ತಮಿಳು ನಟ ಕಾರ್ತಿ ಭೇಟಿಯಾಗಿ 'ಕಾಂತಾರ' ಕುರಿತು ರಿಷಬ್ ಶೆಟ್ಟಿ ಆಡಿದ ಮಾತನ್ನು ಕೇಳಿ ಕಿಡಿಕಾರಿದ ಕನ್ನಡಿಗರು!
ಕಾಂತಾರ ಚಿತ್ರ ಮೊದಲೇ ಪ್ಯಾನ್ ಇಂಡಿಯಾ ಹಂತದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರತಂಡ ಕನ್ನಡ ಭಾಷೆಯಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಿತ್ತು. ನಮ್ಮ ಮಣ್ಣಿನ ಕಥೆಯನ್ನು ನಮ್ಮ ಭಾಷೆಯಲ್ಲಿಯೇ ದೇಶದ ಎಲ್ಲ ಪ್ರೇಕ್ಷಕರಿಗೂ ಸಹ ತಲುಪಿಸಬೇಕೆಂಬ ಉದ್ದೇಶ ಚಿತ್ರತಂಡದ್ದಾಗಿತ್ತು. ಈ ವಿಷಯವನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ಕಾಂತಾರ ಚಿತ್ರ ಯಶಸ್ಸು ಸಾಧಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಕಾಂತಾರ ಚಿತ್ರತಂಡದ ಈ ನಿಲುವು ಕೆಲವರಿಗೆ ಇಷ್ಟವಾಗಿತ್ತು ಹಾಗೂ ಇನ್ನೂ ಕೆಲವರಿಗೆ ಬೇಸರ ತಂದಿತ್ತು.
ಕಾಂತಾರ ಚಿತ್ರ ವೀಕ್ಷಿಸಿದ ನಂತರ ಸ್ವತಃ ಕನ್ನಡ ಪ್ರೇಕ್ಷಕರು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅತ್ತ ಚಿತ್ರವನ್ನು ಕನ್ನಡದಲ್ಲಿಯೇ ವೀಕ್ಷಿಸಿದ್ದ ಪರಭಾಷೆಯ ಸಿನಿಪ್ರೇಕ್ಷಕರ ಅಭಿಪ್ರಾಯವೂ ಇದೇ ಆಗಿತ್ತು.
ಹೀಗೆ ಇಂಥ ಅಭಿಪ್ರಾಯಕ್ಕೆ ಮಣಿದ ಹೊಂಬಾಳೆ ಫಿಲ್ಮ್ಸ್ ಕನ್ನಡದಲ್ಲಿಯೇ ಚಿತ್ರವನ್ನು ಎಲ್ಲಾ ಕಡೆ ತಲುಪಿಸಬೇಕು ಎಂಬ ತನ್ನ ಉದ್ದೇಶವನ್ನು ಬದಿಗಿಟ್ಟು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಕಾಂತಾರ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುತ್ತಿದೆ. ಈ ಪೈಕಿ ಮೊದಲಿಗೆ ಕಾಂತಾರ ಹಿಂದಿ ನಿನ್ನೆ ( ಅಕ್ಟೋಬರ್ 14 ) ಬಿಡುಗಡೆಗೊಂಡಿತು ಹಾಗೂ ಇಂದು ( ಅಕ್ಟೋಬರ್ 15 ) ಕಾಂತಾರ ತೆಲುಗು ಮತ್ತು ತಮಿಳು ಅವತರಣಿಕೆಗಳು ತೆರೆಕಂಡಿವೆ. ಕನ್ನಡದಲ್ಲಿ ಪ್ರಶಂಸೆ ಪಡೆದುಕೊಂಡಂತೆ ತೆಲುಗು ಮತ್ತು ತಮಿಳಿನಲ್ಲೂ ಸಹ ಕಾಂತಾರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ವೀಕ್ಷಿಸಿದ ತಮಿಳು ನಟ ಕಾರ್ತಿ ರಿಷಬ್ ಶೆಟ್ಟಿ ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ವೀಕ್ಷಿಸಿದ ಕನ್ನಡಿಗರು ರಿಷಬ್ ಶೆಟ್ಟಿ ವಿರುದ್ಧ ಕಿಡಿಕಾರಿದ್ದಾರೆ.

ಕಾಂತಾರ ಚಿತ್ರವನ್ನು ಕೊಂಡಾಡಿದ ಕಾರ್ತಿ
ಕಾಂತಾರ ಚಿತ್ರವನ್ನು ವೀಕ್ಷಿಸಿದ ಕಾರ್ತಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿ ಚಿತ್ರ ಅತ್ಯದ್ಭುತವಾಗಿ ಮೂಡಿ ಬಂದಿದೆ ಎಂತಹ ಒಳ್ಳೆಯ ಕಾನ್ಸೆಪ್ಟ್ ಎಂದು ಕೊಂಡಾಡಿದ್ದಾರೆ. ರಿಷಬ್ ಶೆಟ್ಟಿ ಅವರನ್ನು ತಮಿಳು ನಟ ಕಾರ್ತಿ ತಬ್ಬಿಕೊಂಡು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ನಟ ಕಾರ್ತಿ ಕಾಂತಾರ ಚಿತ್ರದ ತಮಿಳು ವರ್ಷನ್ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಆ ಸಂದರ್ಭದಲ್ಲಿಯೂ ಸಹ ಚಿತ್ರದ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದರು.

ತಮಿಳಿನಲ್ಲಿ ಮಾತನಾಡಿದ ಕಾರ್ತಿ, ಕನ್ನಡ ಬಳಸದ ರಿಷಬ್!
ಹೀಗೆ ನಟ ಕಾರ್ತಿ ಕಾಂತಾರ ಚಿತ್ರವನ್ನು ತಮಿಳಿನಲ್ಲಿ ಹೊಗಳುತ್ತಿದ್ದಂತೆ ಅದಕ್ಕೆ ಉತ್ತರಿಸಿದ ರಿಷಬ್ ಶೆಟ್ಟಿ ಸಮಾಜದಲ್ಲಿ ಮೇಲುಜಾತಿ ಮತ್ತು ಕೆಳಜಾತಿ ಇಲ್ಲದಂತೆ ಎಲ್ಲರೂ ಸಮಾನವಾಗಿರಬೇಕು ಎಂಬುದನ್ನು ಸಂಪೂರ್ಣವಾಗಿ ತಮಿಳಿನಲ್ಲಿಯೇ ಹೇಳಿದರು. ಸದ್ಯ ಈ ವಿಡಿಯೋ ತುಣುಕಿನಲ್ಲಿ ಕನ್ನಡ ಭಾಷೆಯನ್ನು ಎಲ್ಲೂ ಬಳಸದ ರಿಷಬ್ ಶೆಟ್ಟಿ ವಿರುದ್ಧ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ರಿಷಬ್ ಪರ ಬ್ಯಾಟ್ ಬೀಸಿದ ಕೆಲ ಕನ್ನಡಿಗರು
ಕೆಲವರು ರಿಷಬ್ ಶೆಟ್ಟಿ ಕಾರ್ತಿ ಜತೆ ಮಾತನಾಡುವಾಗ ಕನ್ನಡದಲ್ಲಿ ಮಾತನಾಡದೆ ತಮಿಳು ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ರಿಷಬ್ ಪರ ಬ್ಯಾಟ್ ಬೀಸಿದ್ದಾರೆ. ಈ ಹಿಂದಿನ ಕೆಲ ಸಂದರ್ಶನಗಳಲ್ಲಿ ರಿಶಬ್ ಶೆಟ್ಟಿ ಅವರು ನಾನು ಮಾತನಾಡುವುದು ಮತ್ತು ಯೋಚಿಸುವುದು ಎಲ್ಲವೂ ಸಹ ಕನ್ನಡದಲ್ಲಿಯೇ ಎಂದು ಹೇಳಿಕೆ ನೀಡಿದ್ದರು ಹಾಗೂ ಕಾಂತಾರ ಚಿತ್ರಕತೆ ಕರಾವಳಿ ಭಾಗದ್ದು ಎನ್ನುತ್ತಾರೆ, ಕರಾವಳಿಯೂ ಕೂಡ ಕರ್ನಾಟಕದ ಭಾಗವೇ ಎಂದು ಕನ್ನಡ ಮತ್ತು ಕರ್ನಾಟಕದ ಪರ ಮಾತನಾಡಿದ್ದರು. ಇದಕ್ಕೆಲ್ಲಾ ಏನು ಹೇಳುತ್ತೀರಾ ಎಂದು ಕೆಲ ಸಿನಿಪ್ರೇಕ್ಷಕರು ರಿಷಬ್ ಪರ ಮಾತನಾಡಿದ್ದಾರೆ.


Click it and Unblock the Notifications