ಹತಾಶ ಕನ್ನಡ ಚಿತ್ರಪ್ರೇಮಿಗಳಿಗೆ 'ಮರು ಬಿಡುಗಡೆ' ಭಾಗ್ಯ ನೀಡಿರುವ ಕನ್ನಡ ಚಿತ್ರರಂಗ..!
ಕನ್ನಡ ಚಿತ್ರರಂಗ ಸದ್ಯಕ್ಕೆ ಕಡು ಕಷ್ಟದಲ್ಲಿದೆ. ದೊಡ್ಡ ದೊಡ್ಡವರ ಸಿನಿಮಾ ಬಿಡುಗಡೆಯಾಗದ ಹಿನ್ನೆಲೆ ಚಿತ್ರಮಂದಿರದವರ ಸ್ಥಿತಿ ಚಿಂತಾಜನಕವಾಗಿದೆ. ಒಂದೊಂದಾಗಿಯೇ ಚಿತ್ರಮಂದಿರದ ಬಾಗಿಲುಗಳಿಗೆ ಬೀಗ ಬೀಳುತ್ತಿದೆ.
ಆದರೆ .. ಚಿಂತೆ ಇಲ್ಲದವರಿಗೆ ಸಂತೆಯಲ್ಲಿಯೂ ನಿದ್ರೆ ಅನ್ನುವಂತೆ ಕಷ್ಟ-ನಷ್ಟಕ್ಕೆ ಜೊತೆಯಾಗಬೇಕಿದ್ದ ಸೂಪರ್ ಸ್ಟಾರ್ ಗಳೆಲ್ಲ ಜೊತೆ ಜೊತೆಯಾಗಿಯೇ ಪ್ಯಾನ್ ಇಂಡಿಯಾ ಪ್ರವಾಸ ಮಾಡುತ್ತಿದ್ದಾರೆ. ನ್ಯಾಷನಲ್ ಸ್ಟಾರ್ ಆಗುವ ಕನಸನ್ನ ಕಾಣುತ್ತಿದ್ದಾರೆ.

ಈ ಕಾರಣಕ್ಕೆ ವೈನ್ ಹಳೆಯದಾದಷ್ಟು ಅದ್ಭುತ ರುಚಿಯನ್ನ ಕೊಡುತ್ತೆ ಅನ್ನುವ ಮಾತನ್ನ ತಮ್ಮ ಇಷ್ಟಾನುಸಾರ ಬದಲಿಸಿಕೊಂಡಿರುವ ಕನ್ನಡ ಚಿತ್ರರಂಗ ಸದ್ಯಕ್ಕೆ ಗತಕಾಲದಲ್ಲಿ ಕನ್ನಡ ಚಿತ್ರರಂಗದ ವೈಭವ ಹೆಚ್ಚಿಸಿದ್ದ ಕನ್ನಡ ಚಿತ್ರಗಳ ಮೊರೆ ಹೋಗಿದೆ. ಹಳೆಯ ಚಿತ್ರಗಳನ್ನ ಮರು ಬಿಡುಗಡೆ ಮಾಡುವ ಮೂಲಕ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಿಜಾ.. ಓಲ್ಡ್ ಇಸ್ ಗೋಲ್ಡ್. ಆದರೆ ಕನ್ನಡ ಚಿತ್ರರಂಗ ಈ ಬಾರಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಫಲಿತಾಂಶ ಅಷ್ಟಕಷ್ಟೇ. ಯಾಕೆಂದರೆ.. ಕನ್ನಡ ಚಿತ್ರಪ್ರೇಮಿಗಳಿಗೆ ಸದ್ಯಕ್ಕೆ ಬೇಕಿರುವುದು ತಾಜಾ ಮಾಲು.ಆದರೆ.. ಕನ್ನಡ ಚಿತ್ರರಂಗ ಈ ಬೇಡಿಕೆಗೆ ಅನುಗುಣವಾಗಿ ಚಿತ್ರಗಳನ್ನ ಪೂರೈಕೆ ಮಾಡುತ್ತಿಲ್ಲ. ಬದಲಿಗೆ ಬೇಡಿಕೆ ಇರಲಿ ಇಲ್ಲದಿರಲಿ ಹಳೆಯ ಸರಕನ್ನೇ ತುಂಬಿ ಚಿತ್ರಮಂದಿರಕ್ಕೆ ಕಳಿಸುತ್ತಿದೆ. ಸಹಜವಾಗಿ ಇದರಿಂದ ಕನ್ನಡ ಕಲಾಪ್ರಿಯರ ಸಹನೆಯ ಕಟ್ಟೆ ಒಡೆಯುತ್ತಿದೆ. ಈ ಕಾರಣಕ್ಕೆ ಮೊನ್ನೆ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ್ದ ಅಂಜನಿ ಪುತ್ರ ಮತ್ತು ಪವರ್ ಒಂದೇ ದಿನ ಮರು ಬಿಡುಗಡೆಯಾದಾಗ ಅಪ್ಪು ಅಭಿಮಾನಿಗಳು ತಮ್ಮ ಅಸಮಾಧಾನ ಹೊರ ಹಾಕಿದ್ದರು. ನಿರ್ಮಾಪಕರ ಈ ನಡೆಯ ವಿರುದ್ಧ ಕೆಂಡ ಕಾರಿದ್ದರು.
ಆದರೂ ಕೂಡ ಈ ಮರುಬಿಡುಗಡೆ ಕಾರ್ಯಕ್ರಮ ನಿಲ್ಲುವ ಲಕ್ಷಣ ಸದ್ಯಕ್ಕೆ ಕಾಣ್ತಿಲ್ಲ. ಇದಕ್ಕೆ ಪೂರಕವಾಗಿ ಈ ವಾರ ಉಪೇಂದ್ರ ಅಭಿನಯದ ಎ ಮತ್ತು ಸಾಹಸಸಿಂಹ ಡಾ,ವಿಷ್ಣುವರ್ಧನ್ ಅಭಿನಯದ ಕೃಷ್ಣಾ ನೀ ಬೇಗನೇ ಬಾರೋ ಸಿನಿಮಾಗಳು ಮರುಬಿಡುಗಡೆಯಾಗುತ್ತಿವೆ.

ಇನ್ನೂ ಚಿತ್ರ ಯಾವುದೇ ಇರಲಿ ಬದಲಾದ ಕಾಲಘಟ್ಟದಲ್ಲಿ ಪ್ರಚಾರ ಅತೀ ಮುಖ್ಯ. ಆದರೆ.. ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಹಳೆಯ ಚಿತ್ರಗಳನ್ನ ಮರುಬಿಡುಗಡೆ ಮಾಡುವ ಉತ್ಸಾಹವಷ್ಟೇ ಕಾಣ್ತಿದೆ ಹೊರತು ಪ್ರಚಾರ ಕಾಣ್ತಿಲ್ಲ. ಚಿತ್ರ ಮರುಬಿಡುಗಡೆಯಾಗಿದ್ದು ಹೋಗಿದ್ದು ಕೂಡ ಗೊತ್ತಾಗುತ್ತಿಲ್ಲ. ಈ ಕಾರಣಕ್ಕೆ.. ಹಳೆಯ ಚಿತ್ರಗಳನ್ನ ರೀ ರಿಲೀಸ್ ಮಾಡ್ತಿರುವ ಉದ್ದೇಶವಾದರೂ ಏನು ಅನ್ನುವ ಪ್ರಶ್ನೆ ಸದ್ಯಕ್ಕೆ ಅನೇಕರನ್ನ ಕಾಡ್ತಿದೆ. ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗಕ್ಕೆ ಹಳೆ ಚಿತ್ರಗಳ ಮರುಬಿಡುಗಡೆಯೊಂದೇ ಪರಿಹಾರಾನಾ..? ಎನ್ನುವ ಪ್ರಶ್ನೆಯೂ ಎದ್ದಿದೆ. ಇದರ ನಡುವೆ ಬಿಡುಗಡೆಯಾಗ್ತಿರುವ ಹೊಸಬರ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಯಾಕೆ ಹಿಂದೇಟು ಹಾಕ್ತಿದ್ದಾರೆ ಅನ್ನುವ ಪ್ರಶ್ನೆ ಕನ್ನಡ ಚಿತ್ರರಂಗಕ್ಕೆ ಕಾಡ್ತಿದೆ.
ಒಟ್ನಲ್ಲಿ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ರೀ ರಿಲೀಸ್ ಪರ್ವ ಆರಂಭವಾಗಿದೆ. ಒಂದಾದ ಮೇಲೊಂದು ಚಿತ್ರಗಳು ಮರು ಬಿಡುಗಡೆಯಾಗುತ್ತಿವೆ. ಈ ವಾರ ಮರುಬಿಡುಗಡೆಗೊಳ್ಳಲಿರುವ ಎ ಮತ್ತು ಕೃಷ್ಣಾ ನೀ ಬೇಗನೇ ಬಾರೋ ಚಿತ್ರಗಳಿಗೆ ಸಿಗುವ ಪ್ರತಿಕ್ರಿಯೆಯ ಮೇಲೆ ಮುಂಬರುವ ದಿನಗಳ ರೀ ರಿಲೀಸ್ ಕಾರ್ಯಕ್ರಮದ ಭವಿಷ್ಯ ನಿಂತಿದೆ. ಇದೇ ಸಮಯದಲ್ಲಿ ಊಟಕ್ಕೆ ಉಪ್ಪಿನಕಾಯಿ ಇರಬೇಕೆ ಹೊರತು ಉಪ್ಪಿನಕಾಯಿಯೇ ಊಟ ಆಗಬಾರದು ಎಂಬ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಹೊಸ ಚಿತ್ರಗಳನ್ನ ಕನ್ನಡ ಪ್ರೇಕ್ಷಕರು ಸಂಪೂರ್ಣವಾಗಿ ಕಡೆಗಣಿಸುವ ಮುನ್ನ ಸ್ಟಾರ್ ಪಟ್ಟಕ್ಕೇರಿದವರು ತಮ್ಮ ಚಿತ್ರಗಳ ಬಿಡುಗಡೆಯ ದಿನವನ್ನ ಘೋಷಿಸುತ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











