು ಒಪ್ಪಿಕೊಳ್ಳಲಿಲ್ಲ, ಮೊದಲಿಗೆ ಒಪ್ಪಿ ನಟಿಸಿದರೂ ಬಳಿಕ ಆ ದೃಶ್ಯಗಳನ್ನು ತೆಗೆಸಲು ಪ್ರಯತ್ನಿಸಿದಂತೆ ಕಂಡುಬಂದಿತ್ತು.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದು ಮಾತ್ರವಲ್ಲ 1 ಕೋಟಿ ರೂ. ಪರಿಹಾರ ಕೇಳಿ ರಮ್ಯಾ ದೂರು ದಾಖಲಿಸಿದ್ದರು. ತಮ್ಮ ಅನುಮತಿ ಇಲ್ಲದೇ ಟ್ರೈಲರ್ ಹಾಗೂ ಸಿನಿಮಾದಲ್ಲಿ ತಾವು ನಟಿಸಿದ್ದ ದೃಶ್ಯಗಳನ್ನು ಬಳಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬರೀ ಪ್ರೋಮೊ ಶೂಟ್ ಮಾಡಲು ಒಪ್ಪಿದ್ದೆ ಆದರೆ ಟ್ರೈಲರ್ ಹಾಗೂ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ಚಕಾರ ಎತ್ತಿದ್ದರು.
ಪ್ರಕರಣದ ಸಂಬಂಧ ದಾಖಲೆ ಸಮೇತ ನಟಿ ರಮ್ಯಾ ಇಂದು ಕೋರ್ಟ್‌ಗೆ ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಸಿನಿಮಾದಲ್ಲಿ ನೀವು ನಟಿಸಿರುವ ದೃಶ್ಯಗಳ ಬಳಸುವುದಿಲ್ಲ ಎಂದು ಚಿತ್ರದ ನಿರ್ಮಾಪಕ, ನಿರ್ದೇಶಕರು ಮಾತು ಕೊಟ್ಟಿದ್ದರು. ಆ ಬಗ್ಗೆ ವಾಟ್ಸಪ್ ಚಾಟ್ ನಡೆದಿತ್ತು ಎನ್ನಲಾಗ್ತಿದೆ. ಇದೇ ದಾಖಲೆಗಳನ್ನು ರಮ್ಯಾ ಕೋರ್ಟ್ ಮುಂದೆ ಇಟ್ಟಿದ್ದಾರಾ? ಎನ್ನುವ ಬಗ್ಗೆ ಮಾಹಿತಿ ಸಿಗಬೇಕಿದೆ.


Click it and Unblock the Notifications











