ಭಾವಿ ಪತಿಯನ್ನು ಭೇಟಿ ಮಾಡದೇ ಮದುವೆಗೆ ನಟಿ ರೂಪಿಕಾ ಒಪ್ಪಿಗೆ; ಕೆನಡಾದಲ್ಲಿ ಹೊಸ ಜೀವನ
ಕನ್ನಡ ನಟಿ ರೂಪಿಕಾ ಮದುವೆ ಫಿಕ್ಸ್ ಆಗಿದೆ. ಕೆನಡಾದ ಇನ್ವೆಸ್ಕೋ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿರುವ ಅಂಕಿತ್ ಎಂಬುವವರ ಜೊತೆ ಆಗಸ್ಟ್‌ನಲ್ಲಿ ಮದುವೆ ನಡೆಯಲಿದೆ. ಅಚ್ಚರಿ ಅಂದರೆ ಈವರೆಗೆ ಅಂಕಿತ್ ಅವರನ್ನು ರೂಪಿಕಾ ಭೇಟಿ ಮಾಡಿಲ್ಲ. ವೀಡಿಯೋ ಕಾಲ್‌ನಲ್ಲೇ ಇತ್ತೀಚೆಗೆ ತಾಂಬೂಲ ಶಾಸ್ತ್ರ ಸಹ ನಡೆದಿತ್ತು.
ತಮ್ಮ ಅಪರೂಪದ ಮದುವೆ ಕಥೆಯನ್ನು ಮಾಧ್ಯಮಗಳ ಜೊತೆ ನಟಿ ರೂಪಿಕಾ ಹಂಚಿಕೊಂಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರೂಪಿಕಾ ಬಳಿಕ ನಾಯಕಿಯಾಗಿದ್ದರು. ಸದ್ಯ ಕಿರುತೆರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ರೂಪಿಕಾ ಭಾವಿ ಪತಿ ಅಂಕಿತ್ ಕೆನಡಾದಲ್ಲಿ ನೆಲೆಸಿದ್ದಾರೆ. ಮದುವೆಗೆ ಒಂದು ವಾರ ಇರುವಂತೆ ಬೆಂಗಳೂರಿಗೆ ಬರಲಿದ್ದಾರೆ. ಅದೇ ಸಮಯದಲ್ಲಿ ಮೊದಲ ಬಾರಿ ಇಬ್ಬರೂ ಭೇಟಿ ಆಗಲಿದ್ದಾರೆ.

ಅಂದಹಾಗೆ ರೂಪಿಕಾಗೆ ದೂರದ ಸಂಬಂಧಿ ಅಂಕಿತ್. 10 ವರ್ಷಗಳ ಹಿಂದೆ ಒಂದೆರಡು ಕಾರ್ಯಕ್ರಮಗಳಲ್ಲಿ ಇಬ್ಬರೂ ಭಾಗವಹಿಸಿದ್ದರು. ಆಗ ಮದುವೆ ಆಗುವ ಯಾವುದೇ ಆಲೋಚನೆ ಇರಲಿಲ್ಲ. ಹಾಯ್ ಬಾಯ್ ಎಂದು ಮಾತನಾಡಿದ್ದು ಬಿಟ್ಟರೆ ಹೆಚ್ಚು ಮಾತು ಇರಲಿಲ್ಲ. ಇದೀಗ ಮದುವೆ ನಿಶ್ಚಯವಾಗಿದೆ. ವೀಡಿಯೋ ಕಾಲ್‌ನಲ್ಲಿ ಮಾತನಾಡಿರುವುದು ಬಿಟ್ಟರೆ ರೂಪಿಕಾ ಹಾಗೂ ಅಂಕಿತ್ ಭೇಟಿ ಆಗಿಲ್ಲ.
ಅಜ್ಜಿ- ತಾತನ ಕಾಲದಲ್ಲಿ ಮದುವೆ ಮಂಟಪದಲ್ಲೇ ಹುಡುಗ- ಹುಡುಗಿ ಒಬ್ಬರನ್ನು ಒಬ್ಬರು ನೋಡುತ್ತಿದ್ದರು. ಅದೇ ರೀತಿ ಮದುವೆ ಸಮಯದಲ್ಲೇ ನಮ್ಮಿಬ್ಬರ ಮೊದಲ ಭೇಟಿ ಆಗಲಿದೆ ಎಂದು ನಟಿ ರೂಪಿಕಾ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. "ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದೀವಿ. ಅದು ಬಿಟ್ಟರೆ ಭೇಟಿ ಆಗಿಲ್ಲ. ಸಂಬಂಧಿಕರು ಎಂದು ಹೇಳ್ತೀರಾ ಎಂದು ಕೆಲವರು ಕೇಳ್ತಾರೆ. ಅವ್ರು ಕೆನಡಾಗೆ ಹೋಗಿ 5 ವರ್ಷ ಆಯ್ತು. ಅವ್ರ ಪೋಷಕರನ್ನು ಆಗಾಗ್ಗೆ ಫ್ಯಾಮಿಲಿ ಫಂಕ್ಷನ್‌ಗಳಲ್ಲಿ ನೋಡಿದ್ದೀನಿ. ಮಾತನಾಡಿಸಿದ್ದೀನಿ. ಆಗ ಮದುವೆ ಮಾತು ಬಂದಿರಲಿಲ್ಲ. ಅಂಕಿತ್ ಅವರನ್ನು ನೋಡಿ 10 ವರ್ಷ ಆಗಿದೆ. ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದೀವಿ. ಎಲ್ಲವೂ ಚೆನ್ನಾಗಿದೆ ಅನ್ನಿಸಿದೆ" ಎಂದಿದ್ದಾರೆ.
ಮದುವೆಗೆ ಒಂದು ವಾರಕ್ಕೆ ಮುನ್ನ ಬೆಂಗಳೂರಿಗೆ ಬರ್ತಾರೆ.. ಅದೇ ಸಮಯದಲ್ಲಿ ಭೇಟಿ ಎಂದು ರೂಪಿಕಾ ತಿಳಿಸಿದ್ದಾರೆ. "10 ವರ್ಷಗಳ ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಅಂಕಿತ್ ಭೇಟಿ ಆಗಿದ್ದು. ಅದ್ಯಾವುದು ನೆನಪಿಲ್ಲ. ಇಲ್ಲಿ ಇದ್ದಿದ್ರೆ ಆಗಾಗ್ಗೆ ಭೇಟಿ ಮಾಡ್ತಿದ್ವಿ. ಇನ್ನು ಹೆಚ್ಚು ಅರ್ಥ ಮಾಡಿಕೊಳ್ತಿದ್ವಿ. ಆದ್ರೆ ಇದು ಬೇರೆಯದೇ ರೀತಿಯ ಕಥೆ. ಮದುವೆ ಬರ್ತಾರೆ. ಮದುವೆ ನಂತರ ಎಲ್ಲಾ ಸೆಟ್ ಆದ್ರೆ ನಾನು ಅವರೊಟ್ಟಿಗೆ ಕೆನಡಾಗೆ ಹೋಗ್ತೀನಿ. ಅಲ್ಲಿ ಹೊಸ ಜೀವನ ಶುರುವಾಗಲಿದೆ. ನಂಬಿಕೆ ಮೇಲೆ ಜೀವನ ನಡೆಯುತ್ತದೆ. ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ" ಎಂದು ವಿವರಿಸಿದ್ದಾರೆ.
ನನಗೆ ಅಚ್ಚರಿ ಅನ್ನಿಸಿದ್ದು ಅಂಕಿತ್ ಹೈಟ್.. ನಾನು ಬಹಳ ಹೈಟ್ ಇರುವ ಹುಡುಗನನ್ನು ಮದುವೆ ಮಾಡಿಕೊಳ್ಳಬೇಕು ಎಂದು ಬಯಸಿದ್ದೆ. ಕಾರಣ ನಾನು ಕುಳ್ಳಗಿದ್ದೀನಿ, ಅವ್ರು ಹೈಟ್ ಇದ್ರೆ ಚೆನ್ನಾಗಿರುತ್ತೆ ಅನ್ನಸಿತ್ತು. ನಾನು 5.3 ಇದ್ದೀನಿ, ಅವ್ರು 6.3 ಇದ್ದಾರೆ. ಬಹಳ ಹೈಟ್ ಇದ್ದಾರೆ. ಕ್ಯೂಟ್ ಪೇರ್ ಅನ್ನಿಸುತ್ತೆ. ನಾನು ಬೆಳಗ್ಗೆ ಎದ್ದು ತಿಂಡಿ ತಿಂದ್ರೆ, ಅವ್ರು ಅಲ್ಲಿ ಊಟ ಮಾಡಿ ಮಲಗಿಕೊಳ್ತಾರೆ. ಸಖತ್ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ. ಬಟ್ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ತಿದ್ದೀವಿ ಎಂದು ರೂಪಿಕಾ ಹೇಳಿದ್ದಾರೆ. ತೀರ್ಥರೂಪ, ಮಾಯದಂಥ ಮಳೆ, ಬೀರ, ಥರ್ಡ್‌ಕ್ಲಾಸ್, ರುದ್ರಾಕ್ಷಿಪುರ ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಸದ್ಯ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.


Click it and Unblock the Notifications