ರಾಕಿಂಗ್ ಸ್ಟಾರ್ ಯಶ್ ಹಾಕಿದ ಸವಾಲು ಸ್ವೀಕರಿಸಿದ ನಟ ಚಿಕ್ಕಣ್ಣ
Recommended Video
ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸವಾಲನ್ನು ಎಸೆದಿದ್ದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಪದ್ಯ ಅಥವಾ ಕವನ ಓದುವ ಸವಾಲಿನ ಅಭಿಯಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದಾರೆ. ಹಿರಿಯ ಪತ್ರಕರ್ತರೊಬ್ಬರು ಹಾಕಿದ ಸವಾಲ್ ಸ್ವೀಕರಿಸಿ ಯಶ್ ಪದ್ಯ ಓದಿದ್ದಾರೆ. ಯಶ್ ಅವರಿಗೆ ತುಂಬ ಇಷ್ಟವಾದ ಕುವೆಂಪು ಅವರ ಪದ್ಯ ಓದಿ ಇನ್ನು ಮೂವರಿಗೆ ಸವಾಲ್ ಎಸೆದಿದ್ದರು.
ರಾಷ್ಟ್ರ ಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಸಾರಿರುವ ಅನಿಕೇತನ ಪದ್ಯವನ್ನು ಓದಿ, ಈ ಸವಾಲ್ ಸ್ವೀಕರಿಸುವಂತೆ ಯಶ್ ಗುರುಗಳಾದ ನಾಗಾಭರಣ, ಸಾಹಿತಿಗಳಾದ ಡಾ.ವಿ ನಾಗೇಂದ್ರ ಪ್ರಸಾದ್, ಗೌಸ್ ಪೀಸ್ ಮತ್ತು ಕಾಮಿಡಿ ನಟರಾದ ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಅರುಮುಗಂ ರವಿಶಂಕರ್ ಅವರಿಗೆ ಪದ್ಯ ಓದುವ ಸವಾಲ್ ನೀಡಿದ್ದಾರೆ.

ಈಗ ಚಿಕ್ಕಣ್ಣ ಈ ಸವಾಲನ್ನು ಸ್ವೀಕರಿಸಿ 'ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ'..ಪದ್ಯವನ್ನು ಓದಿದ್ದಾರೆ. ಈ ಸವಾಲನ್ನು ಮುಂದುವರೆಸಿ ಚಿಕ್ಕಣ್ಣ ನಿರ್ದೇಶಕ ಮಂಜು ಮಾಂಡವ್ಯ, ನಟರಾದ ಮಂಡ್ಯ ರಮೇಶ್ ಮತ್ತು ಅಚ್ಯುತ್ ಕುಮಾರ್ ಅವರಿಗೆ ಸವಾಲ್ ಎಸೆದಿದ್ದಾರೆ.
ನವೆಂಬರ್ ತಿಂಗಳು ಕನ್ನಡದ ಹಬ್ಬ. ಕನ್ನಡಿಗರು ಹೆಮ್ಮೆಯಿಂದ ಆಚರಿಸುವ ಹಬ್ಬ. ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಮತ್ತಷ್ಟು ವಿಶಿಷ್ಟವಾಗಿ ಆಚರಿಸಲು ಸ್ಯಾಂಡಲ್ ವುಡ್ ಸ್ಟಾರ್ ಸಿದ್ಧರಾಗಿದ್ದಾರೆ. ಇಷ್ಟವಾದ ಪದ್ಯವನ್ನು ಓದಿ ಇನ್ನೊಬ್ಬರಿಗೆ ಸವಾಲ್ ಎಸೆಯುವ ಅಭಿಯಾನ ಶುರುಮಾಡಿ ಅನೇಕ ನಟರು ಭಾಗಿಯಾಗುತ್ತಿದ್ದಾರೆ. ಕನ್ನಡದ ಈ ಸವಾಲ್ ಎಸೆಯುವ ಅಭಿಯಾನ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎನ್ನುವ ಕುತೂಹಲ ಮೂಡಿಸಿದೆ.


Click it and Unblock the Notifications











