"ಸಿನ್ಮಾ ಹುಚ್ಚಿಗೆ ಬಿದ್ದು ಕಿಡ್ನಿ ಕಳ್ಕೊಂಡೆ"; ಉಪ್ಪಿ ಸಹಾಯದ ಬಗ್ಗೆ ಮುರಳಿ ಮೋಹನ್ ಮಾತು
ಯಾರಿಗೆ ಯಾವಾಗ ಯಾವ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಊಹಿಸುವುದು ಕಷ್ಟ. ಒಮ್ಮೆಲೆ ದಿಢೀರನೆ ಆರೋಗ್ಯ ಕೈಕೊಟ್ಟಾಗ ಆರೋಗ್ಯವೇ ಭಾಗ್ಯ ಎನ್ನುವ ಮಾತು ನೆನಪಾಗುತ್ತದೆ. ಸಿನಿಮಾ ತಾರೆಯರು, ತಂತ್ರಜ್ಞರು ಕೂಡ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸುವುದನ್ನು ನೋಡಿದ್ದೇನೆ. ನಟ, ನಿರ್ದೇಶಕ ಉಪೇಂದ್ರ ಅವರ ಸ್ನೇಹಿತ ನಿರ್ದೇಶಕ ಮುರಳಿ ಮೋಹನ್ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಕಿಡ್ನಿ ಫೇಲ್ಯೂರ್ ಆಗಿದ್ದು ನಿರ್ದೇಶಕ ಮುರಳಿ ಮೋಹನ್ ಸಂಕಷ್ಟ ಎದುರಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಹಣದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಉಪೇಂದ್ರ, ಗುರುಕಿರಣ್ ಸೇರಿ ಕೆಲ ಆಪ್ತರು ಕೈಲಾದ ಸಹಾಯ ಮಾಡಿದ್ದಾರೆ. 'ಓಂ' ಸೇರಿದಂತೆ ಉಪೇಂದ್ರ ಮಾಡಿದ ಕೆಲ ಸಿನಿಮಾಗಳಲ್ಲಿ ಮುರಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ಬಳಿಕ ಸ್ವತಂತ್ರ ನಿರ್ದೇಶಕರಾಗಿ 'ಸಂತ', 'ಮಲ್ಲಿಕಾರ್ಜುನ' ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು.

ಸಿನಿಮಾ ವ್ಯಾಮೋಹದಲ್ಲಿ ಮದುವೆ ಕೂಡ ಆಗದೇ ಮುರಳಿ ಮೋಹನ್ ಒಬ್ಬೊಂಟಿಯಾಗಿ ಉಳಿದುಬಿಟ್ಟಿದ್ದಾರೆ. 36 ವರ್ಷಗಳಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಸಿನಿಮಾ ಹುಚ್ಚಿಗೆ ಬಿದ್ದು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸದೇ ಇದ್ದಿದ್ದೇ ತಮ್ಮ ಈ ಸ್ಥಿತಿಗೆ ಕಾರಣ ಎಂದು ಮುರಳಿ ಮೋಹನ್ ತಿಳಿಸಿದ್ದಾರೆ. ಗೌರೀಶ್ ಅಕ್ಕಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ಆರೋಗ್ಯ ಏರುಪೇರಿನ ಬಗ್ಗೆ ಮುರಳಿ ಮಾತನಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮುರಳಿ ಮೋಹನ್ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕೆಲ ದಿನಗಳ ಯೂಟ್ಯೂಬ್ ಸಂದರ್ಶನಗಳಲ್ಲಿ ಭಾಗಿ ಆಗಿ ತಮ್ಮ ಸಿನಿಮಾ ಬದುಕಿನ ಬಗ್ಗೆ ಮಾತನಾಡುತ್ತಾ ಬಂದಿದ್ದರು. 'ಶ್', 'ಓಂ', 'ಎ', 'ಉಪೇಂದ್ರ' ಸಿನಿಮಾಗಳ ಮೇಕಿಂಗ್ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಉಪೇಂದ್ರ ಅವರ ಶಾಲಾ ಸಹಪಾಠಿ ಆಗಿದ್ದವರು ಮುರಳಿ ಮೋಹನ್. ಹಾಗಾಗಿ ಸ್ನೇಹಿತನ ಜೊತೆ ಜೊತೆಗೆ ಚಿತ್ರರಂಗಕ್ಕೆ ಬಂದಿದ್ದರು. ಇದೀಗ ಗೌರೀಶ್ ಅಕ್ಕಿ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಏಳೆಂಟು ವರ್ಷಗಳಿಂದ ಮುರಳಿ ಮೋಹನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಇದೀಗ ಕಿಡ್ನಿ ಕಸಿ ಮಾಡಿಸಲು ಸಿದ್ಧತೆ ನಡೆದಿದೆ. ಅದಕ್ಕಾಗಿ 25 ಲಕ್ಷ ರೂಪಾಯಿ ಹಣ ಬೇಕಿದೆ. ಹಾಗಾಗಿ ಈ ವಿಚಾರ ಬಹಿರಂಗವಾಗಿದ್ದು ಕೆಲವರು ಈಗಾಗಲೇ ಸಹಾಯಹಸ್ತ ಚಾಚಿದ್ದಾರೆ ಎಂದು ಸಂದರ್ಶನದಲ್ಲಿ ಮಾಹಿತಿ ಸಿಕ್ಕಿದೆ. ಕಿಡ್ನಿ ಫೇಲ್ಯೂರ್ ಆಗಿ ವಾರಕ್ಕೆ 3 ದಿನ ಡಯಾಲಿಸಿಸ್ ಮಾಡಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿಯೇ ಸಾಕಷ್ಟು ಹಣ ಖರ್ಚಾಗಿದೆ.
ಏಳು ವರ್ಷಗಳ ಹಿಂದೆ ಹೃದಯಸಂಬಂಧಿ ಸಮಸ್ಯೆಯಿಂದ ಮುರಳಿ ಮೋಹನ್ ಆಸ್ಪತ್ರೆ ಸೇರುವಂತಾಗಿತ್ತು. ಸರ್ಜರಿ ಮಾಡಿಸಿಕೊಳ್ಳುವಂತಾಗಿತ್ತು. ಅದೇ ಸಮಯದಲ್ಲಿ ಕಿಡ್ನಿ ಸಮಸ್ಯೆ ಬಗ್ಗೆ ಗೊತ್ತಾಗಿತ್ತು. ಆಗ ಚಿಕಿತ್ಸೆಗೆ 15 ಲಕ್ಷದವರೆಗೂ ಖರ್ಚಾಗಿತ್ತು. ಆಗಲೇ ನನ್ನ ಸೇವಿಂಗ್ಸ್ ಎಲ್ಲಾ ಖಾಲಿ ಆಯಿತು ಎಂದು ಮಾಹಿತಿ ನೀಡಿದ್ದಾರೆ. ಅದೇ ಸಮಯದಲ್ಲಿ ಖಿನ್ನತೆಗೆ ಜಾರಿದ್ದೆ ಬಳಿಕ ಹೇಗೋ ಹೊರಬಂದೆ ಎಂದು ಮುರಳಿ ಮೋಹನ್ ತಿಳಿಸಿದ್ದಾರೆ.
"ಓಂ ಸಿನಿಮಾ ಸಮಯದಲ್ಲೇ ಡಯಾಬಿಟೀಸ್ ಶುರುವಾಗಿತ್ತು. ದೇಹದ ಕಡೆ ಹೆಚ್ಚಿನ ಗಮನ ಹರಿಸಲಿಲ್ಲ. ಸಿನಿಮಾ ಹುಚ್ಚಿಗೆ ಬಿದ್ದು ಆರೋಗ್ಯ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಹಾಗಾಗಿ ಎರಡ್ಮೂರು ಸಮಸ್ಯೆ ಶುರುವಾಯಿತು. ಸರಿಯಾಗಿ ನಿದ್ದೆ, ಊಟ ಮಾಡುತ್ತಿರಲಿಲ್ಲ. ಸಕ್ಸಸ್ ಇದ್ದಾಗ ಯಾವುದೇ ಸಮಸ್ಯೆ ಬರಲ್ಲ, ಸೋತು ಬಹಳ ಖಿನ್ನತೆಗೆ ಒಳಗಾದಾಗ ಹೀಗೆ ಆಗುತ್ತದೆ" ಎಂದು ಮುರಳಿ ಮೋಹನ್ ಹೇಳಿದ್ದಾರೆ.
"ಅತಿಯಾದ ಸಿನಿಮಾ ಹುಚ್ಚು. ಸೋಲು ಎಲ್ಲವೂ ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರಿತು. ವೈದ್ಯರು ನನ್ನ ದೇಹಕ್ಕೆ ಚಿಕಿತ್ಸೆ ನೀಡುತ್ತಾರೆ. ಮಾನಸಿಕವಾಗಿ ನನ್ನನ್ನು ನಾನು ಗಟ್ಟಿ ಮಾಡಿಕೊಳ್ಳುತ್ತಿದ್ದೀನಿ. ಎಲ್ಲಾ ಎಮೋಷನ್‌ಗಳನ್ನು ದೂರಾಗಿಸಿಕೊಳ್ತಿದ್ದೀನಿ. ಹಣ ಸಂಪಾದನೆ ಮಾಡಲಿಲ್ಲ ಎನ್ನುವ ಕೊರಗಿದೆ. ನೆರವಿಗಾಗಿ ಫಿಲ್ಮ್ ಚೇಂಬರ್ ಪತ್ರ ಬರೆದಿದ್ದೆ. ಆದರೆ ಬೈಲಾ ಪ್ರಕಾರಣ ಅವರು ಹಣ ಕೊಡೋಕೆ ಆಗೊಲ್ಲ ಎಂದರು. ಚಲನಚಿತ್ರ ಅಕಾಡೆಮಿಯಿಂ 75 ಸಾವಿರ ಹಣ ಬರಬಹುದು" ಎಂದು ಮುರಳಿ ಮೋಹನ್ ನೀಡಿದ್ದಾರೆ.
"ಕಲಾವಿದರ ವಿಚಾರಕ್ಕೆ ಬಂದರೆ ನಾನು ಉಪೇಂದ್ರನ ಶಾಲಾ ಸಹಪಾಠಿ ಎನ್ನವುದು ಎಲ್ಲರಿಗೂ ಗೊತ್ತು. ಉಪ್ಪಿ ಒಂದು ಮೊತ್ತದ ಹಣ ಕೊಟ್ಟಿದ್ದಾರೆ. ಅದು ಎಷ್ಟು ಎಂದು ನಾನು ಹೇಳುವುದಿಲ್ಲ. ಅವರು ಎಷ್ಟು ಸರಿ ಅಂದುಕೊಂಡರೋ ಅಥವಾ ಅವರ ಕೈಯಲ್ಲಿದ್ದಷ್ಟು ಹಣ ಕೊಟ್ಟಿದ್ದಾರೆ. ಇನ್ನು ಗುರುಕಿರಣ್ ಕೂಡ ಒಂದಷ್ಟು ಸಹಾಯ ಮಾಡಿದ್ದಾರೆ. ಸುದೀಪ್ ಅವರನ್ನು ಕೇಳುವ ಪ್ರಯತ್ನ ಮಾಡಿದ್ದೇನೆ. ಎರಡ್ಮೂರು ವರ್ಷ ನಾನು, ಸುದೀಪ್ ಒಡನಾಡಿಗಳಾದ್ದೆವು. ಹಾಗಾಗಿ ಅವರನ್ನು ಕೇಳಬೇಕೋ ಬೇಡವೋ ಎಂದುಕೊಂಡಿದ್ದೆ. ಅಂತಿಮವಾಗಿ ಅವರ ಬಳಿ ಮಾತುಕತೆ ನಡೀತಿದೆ. ಅವರು ಸಹಾಯ ಮಾಡುವ ನಿರೀಕ್ಷೆಯಿದೆ. ವಿನೋದ್ ರಾಜ್ ಅವರನ್ನು ಕೇಳಿದ್ದೇನೆ" ಎಂದು ವಿವರಿಸಿದ್ದಾರೆ.
ಮಾಧ್ಯಮಗಳಲ್ಲಿ ನನ್ನ ಆರೋಗ್ಯ ಸಮಸ್ಯೆ ಬಗ್ಗೆ ಗೊತ್ತಾಗಿದೆ ಕೆಲವರು ಸಹಾಯ ಮಾಡುತ್ತಿದ್ದಾರೆ. ಅದು ಕಮ್ಮಿ ಹಣ ಆಗಿದ್ದರೂ ನನಗೆ ಅದು ದೊಡ್ಡದು. ಯಾಕಂದರೆ ನಾನು ಯಾರು ಎಂದು ಗೊತ್ತಿಲ್ಲದಿದ್ದರೂ ಒಂದಷ್ಟು ಜನ ಸಹಾಯ ಮಾಡುತ್ತಿರುವುದು ಖುಷಿ ತಂದಿದೆ. ಕೆಲ ರಾಜಕೀಯ ಮುಖಂಡರನ್ನು ಸಂಪರ್ಕಿಸುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಣಕ್ಕಾಗಿ ಸಂಪರ್ಕ ಮಾಡಬೇಕಿದೆ ಎಂದು ಮುರಳಿ ಮೋಹನ್ ಮಾಹಿತಿ ನೀಡಿದ್ದಾರೆ.
ಆರು ತಿಂಗಳಲ್ಲಿ ಸಮಸ್ಯೆಯಿಂದ ಹೊರ ಬಂದು ಸಿನಿಮಾ ಅಥವಾ ಆಧ್ಯಾತ್ಮದಲ್ಲಿ ಸಮಾಜಕ್ಕೆ ಏನಾದರೂ ಕೊಡಗೆ ಕೊಡಬೇಕು. ಅದಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಮುರಳಿ ಮೋಹನ್ ತಿಳಿಸಿದ್ದಾರೆ. ಮುರಳಿ ಮೋಹನ್ ಅವರ ಚಿಕಿತ್ಸೆಗೆ ನೀವು ಬಯಸಿದ್ದಲ್ಲಿ ಈ ಬ್ಯಾಂಕ್ ಖಾತೆ ಅಥವಾ ಸ್ಕಾನರ್ ಮೂಲಕ ಹಣ ವರ್ಗಾಯಿಸಬಹುದು.. UCO Bank .. ( KR Road Branch ) Name : Murali S Ac number : 1641011025178 IFSC : UCBA0001641
ಬರಹಗಾರನಾಗಿ ಸಹ ನಿರ್ದೇಶಕನಾಗಿ ಉಪೇಂದ್ರ ಬಳಗದಲ್ಲಿ ಮುರಳಿ ಮೋಹನ್ ಗುರ್ತಿಸಿಕೊಂಡಿದ್ದರು. ಬಳಿಕ ಗಾಯಕನಾಗಿ, ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಉಪ್ಪಿ ಹೀರೊ ಆಗಿ ಬ್ಯುಸಿಯಾದ ಬಳಿಕ ಮುರಳಿ ಮೋಹನ್ ಸ್ವತಂತ್ರ ನಿರ್ದೇಶಕರಾಗಲು ಹೋರಾಟ ಮಾಡಿದ್ದರು. ಆದರೆ ಅಷ್ಟು ಸುಲಭವಾಗಿ ಅವಕಾಶಗಳು ಸಿಗಲಿಲ್ಲ. ಜೋಗಿ 'ಪ್ರೇಮ್' ನಿರ್ದೇನದ 'ರಾಜ್- ದಿ ಶೋಮ್ಯಾನ್' ಚಿತ್ರದಲ್ಲಿ ಸಿನಿಮಾ ನಿರ್ದೇಶಕನಾಗುವ ಕನಸು ಕಂಡ ಯುವಕನ ಪಾತ್ರದಲ್ಲೇ ಮುರಳಿ ಮೋಹನ್ ನಟಿಸಿದ್ದರು. ಹೀಗೆ ಕೆಲ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದು ಇದೆ.
ಕಳೆದ ಏಳೆಂಟು ವರ್ಷಗಳಿಂದ ಮುರಳಿ ಮೋಹನ್ ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಹಳೇ ನಿರ್ಮಾಪಕರು ಸಿನಿಮಾ ಮಾಡ್ತಿಲ್ಲ, ಹೊಸ ನಿರ್ಮಾಪಕರು ನಮ್ಮನ್ನು ಕೇಳುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದರು. ಕಾಶೀನಾಥ್ ಬಳಗದಲ್ಲಿ ಆರಂಭದಲ್ಲಿ ಮುರಳಿ ಮೋಹನ್ ಹಾಗೂ ಉಪೇಂದ್ರ ಇಬ್ಬರೂ ಕಾಣಿಸಿಕೊಂಡಿದ್ದರು. ಬಳಿಕ ಸ್ನೇಹಿತರೆಲ್ಲಾ ಸೇರಿ ಉಪ್ಪಿ ಜೊತೆ ಸಿನಿಮಾ ಮಾಡಲು ಆರಂಭಿಸಿದ್ದರು. ಕೆಲ ವರ್ಷಗಳಿಂದ ಆಧ್ಯಾತ್ಮದತ್ತ ಕೂಡ ಮುಖ ಮಾಡಿದ್ದಾರೆ.


Click it and Unblock the Notifications











