ನೇಣಿಗೆ ಕೊರಳೊಡ್ಡಿದ ಸರಸ್ವತಿ ಪುತ್ರ ಗುರುಪ್ರಸಾದ್, ಬದುಕನ್ನು ಬಲಿ ಪಡೆದ ಸಾಲದ ಹೊನ್ನ ಶೂಲ..!
ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಯೇ ಸಿನಿಮಾ ಮಾಡಬೇಕಿಲ್ಲ. ಗಟ್ಟಿಯಾದ 'ಕಥೆ'ಯೊಂದು ಇದ್ದರೆ ಸಾಕು ಎಂಬ ಮಾತನ್ನ ಸಾಬೀತು ಮಾಡಿದ್ದವರು. ಜನಮೆಚ್ಚುಗೆಯ ಚಿತ್ರವನ್ನು ಕಟ್ಟಿನಿಲ್ಲಿಸಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದವರು.
ಇನ್ನೂ ಮೂಲತಃ 'ಸಂಭಾಷಣೆ'ಕಾರನಾಗಿದ್ದ ಗುರುಪ್ರಸಾದ್ ಅದ್ಭುತ 'ಮಾತುಗಾರ' ಕೂಡ ಆಗಿದ್ದರು. ತಮ್ಮ ಮಾತುಗಳಿಂದ ಎಂಥವರನ್ನೂ ಮೋಡಿ ಮಾಡಬಲ್ಲ ಸಾಮರ್ಥ್ಯ ಇವರಲ್ಲಿತ್ತು. ಇದಕ್ಕೆ ಪೂರಕವಾಗಿ ದ್ವಂದ್ವಾರ್ಥ ಅಂದರೆ ಬರಿಯ ಪೋಲಿ ಮಾತಲ್ಲ ಅಂತಾ ಹೇಳಿಕೊಟ್ಟವರು ಗುರುಪ್ರಸಾದ್ .

ಸಾಲದ ಹೊರೆ
ನೋ ಡೌಟ್, ಗುರುಪ್ರಸಾದ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ ನಿರ್ದೇಶಕ. ಚಿತ್ರರಂಗಕ್ಕೆ ಬಂದು ಬೇರೆಲ್ಲರಂತೆ ಕಷ್ಟ ಪಡಬಾರದು,ಇತರರಿಗೆ ಹೊರೆಯಾಗಬಾರದು ಎಂದು ವ್ಯವಸ್ಥಿತವಾಗಿ ಬಣ್ಣದ ಜಗತ್ತಿಗೆ ಬಂದಿದ್ದವರು ಗುರುಪ್ರಸಾದ್. ಆದರೆ ಇಂಥ ಗುರುಪ್ರಸಾದ್ ಎಲ್ಲಿ ಎಡವಿದರೋ ಗೊತ್ತಿಲ್ಲ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ ಯಡವಟ್ಟುಗಳನ್ನು ಸ್ವತಃ ಮಾಡಿಕೊಂಡರು. ನಂಬಿದವರನ್ನು ಮತ್ತೆ ಮತ್ತೆ ವಂಚಿಸಿದರು. ಎಲ್ಲರ ನಂಬಿಕೆಯನ್ನು ಕಳೆದುಕೊಂಡರು. ಮುಲಾಜಿಲ್ಲದೆ ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡರು. ಒಳ್ಳೇದು ಹೇಳಲು ಬಂದವರನ್ನು ಕೂಡ ಕೆಡುಕು ಮಾಡಲು ಬಂದಿದ್ದಾನೆ ಎಂದು ಅಂದುಕೊಂಡ ದೂರ ಹೋದರು. ಎಲ್ಲ ತಿಳಿದಿದ್ದೂ ಆತ್ಮದ್ರೋಹವನ್ನು ಮಾಡಿಕೊಂಡರು.
ನಿಮಗೆ ಗೊತ್ತಿರಲಿ, ಅದು 2015ರ ಆಸು ಪಾಸಿನ ಸಮಯ. ಶ್ರೀನಿವಾಸ್ ಎನ್ನುವವರು ಎರಡನೇ ಸಲ ಚಿತ್ರದ ಮೂಲಕ ಗುರುಪ್ರಸಾದ್ ಅವರ ಡೈರೆಕ್ಷನ್ ತಂಡ ಸೇರಿದರು. ಇದೇ ಸಿನಿಮಾ ಚಿತ್ರೀಕರಣ ಹಂತರದಲ್ಲಿದ್ದಾಗ ತಮಗೆ ಪರಿಚಯವಿದ್ದ ಮಾರ್ವಾಡಿಯೊಬ್ಬರಿಂದ ಹದಿನೇಳು ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ನಂತರ ತಮ್ಮ ಪತ್ನಿಯ ಒಡವೆಯನ್ನೆಲ್ಲಾ ಮಾರಿ ಹದಿಮೂರು ಲಕ್ಷ ರುಪಾಯಿಗಳನ್ನು ಗುರುಪ್ರಸಾದ್ ಕೈಗೊಪ್ಪಿಸಿದ್ದರು. ʻನಮ್ಮ ಡೈರೆಕ್ಟ್ರು ಕಷ್ಟದಲ್ಲಿದ್ದಾರೆ. ಆರ್ಥಿಕ ಸಂಕಷ್ಟಗಳು ಅವರ ಪ್ರತಿಭೆಯನ್ನು ನುಂಗಿಹಾಕಬಾರದುʼ ಅಂದುಕೊಂಡು ಗುರು ಕಷ್ಟದಲ್ಲಿದ್ದಾಗಲೆಲ್ಲಾ ಕೈ ಹಿಡಿದವರು ಶ್ರೀನಿವಾಸ್. ಆದರೆ ಗುರುಪ್ರಸಾದ್ ಶಿಷ್ಯನ ನಿಯತ್ತನ್ನು ಉಳಿಸಿಕೊಳ್ಳಲಿಲ್ಲ. ಬದಲಿಗೆ ಕೊಟ್ಟ ಹಣ ವಾಪಾಸು ಕೇಳಿದರೆ ಈಗ, ಆಗ ಅಂತಾ ಅಲೆದಾಡಿಸಿದರು. ಕೊನೆಗೆ ಗುರುಪ್ರಸಾದ್ ಚೆಕ್ ಕೂಡ ಬೌನ್ಸ್ ಆಗಿತ್ತು. ಇದರಿಂದ ಶ್ರೀನಿವಾಸ್ ಹೈರಾಣಾಗಿ ಗಿರಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬೆಂಗಳೂರಿನ ಗಿರಿ ನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿದ್ದರು. ಆದರೆ ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ಗುರುಪ್ರಸಾದ್ ನಾನೇನೂ ತಪ್ಪು ಮಾಡಿಲ್ಲ. ಚೆಕ್ ಬೌನ್ಸ್ ಆಗಿದೆ ಅಷ್ಟೇ. ಸದ್ಯದಲ್ಲೇ ಸುದ್ದಿಗೋಷ್ಠಿ ಕರೆದು ಮಾತನಾಡುತ್ತೇನೆ ಎಂದಿದ್ದರು.
ಇನ್ನೂ ಎರಡನೇ ಸಲ ಚಿತ್ರದ ಸಮಯದಲ್ಲಿ ಕೂಡ ಗುರುಪ್ರಸಾದ್ ವಿವಾದ ಮೈಮೇಲೆ ಎಳೆದುಕೊಂಡರು. ಒಂಬತ್ತು ತಿಂಗಳ ಒಳಗೆ ಸಂಪೂರ್ಣ ಚಿತ್ರೀಕರಣ ಮುಗಿಸುವುದಾಗಿ ಹೇಳಿದ ಗುರುಪ್ರಸಾದ್ ಚಿತ್ರದ ಚಿತ್ರೀಕರಣ ಮುಗಿಸಲು ಹತ್ ಹತ್ರ ನಾಲ್ಕು ವರ್ಷಗಳನ್ನು ತೆಗೆದುಕೊಂಡರು. ಇದು ಸಾಲದು ಎಂಬಂತೆ ಚಿತ್ರ ಬಿಡುಗಡೆಗೆ ಸಿದ್ಧವಾದಾಗ ಪ್ರಚಾರಕ್ಕೆ ಬಾರದೇ ಸತಾಯಿಸಿದರು.
ಈ ಕಾರಣಕ್ಕೆ ಎರಡನೇ ಸಲ ಚಿತ್ರದ ನಿರ್ಮಾಪಕ ಯೋಗೀಶ್ ನಾರಾಯಣ್ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದರು. ಚಿತ್ರದ ಚಿತ್ರೀಕರಣ ತಡವಾದ ಸಮಯದಲ್ಲಿ ಕೆಲಸ ತಡವಾಗಿದ್ದಕ್ಕೆ ಬಡ್ಡಿ ಕಟ್ಟಿಕೊಡುವುದಾಗಿ ನನಗೆ ಹೇಳಿದ್ದರು. ಯಾವುದನ್ನೂ ಹೇಳಿದಂತೆ ಮಾಡಿಲ್ಲ. ಚಿತ್ರ ಬಿಡುಗಡೆ ಆಗಿದ್ದರೂ ಅವರು ಕೈಗೆ ಸಿಗುತ್ತಿಲ್ಲ. ತಮಗಾದ ಅನ್ಯಾಯಕ್ಕೆ ಸೂಕ್ತ ನ್ಯಾಯ ದೊರಕಿಸಿ ಕೊಡಿ' ಎಂದು ದೂರಿನಲ್ಲಿ ಉಲ್ಲೇಖಸಿದ್ದರು. ನಾಲ್ಕು ವರ್ಷಗಳಲ್ಲಿ ನಾನು ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಗುರುಪ್ರಸಾದ್ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಚಿತ್ರೀಕರಣ ತಡಮಾಡಿ ಆರ್ಥಿಕ ನಷ್ಟ ಮಾಡಿದ್ದಾರೆ. ಸಿನಿಮಾ ರಿಲೀಸ್ ಮತ್ತು ಆಡಿಯೋ ಬಿಡುಗಡೆಗೂ ಅವರು ಬರಲಿಲ್ಲ. ಈಗ ಸಿನಿಮಾ ಬಿಡುಗಡೆಯಾಗಿ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಈ ಸಮಯದಲ್ಲಿ ರಿಲೀಸ್ ನಂತರದ ಕೆಲಸಗಳು ಮತ್ತು ಅಗತ್ಯದ ಪತ್ರಗಳಿಗೆ ಸಹಿ ಹಾಕಲು ಅವರು ಕೈಗೆ ಸಿಗುತ್ತಿಲ್ಲ. ಇದರಿಂದಾಗಿ ನಾನು ಮತ್ತಷ್ಟು ಕುಗ್ಗಿ ಹೋಗಿದ್ದೇನೆ. ನನಗಾದ ಅನ್ಯಾಯಕ್ಕೆ ವಾಣಿಜ್ಯ ಮಂಡಳಿ ಪರಿಹಾರ ಕೊಡಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದು ಮನದ ನೋವನ್ನು ಹಂಚಿಕೊಂಡಿದ್ದರು.
ಕೇವಲ ಇದು ಮಾತ್ರವಲ್ಲದೇ ಗುರುಪ್ರಸಾದ್ ವಿರುದ್ಧ ಟೋಟಲ್ ಕನ್ನಡ ಹೆಸರಿನಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿ. ಲಕ್ಷ್ಮೀಕಾಂತ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟು ನೀಡಿದ್ದರು. ನಮ್ಮ ಮಳಿಗೆಯಿಂದ ಕನ್ನಡದ ಪುಸ್ತಕಗಳನ್ನು ಖರೀದಿಸಿ 65,755 ರೂಪಾಯಿಗಳನ್ನು ನೀಡದೇ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಗುರುಪ್ರಸಾದ್ ಅವರು ಮತ್ತೆ ಯಾರಿಗೂ ಈ ರೀತಿ ಮಾಡದಂತೆ ಸಾರ್ವಜನಿಕರು, ಸಿನಿಮಾಸಕ್ತರು ಎಚ್ಚರವಹಿಸಿ ಈ ಪತ್ರದೊಂದಿಗೆ ನಾನು ಗುರುಪ್ರಸಾದ್ ಗೆ ನೀಡಿದ್ದ ಪುಸ್ತಕಗಳ ರಸೀದಿಯ ಕಾಪಿಯನ್ನು ಸಹ ಲಗತ್ತಿಸಿರುವೆ. ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನೀಡಲು ನಾನು ಸಿದ್ದನಿದ್ದೇನೆ ಎಂದು ಲಕ್ಷ್ಮೀಕಾಂತ್ ದೂರಿನಲ್ಲಿ ದಾಖಲಿಸಿದ್ದರು.
ಒಟ್ನಲ್ಲಿ ಅಂದುಕೊಂಡ ದಿನದಿಂದು ನನ್ನ ಸಿನಿಮಾ ತೆರೆಗೆ ಬರದೇ ಇದ್ದರೆ, ಅಫ್ಜಲ್ ಗುರು ಥರ ಈ 'ಗುರು'ವನ್ನೂ ''ನೇಣು'' ಹಾಕಿ ಬಿಡಿ ಅಂತೆಲ್ಲ ಈ ಹಿಂದೆ 'ಜಾಹೀರಾತು ನೀಡಿದ್ದ ಗುರುಪ್ರಸಾದ್ ಈಗ ತಾವೇ ಖುದ್ದು ನೇಣಿಗೆ ಕೊರಳೊಡ್ಡಿದ್ದು ದುರ್ದೈವ.


Click it and Unblock the Notifications











