ಬಾಲಿವುಡ್ ನ ಖ್ಯಾತ ನಿರ್ಮಾಪಕನ ಪುತ್ರನಿಗೆ ನಾಗಶೇಖರ್ ನಿರ್ದೇಶನ
Recommended Video
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ನಾಗಶೇಖರ್ ಸಾರಥ್ಯದ 'ಅಮರ್' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ ನಾಗಶೇಖರ್ ಈಗ ಮತ್ತೋರ್ವ ನಟನನ್ನು ಚಿತ್ರರಂಗಕ್ಕೆ ಎಂಟ್ರಿ ಕೊಡಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಂದ್ಹಾಗೆ ನಾಗಶೇಖರ್ ಈ ಬಾರಿ ಕನ್ನಡ ಚಿತ್ರರಂಗಕ್ಕೆ ನಾಯಕನನ್ನು ಪರಿಚಯಿಸುತ್ತಿಲ್ಲ. ಬದಲಿಗೆ ಬಾಲಿವುಡ್ ಕಡೆ ಮುಖ ಮಾಡಿ ನಿಂತಿದ್ದಾರೆ. ಹೌದು, ನಾಗಶೇಖರ್ ಹಿಂದಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ನಾಗಶೇಖರ್.
ಅಷ್ಟಕ್ಕು ನಾಗಶೇಖರ್ ಪರಿಚಯಿಸುತ್ತಿರುವ ನಟ ಬಾಲಿವುಡ್ ನ ಖ್ಯಾತ ನಿರ್ಮಾಪಕರ ಪುತ್ರ. ನಿರ್ಮಾಪಕ ಜೋಗಿಂದರ್ ಸಿಂಗ್ ಅವರ ಮಗನಿಗೆ ನಿರ್ದೇಶನ ಮಾಡುವ ಮೂಲಕ ಬಾಲಿವುಡ್ ಗೆ ಪರಿಚಯಿಸುತ್ತಿದ್ದಾರೆ ಕನ್ನಡದ ನಿರ್ದೇಶಕ. ಹಾಗಾದ್ರೆ ಯಾವ ಸಿನಿಮಾ? ಯಾರು ನಾಯಕಿ? ಮುಂದೆ ಓದಿ..

ಬಾಲಿವುಡ್ ಗೆ ಹಾರಿದ ಕನ್ನಡದ 'ಮೈನಾ'
ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಮೈನಾ' ಈಗ ಬಾಲಿವುಡ್ ಗೆ ಹಾರುತ್ತಿದೆ. ಹೌದು, ನಟ ಚೇತನ್ ಮತ್ತು ನಿತ್ಯಾ ಮೆನನ್ ಅಭಿನಯದ 'ಮೈನಾ' ಸಿನಿಮಾ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ. ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ. 2013ರಲ್ಲಿ ಬಿಡುಗಡೆಯಾದ 'ಮೈನಾ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸಿತ್ತು.

ನಾಯಕನಾಗಿ ಭವೀಶ್ ಎಂಟ್ರಿ
ಭವೀಶ್ ಬಾಲಿವುಡ್ ನ ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ಅವರ ಮಗ. ಭವೀಶ್ ಅವರು 'ಅಮರ್' ಸಿನಿಮಾ ಮೇಕಿಂಗ್ ನೋಡಿ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಹಾಗಾಗಿ ಕನ್ನಡ ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುವ ಆಸೆ ಅವರದು. ಮೈನಾ ಸಿನಿಮಾದ ಕತೆ ಕೇಳದ ಭವೀಶ್ ಗೆ ತುಂಬಾ ಇಷ್ಟವಾಗಿದೆಯಂತೆ. ಹಾಗಾಗಿ ಮೈನಾ ಚಿತ್ರದ ರಿಮೇಕ್ ನಲ್ಲಿ ಕಾಣಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಭವೀಶ್.

ನಾಯಕಿ ತಾನ್ಯಾ ಹೋಪ್
ತಾನ್ಯಾ ಹೋಪ್ ಭವೀಶ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಿತ್ಯಾ ಮೆನನ್ ನಿಭಾಯಿಸಿದ್ದ ಪಾತ್ರವನ್ನು ತಾನ್ಯಾ ಹೋಪ್ ಮಾಡುವ ಸಾದ್ಯತೆ ಇದೆ. ಈ ಮೂಲಕ ತಾನ್ಯಾ ಕೂಡ ಮೊದಲ ಬಾರಿಗೆ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ನಿರ್ದೇಶಕರು ಇನ್ನು ತಾನ್ಯಾ ಹೋಪ್ ಬಳಿ ಮಾತನಾಡಿಲ್ಲವಂತೆ. ಆದ್ರೆ ತಾನ್ಯಾ ಅವರನ್ನು ಆಯ್ಕೆ ಮಾಡುವ ನಿರ್ಧಾರ ಮಾಡಿದ್ದಾರೆ ನಾಗಶೇಖರ್. ಸ್ಯಾಂಡಲ್ ವುಡ್ ನ ಬಸಣ್ಣಿ ಎಂದೆ ಖ್ಯಾತಿಗಳಿಸಿದ ತಾನ್ಯಾ ಈಗಾಗಲೆ ನಾಗಶೇಖರ್ ಜೊತೆ 'ಅಮರ್' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಅರ್ಮಾನ್ ಮಲ್ಲಿಕ್ ಸಂಗೀತ
ನಾಗಶೇಖರ್ ಸಿನಿಮಾಗಳು ಅಂದ್ರೆ ಸಂಗೀತ ಎಲ್ಲರ ಮನಗೆದ್ದಿರುತ್ತೆ. ತಮ್ಮ ಸಿನಿಮಾ ಮೂಲಕ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ನಾಗಶೇಖರ್ ಹಿಂದಿಯಲ್ಲು ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಬಾಲಿವುಡ್ ನ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಿಂದಿಯ 'ಮೈನಾ' ರಿಮೇಕ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸತ್ಯ ಹೆಗಡೆ ಛಾಯಾಗ್ರಹಣ
ನಾಗಶೇಖರ್ ಜೊತೆ ಛಾಯಾಗ್ರಾಹಕ ಸತ್ಯ ಹೆಗಡೆ ಕೂಡ ಬಾಲಿವುಡ್ ಕಡೆ ಪಯಣ ಬೆಳೆಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಬಿಪಾಶಾ ಬಸು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಉಳಿದಂತೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ನಾಗಶೇಖರ್. ಉಳಿದ ಕಲಾವಿದರು ಕನ್ನಡದವರು ಇರುತ್ತಾರಾ ಅಥವಾ ಬಾಲಿವುಡ್ ಕಲಾವಿದರೆ ಮಿಂಚುತ್ತಾರಾ ಎನ್ನುವ ಬಗ್ಗೆ ಸಧ್ಯದಲ್ಲೆ ಬಹಿರಂಗ ಪಡಿಸಲಿದೆ ಚಿತ್ರತಂಡ.

ಮುಂದಿನ ತಿಂಗಳು ಮುಹೂರ್ತ
ಅಂದ್ಹಾಗೆ ಚಿತ್ರಕ್ಕೆ ಮುಂದಿನ ತಿಂಗಳು ಮುಹೂರ್ತ ನಡೆಯಲಿದೆ. ಜುಲೈ 1 ಚಿತ್ರಕ್ಕೆ ಅದ್ಧೂರಿ ಚಾಲನೆ ದೊರಕಲಿದ್ದು ಅಂದಿನಿಂದನೆ ಚಿತ್ರೀಕರಣ ಕೂಡ ಪಾರ್ರಂಭವಾಗಲಿದೆ. ವಿಶೇಷ ಅಂದ್ರೆ ನಾಗಶೇಖರ್ ಈಗಾಗಲೆ ಕನ್ನಡದಲ್ಲಿ 'ಸಂಜು ಅಲಿಯಾಸ್ ಸಂಜಯ್' ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಆದ್ರೆ ಬಾಲಿವುಡ್ ಸಿನಿಮಾ ಮುಗಿದ ಬಳಿಕ ಸಂಜು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.


Click it and Unblock the Notifications











