ಕಿರುಚಿತ್ರದಿಂದ ತೆಲುಗಿನಲ್ಲಿ ದೊಡ್ಡ ಆಫರ್ ಪಡೆದ ಕನ್ನಡದ ಪುಟ್ಟ ಹುಡುಗಿ
ಇತ್ತೀಚಿಗಷ್ಟೆ ತೆಲುಗಿನ ನಟ ನಾನಿ ಅಭಿನಯದ 'ಗ್ಯಾಂಗ್ ಲೀಡರ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ನಲ್ಲಿ ಪುಟ್ಟ ಹುಡುಗಿಯೊಬ್ಬಳು ನೋಡುಗರನ್ನು ಆಕರ್ಷಿಸಿದ್ದಾಳೆ. ಆಕೆ ಹೆಸರು ಪ್ರಾಣ್ಯ ಪಿ ರಾವ್, ನಮ್ಮ ಕನ್ನಡದ ಹುಡುಗಿ.
ಸಾಯಿ ಕೃಷ್ಣ ನಿರ್ದೇಶನದ 'ಮುದ್ದು ಮುದ್ದಾಗಿ' ಕಿರುಚಿತ್ರದಲ್ಲಿ ಪ್ರಾಣ್ಯ ನಟಿಸಿದ್ದರು. ಈ ಕಿರುಚಿತ್ರ ತೆಲುಗಿನಲ್ಲಿಯೂ ಬಿಡುಗಡೆಯಾಗಿತ್ತು. ಈ ಶಾರ್ಟ್ ಫಿಲ್ಮ್ ನೋಡಿದ ತೆಲುಗು ನಿರ್ದೇಶಕ ವಿಕ್ರಂ ಕುಮಾರ್ ತಮ್ಮ 'ಗ್ಯಾಂಗ್ ಲೀಡರ್' ಸಿನಿಮಾಗೆ ಆಯ್ಕೆ ಮಾಡಿದ್ದಾರೆ.

ಪ್ರಾಣ್ಯ ಪಿ ರಾವ್ ಬೆಂಗಳೂರಿನ ನಾಗರಭಾವಿಯ ನಿವಾಸಿ ಪ್ರವೀಣ್ ಡಿ ಅವರ ಪುತ್ರಿ. ಸದ್ಯ, ಎರಡನೇ ತರಗತಿಯಲ್ಲಿ ಓದುತ್ತಿದ್ದಾರೆ. ತಮ್ಮ ತಾಯಿ ಸುಕನ್ಯ ಎನ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದು, ಪ್ರಾಣ್ಯ ನಟನೆಯ ಅಭ್ಯಾಸ ಶುರುವಾಗಿಗೆ ಮೊದಲ ಕಾರಣ ಆಗಿತ್ತು.
ಮೊದಲು 'ಮಜಾ ಭಾರತ' ಕಾರ್ಯಕ್ರಮದಲ್ಲಿ ಪ್ರಾಣ್ಯ ಭಾಗವಹಿಸಿದ್ದರು. ಕೆಲವು ಸೀರಿಯಲ್ ನಲ್ಲಿಯೂ ನಟಿಸಿದ್ದರು.
ಆ ಬಳಿಕ 'ಆಟಕ್ಕುಂಟು ಲೆಕ್ಕಕಿಲ್ಲ' ಸಿನಿಮಾ ಮಾಡಿದರು. ಅದನ್ನು ಮುಗಿಸಿಕೊಂಡು 'ಮುದ್ದು ಮುದ್ದಾಗಿ' ಕಿರುಚಿತ್ರದಲ್ಲಿ ನಟಿಸಿದರು. ಈ ಕಿರುಚಿತ್ರ ಈಗ ಪ್ರಾಣ್ಯ ಪಾಲಿಗೆ ಟಾಲಿವುಡ್ ನಲ್ಲಿ ದೊಡ್ಡ ಅವಕಾಶ ನೀಡಿದೆ.

'ಗ್ಯಾಂಗ್ ಲೀಡರ್' ಚಿತ್ರದಲ್ಲಿ ಚಿನ್ನು ಎಂಬ ಪಾತ್ರದಲ್ಲಿ ಪ್ರಾಣ್ಯ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ 5 ಮಹಿಳಾ ಪಾತ್ರಗಳು ಇದ್ದು, ಎಲ್ಲವೂ ಅಷ್ಟೇ ಪ್ರಮುಖವಾಗಿದೆಯಂತೆ. ಇದರ ಜೊತೆಗೆ '777 ಚಾರ್ಲಿ' ಸಿನಿಮಾದಲ್ಲಿಯೂ ಪ್ರಾಣ್ಯ ನಟಿಸುತ್ತಿದ್ದಾರೆ.


Click it and Unblock the Notifications











