ಅಂಬಿ ಇಲ್ಲದ ಹುಟ್ಟುಹಬ್ಬ : ರೆಬಲ್ ಸ್ಟಾರ್ ಗೆ ನಮಿಸಿದ ಸಿನಿ ಸ್ಟಾರ್ಸ್
Recommended Video
ರೆಬಲ್ ಸ್ಟಾರ್ ಹುಟ್ಟುಹಬ್ಬ ಅಂದರೆ ಪ್ರತಿ ವರ್ಷವು ಖುಷಿ ಡಬಲ್ ಇರುತಿತ್ತು. ಅಭಿಮಾನಿಗಳು ತಮ್ಮ ಪ್ರೀತಿಯ ಅಣ್ಣನಿಗೆ ಶುಭಾಶಯ ಕೋರಲು ದೂರದ ಊರಿನಿಂದ ಬರುತ್ತಿದ್ದರು. ಅಭಿಮಾನಿಗಳ ಉಡುಗೊರೆಗಳನ್ನು ಅಂಬಿ ಸ್ವೀಕರಿಸಿ ಕಳುಹಿಸುತ್ತಿದ್ದರು. ಆದರೆ, ಇಂತಹ ಸಂತೋಷದ ಈ ದಿನ ಅಂಬಿಯೇ ಇಲ್ಲದಂತೆ ಆಗಿದೆ.
ಅಂಬರೀಶ್ ನಮ್ಮ ಜೊತೆಗೆ ಇಲ್ಲ ಹೌದು. ಆದರೆ, ಅವರ ಮೇಲೆ ಅಭಿಮಾನಿಗಳು ಇಟ್ಟ ಪ್ರೀತಿ ಎಷ್ಟು ದೊಡ್ಡದು ಎನ್ನುವುದು ಪದೇ ಪದೇ ಸಾಬೀತು ಆಗುತ್ತಿದೆ. ಇನ್ನು ಚಿತ್ರರಂಗದಲ್ಲಿ ಅವರ ಹೊಂದಿದ್ದ ಸ್ನೇಹ ಎಂದಿಗೂ ಅಮರ.
ಅಂಬರೀಶ್ ಇಲ್ಲದ ಮೊದಲ ಹುಟ್ಟುಹಬ್ಬ ಬಂದಿದೆ. ಕನ್ನಡ ಸಿನಿ ತಾರೆಯರು ಅಂಬರೀಶ್ ಇಲ್ಲದ ನೋವಿನಲ್ಲೇ ಅವರ ಅಗಲಿಕೆಯ ಬೇಸರ ಹಂಚಿಕೊಂಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್, ಉಪೇಂದ್ರ, ಗಣೇಶ್, ನಿರ್ದೇಶಕರಾದ ಪ್ರೇಮ್, ಗುರುದತ್ ಗಾಣಿಗಾ, ತರುಣ್ ಸುಧೀರ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಸ್ನೇಹಿತರು ಅಂಬರೀಶ್ ರನ್ನು ನೆನದಿದ್ದಾರೆ.
ಎಂದೆಂದಿಗೂ ನಮ್ಮೊಂದಿಗೆ - ಸುಮಲತಾ
ಅಂಬರೀಶ್ ಇಲ್ಲದ ಈ ದಿನ ದುಃಖದಿಂದಲೇ ನಟಿ ಹಾಗೂ ಅಂಬಿ ಪತ್ನಿ ಸುಮಲತಾ ಅವರ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ಎಂದೆಂದಿಗೂ ನಮ್ಮೊಂದಿಗೆ ಅಂಬಿ ಅಮರ'' ಎಂದು ಒಂದೇ ಸಾಲಿನಲ್ಲಿ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ. ಪತಿ ಮತ್ತು ಮಗನ ಜೊತೆಗಿನ ಫೋಟೋವನ್ನು ಸುಮಲತಾ ಪೋಸ್ಟ್ ಮಾಡಿದ್ದಾರೆ.
ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ - ಪುನೀತ್
''ನಿಮ್ಮ ಬಗ್ಗೆ ಯಾವುದೇ ವಿಷಯ ಆಗಿದ್ದರೂ ಅದು ತುಂಬ ವಿಶೇಷವಾಗಿರುತ್ತದೆ ಮಾಮ. ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ.'' ಎಂದು ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಮುಗ್ದ ಮಾನವನಾಗಿ ಬದುಕಿದವನು - ಪ್ರೇಮ್
''ಅಂಬಿ ಅಮರ, ಮುಗ್ದ ಮಾನವನಾಗಿ ಬದುಕಿದವನು. ಎಲ್ಲರಿಗೂ ಪ್ರಿಯನಾಗಿದ್ದವನು. ನ್ಯಾಯ, ನೀತಿ, ಧರ್ಮ ಅಂತಾ ಬಾಳಿದವನು. ಅಮರನಾಗಿ ಹುಟ್ಟಿ ಅಂಬಿಯಾಗಿ ಬದುಕಿ ಮತ್ತೆ ಅಮರನಾದ ಅಂಬರೀಷ ನಿನಗಿದೋ ಹುಟ್ಟು ಹಬ್ಬದ ಶುಭಾಶಯಗಳು'' - ಪ್ರೇಮ್, ನಿರ್ದೇಶಕ
ಎಂದೆಂದಿಗೂ ಅಜರಾಮರ ಅಣ್ಣಾ - ಗುರುದತ್ ಗಾಣಿಗ
''ಇತಿಹಾಸವೇ ನೆನಪಿಡುವಂಥ ಸ್ವಾಭಿಮಾನಿಗಳನ್ನ ಅಭಿಮಾನಿಗಳಾಗಿ ಪಡೆದ ನೀವು ಎಂದೆಂದಿಗೂ ಅಜರಾಮರ ಅಣ್ಣಾ'' ಎಂದು 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಅಂಬರೀಶ್ ರನ್ನು ನೆನೆದಿದ್ದಾರೆ.
ಮತ್ತೆ ಹುಟ್ಟಿ ಬನ್ನಿ ಅಣ್ಣ - ತರುಣ್ ಸುಧೀರ್
''ಕಲಿಯುಗ ಕರ್ಣ, ಮಂಡ್ಯದ ಗಂಡು, ರೆಬೆಲ್ ಸ್ಟಾರ್, ಡಾ||ಅಂಬರೀಷ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಮತ್ತೆ ಹುಟ್ಟಿ ಬನ್ನಿ ಅಣ್ಣ.'' ಎಂದು ಬರೆಯುವುದರ ಜೊತೆಗೆ ತಮ್ಮ ತಂದೆ ಸುಧೀರ್ ಹಾಗೂ ಅಂಬರೀಶ್ ಅವರ ಫೋಟೋವನ್ನು ನಿರ್ದೇಶಕ ತರುಣ್ ಸುಧೀರ್ ಹಂಚಿಕೊಂಡಿದ್ದಾರೆ.
ನಿಮ್ಮೊಂದಿಗಿನ ನೆನಪುಗಳು ಸದಾ ಅಮರ - ಉಪೇಂದ್ರ
''ಮಂಡ್ಯದ ಗಂಡು, ಕಲಿಯುಗ ಕರ್ಣ, ಒಂಟಿ ಸಲಗ, ರೆಬೆಲ್ ಸ್ಟಾರ್ ಅಂಬರೀಶ್ ರವರ ಜನ್ಮದಿನ ಇಂದು. ದೈಹಿಕವಾಗಿ ನೀವು ನಮ್ಮನ್ನು ಅಗಲಿದರೂ ನಿಮ್ಮೊಂದಿಗಿನ ನೆನಪುಗಳು ಸದಾ ಅಮರ'' - ಉಪೇಂದ್ರ, ನಟ
ಹುಮ್ಮಸ್ಸಿನ ಚಿಲುಮೆಯಾಗಿ ಜೀವಂತ - ದರ್ಶನ್
"ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ" - ದರ್ಶನ್, ನಟ
ನಿಮ್ಮ ಅನುಪಸ್ಥಿತಿ ತುಂಬಾ ಕಾಡುತ್ತಿದೆ - ಸುದೀಪ್
"ನಿಮ್ಮ ಅನುಪಸ್ಥಿತಿ ತುಂಬಾ ಕಾಡುತ್ತಿದೆ ಮಾಮ. ಮೇ 29 ಯಾವಾಗಲು ಮೊದಲಿನಂತೆ ಇರಲ್ಲ" ಎಂದು ಟ್ವೀಟ್ ಮಾಡುವ ಮೂಲಕ ನಟ ಸುದೀಪ್ ನೋವನ್ನು ಹೇಳಿಕೊಂಡಿದ್ದಾರೆ.


Click it and Unblock the Notifications











