ಹಾಸ್ಯ ನಟ ಚಿಕ್ಕಣ್ಣ ಮದುವೆ ನಿಶ್ಚಯ; ಕಾಮಿಡಿ ಕಿಲಾಡಿ ಕೈ ಹಿಡಿಯೋ ಹುಡುಗಿ ಯಾರು?
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಚಿಕ್ಕಣ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ಚಿಕ್ಕು ಮದುವೆಯನ್ನು ಗುರುಹಿರಿಯರು ನಿಶ್ಚಯಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿ ಪಾವನಾ ಎಂಬುವವರ ಜೊತೆ ಚಿಕ್ಕಣ್ಣ ಮದುವೆ ನಡೆಯಲಿದೆ.
ಹುಡುಗಿಯ ಮನೆಯಲ್ಲಿ ಹೂ ಮುಡಿಸುವ ಶಾಸ್ತ್ರ ನೆರವೇರಿದೆ. ಎರಡೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ಮಾತುಕತೆ ನಡೆದಿದೆ. ಯುವತಿಗೆ ಹೂ ಮುಡಿಸಿ ಮದುವೆ ನಿಶ್ಚಯಿಸಲಾಗಿದೆ. ಶೀಘ್ರದಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಈ ಹಿಂದೆ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕಣ್ಣ ಮದುವೆ ಬಗ್ಗೆ ಗುಲ್ಲಾಗಿತ್ತು. ಬಳಿಕ ಅದೆಲ್ಲಾ ಸುಳ್ಳು ಎಂದು ಗೊತ್ತಾಗಿತ್ತು. ಆದರೆ ಇದೀಗ ಮದುವೆ ವಿಚಾರ ಅಧಿಕೃತವಾಗಿದೆ.

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿದ್ದಾರೆ. ಬಹುತೇಕ ಹಾಸ್ಯ ಪಾತ್ರಗಳಲ್ಲೇ ಅವರು ಪ್ರೇಕ್ಷಕರಿಗೆ ಚಿರಪರಿಚಿತ. ಕಳೆದ ವರ್ಷ 'ಉಪಾಧ್ಯಕ್ಷ' ಚಿತ್ರದ ಮೂಲಕ ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ನಟ, ನಟಿಯರು ಹೊಸಬಾಳಿಗೆ ಕಾಲಿಡುತ್ತಿದ್ದಾರೆ. ಇದೀಗ ಚಿಕ್ಕಣ್ಣನ ಸರದಿ.
ಕಳೆದ ವರ್ಷ ನಿರ್ದೇಶಕ ತರುಣ್ ಸುಧೀರ್, ನಟಿ ಸೋನಲ್ ಮಂಥೆರೊ ಈ ವರ್ಷದ ಆರಂಭದಲ್ಲೇ ನಟ ಧನಂಜಯ್ ಹಾಗೂ ಧನ್ಯತಾ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮೊನ್ನೆ ಮೊನ್ನೆ ನಟಿ, ನಿರೂಪಕಿ ಅನುಶ್ರೀ ಕೂಡ ಪ್ರೀತಿಸಿದ ಹುಡುಗನ ಕೈ ಹಿಡಿದಿದ್ದರು. ಅದ್ಧೂರಿ ಕಲ್ಯಾಣೋತ್ಸವದಲ್ಲಿ ಚಿತ್ರರಂಗದ ತಾರೆಯರು ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದ್ದರು. ಅನುಶ್ರೀ ಬೆನ್ನಲ್ಲೇ ಹಾಸ್ಯ ನಟ ಚಿಕ್ಕಣ್ಣ ಹಸೆಮಣೆ ಏರಲು ತಯಾರಿ ನಡೆಸಿದ್ದಾರೆ.
ಮೈಸೂರಿನ ಬಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದ ಚಿಕ್ಕಣ್ಣ ಶಾಲಾ ದಿನಗಳಲ್ಲೇ ಬಿಡುವಿನ ಸಮಯದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ತಂದೆ ಬೈರೇಗೌಡ, ತಾಯಿ ನಿಂಗಮ್ಮ. ತಂದೆ-ತಾಯಿಗೆ 6 ಜನ ಮಕ್ಕಳಲ್ಲಿ ಚಿಕ್ಕಣ್ಣ 5ನೇಯವರು. 10ನೇ ತರಗತಿಯಲ್ಲಿ ಒಮ್ಮೆ ವೇದಿಕೆ ಏರಿ ಚಾರ್ಲಿ ಚಾಪ್ಲಿನ್ ವೇಷ ಹಾಕಿ ನಟಿಸಿದ್ದರು. ಮೈಸೂರು ಮೂಲದ ದೃಶ್ಯ ಕಲಾವಿದೆ ಮೂಲಕ ಕಾಮಿಡಿ ಶೋಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಬಳಿಕ ಜೀ- ಕನ್ನಡ ಕಾಮಿಡಿ ಕಿಲಾಡಿಗಳು ಶೋನಲ್ಲಿ ಬಣ್ಣ ಹಚ್ಚಿದ್ದರು.
ಯಶ್ ನಟನೆಯ 'ಕಿರಾತಕ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಲಕ್ಕಿ, ಬುಲ್ ಬುಲ್, ವಿಕ್ಟರಿ, ರುದ್ರ ತಾಂಡವ, ಮಾಸ್ಟರ್ ಪೀಸ್, ಕೋಟಿಗೊಬ್ಬ-2, ಹೆಬ್ಬುಲಿ, ಅಧ್ಯಕ್ಷ ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಚಿಕ್ಕಣ್ಣ ಬಣ್ಣ ಹಚ್ಚಿದ್ದಾರೆ. ಯಶ್, ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್ ಹೀಗೆ ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ತೆರೆ ಹಂಚಿಕೊಂಡು ಗೆದ್ದಿದ್ದಾರೆ.
ಈ ವರ್ಷ ಶರಣ್ ಜೊತೆ 'ಛೂ ಮಂಥರ್' ಚಿತ್ರದಲ್ಲಿ ಚಿಕ್ಕಣ್ಣ ನಟಿಸಿದ್ದರು. ಸದ್ಯ 'ಲಕ್ಷ್ಮಿ ಪುತ್ರ' ಚಿತ್ರದಲ್ಲಿ ಮತ್ತೆ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ಎ. ಪಿ ಅರ್ಜುನ್ ನಿರ್ಮಾಣದ ಚಿತ್ರಕ್ಕೆ ವಿಜಯ್ ಎಸ್ ಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ ಮದುವೆ ಬಗ್ಗೆ ಚಿಕ್ಕಣ್ಣ ಇನ್ನು ಪ್ರತಿಕ್ರಿಯಿಸಿಲ್ಲ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ.


Click it and Unblock the Notifications











