ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಶ್ರೀರಾಮಚಂದ್ರ ಜನಿಸಿದ ಈ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತಿದೆ. ಚೈತ್ರಮಾಸ ಶುಕ್ಲಪಕ್ಷದ 9ನೇ ದಿನ ಅಯೋಧ್ಯೆಯಲ್ಲಿ ಶ್ರೀರಾಮನ ಜನನವಾಯಿತು. ಎಲ್ಲೆಡೆ ಸಡಗರ ಸಂಭ್ರಮದಿಂದ ರಾಮನವಮಿ ಆಚರಣೆ ನಡೆಯುತ್ತಿದೆ. ಇದೆಲ್ಲದರ ನಡುವೆ ಕನ್ನಡದಲ್ಲಿ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ ಆಗಿದೆ.
ಸಾಮಾನ್ಯವಾಗಿ ಸಾಧಕರ ಜೀವನವನ್ನು ಆಧರಿಸಿ ಬಯೋಪಿಕ್ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅಯೋಧ್ಯೆ ರಾಮಮಂದಿರದ ಹಿಂದೆ ನಡೆದ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಈಗಾಗಲೇ ನೈಜ ಘಟನೆಗಳನ್ನು ಆಧರಿಸಿ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ರಾಮಮಂದಿರ ನಿರ್ಮಾಣದ ಕುರಿತು ಮಾಡುವ ಚಿತ್ರಕ್ಕೆ ಬಯೋಪಿಕ್ ಎಂದು ಯಾಕೆ ಹೇಳುತ್ತಿದ್ದಾರೆ ಎನ್ನುವ ಅನುಮಾನ ಮೂಡುವುದು ಸಹಜ.

'ದಂಡುಪಾಳ್ಯ' ಸರಣಿ ಸಿನಿಮಾಗಳ ನಿರ್ದೇಶಕ ಶ್ರೀನಿವಾಸ್ ರಾಜು ಈಗ ರಾಮ ಮಂದಿರ ಬಯೋಪಿಕ್ ಕೈಗೆತ್ತಿಕೊಂಡಿದ್ದಾರೆ. ರಾಮನವಮಿ ಸಂಭ್ರಮದಲ್ಲೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜಾ ವಿಕ್ರಮಾದಿತ್ಯ ಪ್ರತಿಷ್ಠಾಪಿಸಿದ ಶ್ರೀರಾಮ ಮಂದಿರದಿಂದ ಈ ಚಿತ್ರದ ಕಥೆ ಶುರುವಾಗಲಿದ್ದು ಬಳಿಕ ಅದನ್ನು ಒಡೆದು ಬಾಬರಿ ಮಸೀದಿ ನಿರ್ಮಾಣವಾಗಿದ್ದು 500 ವರ್ಷಗಳ ಹೋರಾಟದ ಬಳಿಕ ಮತ್ತೆ ಭವ್ಯ ರಾಮಮಂದಿರ ನಿರ್ಮಾಣವಾದ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.
ಚಿತ್ರದಲ್ಲಿ ರಾಮಾಯಣ ಕಾವ್ಯ ಪೌರಾಣಿಕ ಕಥೆಯೂ ಇರಲಿದ್ದು ಸಣ್ಣದಾಗಿ ಅದನ್ನು ಹೇಳುವ ಪ್ರಯತ್ನಕ್ಕೆ ಶ್ರೀನಿವಾಸ್ ರಾಜು ಮುಂದಾಗಿದ್ದಾರೆ. ರಾಮ ಜನ್ಮಭೂಮಿಯಲ್ಲಿ ರಾಮನ ಆಲಯ ನಿರ್ಮಿಸಲು ಸಾಕಷ್ಟು ಹೋರಾಟ ನಡೆಯಿತು. ವಿವಾದ ಕೋರ್ಟ್ ಮೆಟ್ಟಿಲೇರಿ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಪದೇ ಪದೆ ವಿಚಾರಣೆ ನಡೆದು 2019 ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅನುಮತಿ ಸಿಕ್ಕಿತ್ತು.

ಈಗಾಗಲೇ ರಾಮಮಂದಿರ ನಿರ್ಮಾಣ ಕಾರ್ಯ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈ ವರ್ಷ ಜನವರಿ 22ರಂದು ಅದ್ಧೂರಿಯಾಗಿ ದೇವಸ್ಥಾನದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೀತು. ಕೋಟ್ಯಾಂತರ ಜನರ ಕನಸು ನನಸ್ಸಾಗಿತ್ತು. ಇದೆಲ್ಲ ವಿಚಾರಗಳನ್ನು ಸೇರಿಸಿ ಬಯೋಪಿಕ್ ಸಿನಿಮಾ ಮಾಡಲು ಶ್ರೀನಿವಾಸ್ ರಾಜು ತೀರ್ಮಾನಿಸಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. 'ಸತ್ಯಂ ಶಿವಂ ಸುಂದರಂ' ಎನ್ನುವ ಟ್ಯಾಗ್‌ಲೈನ್ ಇದೆ. ಪ್ರಶಾಂತ್ ಜಿ ರುದ್ರಪ್ಪ ತ್ರಿಶೂಲ್ ಎಂಟರ್ಟೈನ್ಮೆಂಟ್ ಸಂಸ್ಥೆ ಅಡಿಯಲ್ಲಿ ಸಿನಿಮಾ ನಿರ್ಮಿಸಲಿದ್ದಾರೆ.
500 ವರ್ಷಗಳ ಇತಿಹಾಸವನ್ನು ಮೂರು ಭಾಗಗಳಾಗಿ ಸಿನಿಮಾ ರೂಪದಲ್ಲಿ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ದಶರಥ, ರಾಮ, ಸೀತಾ, ಹನುಮಂತ, ವಾಲಿ ಹಾಗೂ ವಾಲ್ಮೀಕಿ ಜೊತೆಗೆ ತುಳಸಿದಾಸರ ಪಾತ್ರಗಳನ್ನು ತೆರೆಮೇಲೆ ತೋರಿಸುವ ಚಿಂತನೆ ಮಾಡಲಾಗಿದೆ. ಶ್ರೀರಾಮನ ಆದರ್ಶದ ಗುಣಗಳನ್ನು ಈ ಚಿತ್ರದಲ್ಲಿ ತೋರಿಸುತ್ತೇವೆ ಎಂದು ನಿರ್ದೇಶಕರು ಹೇಳಿದ್ದಾರೆ.
"ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಚಿತ್ರ ಬಹಳ ಅದ್ದೂರಿಯಾಗಿ ನಿರ್ಮಾಣವಾಗಲಿದ್ದು, ಭಾರತದ ಖ್ಯಾತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡುದ್ದಾರೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಶ್ರೀರಾಮನವಮಿಯ ಪರ್ವಕಾಲದಲ್ಲಿ ಈ ನೂತನ ಚಿತ್ರದ ಕುರಿತು ಇಷ್ಟು ಹೇಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ನೀಡುವುದಾಗಿ" ನಿರ್ದೇಶಕ ಶ್ರೀನಿವಾಸರಾಜು ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಚಿತ್ರಕ್ಕೆ ಶ್ರೀನಿವಾಸ್ ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು. ಈ ಚಿತ್ರದ ನಿರ್ಮಾಪಕರೇ ಈಗ ರಾಮಮಂದಿರ ಬಯೋಪಿಕ್ ನಿರ್ಮಾಣಕ್ಕೂ ಮುಂದಾಗಿದ್ದಾರೆ.


Click it and Unblock the Notifications











