ಅಪರೂಪದ ದಾಖಲೆ ಬರೆದ ರುಕ್ಮಿಣಿ ವಸಂತ್...!
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಇದಕ್ಕೆ ರುಕ್ಮಿಣಿ ವಸಂತ್ ಮತ್ತೊಂದು ಉದಾಹರಣೆ
ಹೌದು, ಬೀರ್‌ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರುಕ್ಮಿಣಿ ವಸಂತ್, ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಚಿತ್ರಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು. ಅಕ್ಕ-ಪಕ್ಕದ ರಾಜ್ಯದವರ ಕಣ್ಣಿಗೂ ಬಿದ್ದರು. ಇಂಥಾ ರುಕ್ಮಿಣಿ ವಸಂತ್ ಅಭಿನಯದ ಮೂರು ಚಿತ್ರಗಳು ಮೂರು ವಾರದಲ್ಲಿ ಬಿಡುಗಡೆಯಾಗುತ್ತಿರುವುದೇ ಈ ಕ್ಷಣದ ವಿಶೇಷ.

ಹೌದು, ಮೊನ್ನೆಯಷ್ಟೇ ರುಕ್ಮಿಣಿ ವಸಂತ್ 'ಬಘೀರ' ಜೊತೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ತಮ್ಮ ಅಭಿನಯದಿಂದ ಎಲ್ಲರ ಹೃದಯವನ್ನು ಇನ್ನೊಮ್ಮೆ ಗೆದ್ದರು. ಇನ್ನೂ ದಿನದಿಂದ ದಿನಕ್ಕೆ ಬಘೀರ ಗಳಿಕೆ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಈ ಕಾರಣಕ್ಕೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಗೆಲುವಿನ ಸಂಭ್ರಮದಲ್ಲಿದ್ದ ರುಕ್ಮಿಣಿ ವಸಂತ್ ಅವರ ಸಂಭ್ರಮ ಹೆಚ್ಚಾಗಿದೆ. ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಈಗ ರುಕ್ಮಿಣಿ ವಸಂತ್ ಅಭಿನಯದ ಮೊದಲ ತೆಲುಗು ಚಿತ್ರ ಈ ಶುಕ್ರವಾರ ತೆರೆಗೆ ಬರಲಿದೆ.
ಹೌದು, 'ಅಪ್ಪುಡೊ ಇಪ್ಪುಡೊ ಎಪ್ಪುಡೊ' .. ರುಕ್ಮಿಣಿ ವಸಂತ್ ಅಭಿನಯದ ಮೊದಲ ತೆಲುಗು ಸಿನಿಮಾ. ಆರಂಭದಿಂದ ತೆಲುಗು ಪ್ರಿಯರ ಗಮನವನ್ನು ಸೆಳೆಯುತ್ತಾ ಬಂದ ಈ ಚಿತ್ರ ಈ ಶುಕ್ರವಾರ ಆಂಧ್ರದೆಲ್ಲೆಡೆ ತೆರೆಗೆ ಬರುತ್ತಿದೆ. ಇನ್ನೂ ಕಾರ್ತಿಕೇಯ ಚಿತ್ರದ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ನಿಖಿಲ್ ಸಿದ್ಧಾರ್ಥ್ ಈ ಚಿತ್ರದ ನಾಯಕ. ಮೊದಲ ಚಿತ್ರದಲ್ಲಿಯೇ ಭರವಸೆಯ ನಾಯಕನ ಜೊತೆ ತೆಲುಗು ಚಿತ್ರರಂಗಕ್ಕೆ ರುಕ್ಮಿಣಿ ವಸಂತ್ ಪಾದಾರ್ಪಣೆ ಮಾಡಿದ್ದಾರೆ. ಈ ಹಿನ್ನೆಲೆ ತೆಲುಗು ಚಿತ್ರರಂಗದಲ್ಲಿನ ರುಕ್ಮಿಣಿ ವಸಂತ್ ಅವರ ಮೊದಲ ಚುಂಬನ ಸಿಹಿಯಾಗಿರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇನ್ನೂ 'ಅಪ್ಪುಡೊ ಇಪ್ಪುಡೊ ಎಪ್ಪುಡೊ' ಚಿತ್ರದ ನಂತರ ಮುಂದಿನ ಶುಕ್ರವಾರ ರುಕ್ಮಿಣಿ ವಸಂತ್ ಅಭಿನಯದ ಭೈರತಿ ರಣಗಲ್ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದ ಕುರಿತು ಹೆಚ್ಚೇನು ಹೇಳಬೇಕಿಲ್ಲ. ಯಾಕೆಂದರೆ ಡಾ.ಶಿವರಾಜ್ ಕುಮಾರ್ ಅಭಿನಯದ ಈ ಮಹತ್ವಕಾಂಕ್ಷೆಯ ಚಿತ್ರದ ಸದ್ದು ಅಕ್ಕ ಪಕ್ಕದ ರಾಜ್ಯದಲ್ಲಿ ಕೂಡ ಕೇಳಿ ಬರುತ್ತಿದೆ. ನರ್ತನ್ ನಿರ್ದೇಶನದ ಭೈರತಿ ರಣಗಲ್ ಹೊಸದೊಂದು ಮೈಲಿಗಲ್ಲಾಗುವ ಎಲ್ಲ ಲಕ್ಷಣ ದಟ್ಟವಾಗಿದೆ.
ಹೀಗೆ ಮೂರು ವಾರದಲ್ಲಿ ಮೂರು ಚಿತ್ರಗಳಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅಪರೂಪದ ದಾಖಲೆಯನ್ನು ಕೂಡ ರುಕ್ಮಿಣಿ ವಸಂತ್ ಬರೆದಿದ್ದಾರೆ. ಉಳಿದಂತೆ ವಿಜಯ್ ಸೇತುಪತಿ ಜೊತೆ ರುಕ್ಮಿಣಿ ವಸಂತ್ ಅಭಿನಯಿಸಿರುವ ಏಸ್ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಜೂಜು, ಬಂದೂಕು, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶ ಕುತೂಹಲವನ್ನೂ ಕೆರಳಿಸಿದೆ.
ಇನ್ನೂ.. ಆರ್ಮುಗ ಕುಮಾರ್ ನಿರ್ದೇಶನದ ಈ ಚಿತ್ರವನ್ನ ಕ್ರೈಮ್ ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ಏಸ್ ಸಿನಿಮಾವನ್ನು, 7Cs ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ. ಇನ್ನೂ ಶಿವಕಾರ್ತಿಕೆಯನ್ ಅಭಿನಯದ ತಮಿಳು ಚಿತ್ರದ ಚಿತ್ರೀಕರಣ ಕೂಡ ಮುಕ್ತಾಯದ ಹಂತದಲ್ಲಿದೆ. ಒಟ್ನಲ್ಲಿ ಸದ್ಯಕ್ಕೆ ರುಕ್ಮಿಣಿ ವಸಂತ್ ಅಭಿನಯದ ಮೂರು ಚಿತ್ರಗಳು ಮೂರು ವಾರದಲ್ಲಿ ಬಿಡುಗಡೆಯಾಗುತ್ತಿವೆ. ಆ ಪೈಕಿ ಬಘೀರ ಬಿಡುಗಡೆಗೊಂಡು ಹಿಟ್ ಆಗಿದೆ. ಭೈರತಿ ರಣಗಲ್ ಗೆದ್ದೇ ಗೆಲ್ಲುತ್ತೆ ಎನ್ನುವ ವಿಶ್ವಾಸ ಎಲ್ಲರಲ್ಲಿದೆ. ನಾಳೆ ತೆರೆಗೆ ಬರಲಿರುವ 'ಅಪ್ಪುಡೊ ಇಪ್ಪುಡೊ ಎಪ್ಪುಡೊ' ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದರೆ ಅಭಿಮಾನಿಗಳು ರುಕ್ಮಿಣಿ ವಸಂತ್ ಅವರನ್ನು ಹ್ಯಾಟ್ರಿಕ್ ಹೀರೋಯಿನ್ ಎಂದು ಕರೆಯಬಹುದು.


Click it and Unblock the Notifications











