ಹಸು ಕೆಚ್ಚಲು ಕೊಯ್ದ ಕ್ರೂರಿಗಳನ್ನು 50 ರೂ. ದಂಡ ಕಟ್ಟಿಸಿಕೊಂಡು ಬಿಡಬೇಡಿ: ನಟಿ ಸುಧಾರಾಣಿ
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ ರಾತ್ರಿ(ಜನವರಿ 11)ಕಿಡಿಗೇಡಿಗಳು ಮೂರು ಹಸುಗಳ ಕೆಚ್ಚಲು ಕತ್ತರಿಸಿದ ಅಹಿತಕರ ಘಟನೆ ನಡೆದಿತ್ತು. ಭಾನುವಾರ ವಿಚಾರ ಬೆಳಕಿಗೆ ಬಂದಿತ್ತು.
ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 325 ರ ಅಡಿಯಲ್ಲಿ FIR ದಾಖಲಿಸಲಾಗಿದೆ ಘಟನೆ ಬಗ್ಗೆ ಹಿರಿಯ ನಟಿ ಸುಧಾರಾಣಿ ಪ್ರತಿಕ್ರಿಯಿಸಿದ್ದಾರೆ. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಸುಧಾರಾಣಿ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ.

ಕಿಡಿಗೇಡಿಗಳು ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಸುಧಾರಾಣಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ. "ಒಬ್ಬ ಪ್ರಾಣಿ ಪ್ರೇಮಿಯಾಗಿ ಈ ಕೃತ್ಯಕ್ಕೆ ಸಂಬಂಧಿಸಿದ ಕೆಲವು ವೀಡಿಯೋಗಳನ್ನ ನೋಡಿ, ಇದರ ಬಗ್ಗೆ ಓದಿ ನನ್ನಿಂದ ಸುಮ್ಮನೆ ಇರೋದಕ್ಕೆ ಸಾಧ್ಯವಾಗಲಿಲ್ಲ. ತಾಯಿ ಸ್ಥಾನ ಕೊಟ್ಟಿರೋ ಕಾಮಧೇನುವಿಗೆ ಹೀಗೆ ಅಮಾನವೀಯವಾಗಿ ಹಿಂಸೆ ಕೊಟ್ಟಿರೋದನ್ನ ನೋಡಿದ್ರೆ ಕರುಳು ಕಿವುಚಿ ಬರುತ್ತದೆ. ಈಗಲಾದರು ಶಾಸಕಾಂಗ ಎಚ್ಚೆತ್ತುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
"ಮೂಕಪ್ರಾಣಿಗಳಿಗೆ, ಪಕ್ಷಿಗಳಿಗೆ ಹಿಂಸೆ ಕೊಡೋ ಕ್ರೂರಿಗಳಿಂದ 50 ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟುಬಿಡೋದಲ್ಲ, ಇದು ಜಾಮೀನು ನೀಡಬಹುದಾದ ಅಪರಾಧ ಅಲ್ಲ. ಇಂಥ ಕ್ರೂರಿಗಳನ್ನ ಜೈಲಿನಲ್ಲಿಟ್ಟು ಸಾಕಬೇಕಾ? ಒಳಗಡೆ ಚೆನ್ನಾಗಿ ಊಟ ತಿಂಡಿ ಮಾಡ್ಕೊಂಡು ಆರಾಮಾಗಿ ಇರ್ತಾರೆ. ಇವರಿಗೆ 50 ರೂಪಾಯಿ, 50 ಸಾವಿರ ರೂಪಾಯಿ ಅಂತ ದಂಡ ಹಾಕಿದ್ರೆ ಹೇಗೋ ಏನೋ ಮಾಡಿ, ಸಾಲ ಮಾಡಿ ಆದರೂ ದಂಡ ಕಟ್ಟಿ ಹೊರಗಡೆ ಬರ್ತಾರೆ. ಇಂಥವರಿಗೆ ಘೋರವಾದ ಶಿಕ್ಷೆ ಕೊಡಬೇಕಾದ ಅವಶ್ಯಕತೆ ಇದೆ" ಎಂದು ನಟಿ ಸುಧಾರಾಣಿ ಮನವಿ ಮಾಡಿದ್ದಾರೆ.
"ಪ್ರಾಣಿಹಿಂಸೆ ಮಾಡೋರ ವಿರುದ್ಧ Criminal Record File ಆಗಬೇಕು. ಅವರು ಇನ್ನೇನೇ ಕೆಲಸ ಮಾಡೋಕೆ ಪ್ರಯತ್ನ ಪಟ್ಟರು ಇಂಥ ಕೆಲಸ ಮಾಡಿರೋದಕ್ಕೆ Criminal Background ಇರಬೇಕು. ಆಗ ಮಾತ್ರ ಇಂತಹವರಿಗೆ ಭಯ ಶುರುವಾಗತ್ತೆ. ಪ್ರಾಣಿಗಳಿಗೆ ಉಪಯುಕ್ತವಾಗೋ ಕಾನೂನನ್ನ ಈಗಲಾದರೂ ಜಾರಿಗೆ ತಂದರೆ ಇಂಥ ಕೃತ್ಯಗಳನ್ನು ತಡೆಗಟ್ಟಬಹುದು" ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ.
ನಟಿ ಸುಧಾರಾಣಿ ಮನವಿಗೆ ಸಾಕಷ್ಟು ಜನ ದನಿಗೂಡಿಸಿದ್ದಾರೆ. ಸರಿಯಾಗಿ ಹೇಳಿದ್ದೀರಾ ಮೇಡಂ, ಇಂತಹ ಕೃತ್ಯ ನಡೆಸುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೊನೆಗೂ ಸೆಲೆಬ್ರೆಟಿಗಳು ಈ ಬಗ್ಗೆ ದನಿ ಎತ್ತಿರುವುದು ಸ್ವಾಗತಾರ್ಹ ಎಂದು ಕೆಲವರು ಹೇಳುತ್ತಿದ್ದಾರೆ. ನಟಿ ಸುಧಾರಾಣಿ ಪೋಸ್ಟ್ ವೈರಲ್ ಆಗುತ್ತಿದೆ.
ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಸಂಬಂಧ ಬಿಹಾರದ ಶೇಖ್ ನಸ್ರು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ವಿನಾಯಕ ನಗರದ ನಿವಾಸಿ ಕರ್ಣ ಎಂಬುವವರು ಶನಿವಾರ ರಾತ್ರಿ ತಮ್ಮ ಮನೆ ಬಳಿ ಹಸುಗಳನ್ನು ಕಟ್ಟಿದ್ದರು. ಬೆಳಗ್ಗೆ ಎದ್ದಾಗ ಹಸುಗಳ ಕೆಚ್ಚಲು ಕತ್ತರಿಸಿದ್ದ ಅಮಾನುಷ ಕೃತ್ಯ ಬೆಳಕಿಗೆ ಬಂದಿತ್ತು.
ಹಸುಗಳ ಮಾಲೀಕ ಕರ್ಣ ಅವರಿಗೆ ಸಚಿವ ಜಮೀರ್ ಅಹಮದ್ 3 ಹಸುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಜೊತೆಗೆ 3 ಲಕ್ಷ ರೂ. ಪರಿಹಾರವನ್ನು ನೀಡಿದ್ದರು. ಮಾಲೀಕ ಕರ್ಣ ಹಸುಗಳನ್ನು ಪಡೆಯಲು ನಿರಾಕರಿಸಿದ್ದಾಗ ಅವರ ತಾಯಿ ಅವರಿ ಅಮ್ಮಾಳ್ ಹಾಗೂ ಸಹೋದರಿ ಅಮುದಾ ಪಡೆದುಕೊಂಡಿದ್ದಾರೆ.
ಹಸು ಕೆಚ್ಚಲು ಕೊಯ್ದ ಪ್ರಕರಣ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಇನ್ನು ಪ್ರಕರಣ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.


Click it and Unblock the Notifications











