ದಯವಿಟ್ಟು ಕೈ ಮುಗಿದು ಕೇಳುತ್ತೇನೆ ಸಿನಿಮಾ ಮಾಡಿ, ಕನ್ನಡ, ಕನ್ನಡಿಗರನ್ನು ಬೆಳೆಸಿ: ನಿರ್ದೇಶಕ ಓಂ ಪ್ರಕಾಶ್ ರಾವ್ ಮನವಿ
ಈಗೇನಿದ್ದರೂ ಕನ್ನಡ ಸಿನಿಮಾ ಎನ್ನುವುದಕ್ಕಿಂತ ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಚಾರ ಕೊಡುವುದೇ ಹೆಚ್ಚಾಗಿದೆ. ಕನ್ನಡ, ಕನ್ನಡತನದ ಸಿನಿಮಾಗಳ ಹೆಸರಿನಲ್ಲಿ ಚಿತ್ರಗಳು ಬರುತ್ತಿರುವುದೇ ಕಡಿಮೆ. ಸ್ಟಾರ್ ನಟರು ಕೂಡ ಈ ಗೀಳಿಗೆ ಅಂಟಿಕೊಂಡಿದ್ದು, ಸಿನಿಮಾ ಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಕಡಿಮೆಯಾಗುತ್ತಿವೆ. ಈ ಬಗ್ಗೆ ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಬೇಸರ ಹೊರಹಾಕಿದ್ದಾರೆ.
ಸಿನಿಮಾ ಪತ್ರಕರ್ತರಾದ ಬಿ.ಗಣಪತಿ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿರುವು ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್, ಪ್ಯಾನ್ ಇಂಡಿಯಾ ಸಿನಿಮಾ ಎಂದು, ಮನಸ್ಸಿಗೆ ಬಂದಾಗ ಸಿನಿಮಾ ಮಾಡಿಕೊಂಡು, ಬೇರೆ ಭಾಷೆಯ ನಟರನ್ನು ಉತ್ತೇಜಿಸುವ ಭರದಲ್ಲಿ ಕನ್ನಡ ಸಿನಿ ಪ್ರೇಮಿಗಳನ್ನು ಬೇರೆ ಭಾಷೆಯ ಸಿನಿಮಾಗಳತ್ತ ಕಳಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಿನಿಮಾ ಮಾಡದ ಸ್ಟಾರ್ ನಟರಿಂದಾಗಿ ಕನ್ನಡಿಗರು ಬೇರೆ ಭಾಷೆಯ ಸಿನಿಮಾಗಳ ಕಡೆ!
ಪ್ಯಾನ್ ಇಂಡಿಯಾ ಎಂಬ ಹೆಸರಿನಲ್ಲಿ ಕನ್ನಡದ ಹೀರೋಗಳು ಸಿನಿಮಾ ಮಾಡದೆ ನಿಧಾನಗತಿ ಅನುಸರಿಸುತ್ತಿರುವ ಕಾರಣ ಕನ್ನಡಿಗರು ಅನಿವಾರ್ಯವಾಗಿ ಇತರೆ ಭಾಷೆಗಳ ಸಿನಿಮಾಗಳಿಗೆ ಅಡಿಟ್ ಆಗುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ ಓಂ ಪ್ರಕಾಶ್, ಹೌದು ಎಂದಿದ್ದಾರೆ.
"ಮೊದಲು ನಮ್ಮ ಕನ್ನಡ ಭಾಷೆಯನ್ನು ಮೆರೆಸಲು ಕನ್ನಡ ಸಿನಿಮಾಗಳಿದ್ದವು. ಈಗ ಬೇರೆ ಭಾಷೆಗಳಿಂದ ಡಾಮಿನೇಷನ್ ಆಗುತ್ತಿದೆ. ಅದನ್ನು ಸರಿಮಾಡುವುದು ಯಾರು..? ಥಿಯೇಟರ್‌ಗಳಲ್ಲಿ ಸಿನಿಮಾ ತುಂಬಬೇಕು ಅಲ್ಲವೇ. ನಾವು ಬಂದಾಗ ಜನ ಥೀಯೇಟರ್‌ಗೆ ಬರುತ್ತಾರೆ ಎನ್ನುವುದು ಸರಿಯಲ್ಲ. ಮುಂದೆ ಅವರು ಥಿಯೇಟರ್‌ಗಳಿಗೆ ಬರದೇ ಹೋಗಬಹುದು" ಎಂದು ಆತಂಕ ಹೊರಹಾಕಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, "ದಯವಿಟ್ಟು ಕೈ ಮುಗಿದು ಕೇಳುತ್ತೇನೆ ಸಿನಿಮಾ ಮಾಡಿ, ಕನ್ನಡ, ಕನ್ನಡಿಗರನ್ನು ಬೆಳೆಸಿ. ಬೇರೆ ಭಾಷೆಯ ಸ್ಟಾರ್ ಡೈರೆಕ್ಟರ್‌ಗಳು ಬಂದು ಕನ್ನಡ ಇಂಡಸ್ಟ್ರಿಯನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಅವರ ಭಾಷೆಯ ಸಿನಿಮಾ ಮಾಡಿ ಅವರು ಹಿಟ್ ಮಾಡುತ್ತಿದ್ದಾರೆ. ನಮ್ಮ ಹಿರಿಯರ ಆತ್ಮಗಳು ನೊಂದುಕೊಂಡಿವೆ. ಕನ್ನಡ ಇಂಡಸ್ಟ್ರಿಯನ್ನು ಎಂಥಹ ಸ್ಥಿತಿಗೆ ತಂದಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾರೆ" ಎಂದು ಓಂ ಪ್ರಕಾಶ್ ರಾವ್ ಬೇಸರಿಸಿದ್ದಾರೆ.
ಒಳ್ಳೆಯ ಸಿನಿಮಾ ಎನ್ನುವ ಅಧಿಕಾರ ಇರುವುದು ಜನರಿಗೆ ಮಾತ್ರ!
"ಒಳ್ಳೆ ಸಿನಿಮಾ ಜನ ಬಂದಿಲ್ಲ ಎನ್ನಲು ಯಾರಿಗೂ ಅಧಿಕಾರವಿಲ್ಲ. ಅದು ಜನರ ಅಧಿಕಾರ ಅಷ್ಟೇ. ನಾನು ವರ್ಷ, ಆರು ತಿಂಗಳು ಕಷ್ಟ ಪಟ್ಟೆ ಜನ ಬರಲಿಲ್ಲ ಅನ್ನೋದಲ್ಲ. ಅದು ನಿನ್ನ ಕೆಲಸ ಮಾಡು. ನಾನು ಕಷ್ಟ ಪಟ್ಟೆ ಎಂಬುದು ಜನಕ್ಕೆ ಹೇಳೋದಲ್ಲ. ಸಿನಿಮಾ ಗೆದ್ದಾಗ ಅದನ್ನು ಜನರಿಗೆ ಕೊಡ್ತಿರಾ...? ಸಿನಿಮಾ ಸೋತಾಗ ಮಾತ್ರ ಜನರು ಬರಲಿಲ್ಲ ಎನ್ನುತ್ತಾರೆ. ಕಷ್ಟ ಪಟ್ಟು ಅಲ್ಲ ಇಷ್ಟ ಪಟ್ಟು ಸಿನಿಮಾ ಮಾಡಿ" ಎಂದು ಕಿವಿಮಾತು ಹೇಳಿದ್ದಾರೆ.
"ಬೇರೆ ಭಾಷೆಯವರಿಗೆ ಬೆಲೆ ಕೊಡಿ;. ಹಾಗಂತ ಕನ್ನಡ ಬೆಳೆಸೋಕೆ ಅವರನ್ನು ಕರೆತೆಬೇಡಿ. ಕನ್ನಡ ಬೆಳೆಸೋಕೆ ಇಲ್ಲೇ ತುಂಬಾ ಜನ ಇದ್ದಾರೆ. ಬೇರೆ ಭಾಷೆಯವರಿಗೆ ಮಣೆ ಹಾಕಿ ಕನ್ನಡಿಗರಿಗೆ ಅವಮಾನ ಮಾಡಬೇಡಿ. ನೀವು ಮಾಡುತ್ತಿರೋದು ದೊಡ್ಡ ತಪ್ಪು, ಕನ್ನಡಿಗರಾದ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ, ಚಾರ್ಲಿ ನಿರ್ದೇಶಕ ಎಲ್ಲರೂ ಕನ್ನಡಿಗರೆ. ಮಂಗಳೂರಿಗರು ಏನು ಪಾಕಿಸ್ತಾನದಲ್ಲಿ ಇಲ್ಲ ಅವರು ಕನ್ನಡಿಗರೇ. ಅವರಿಗೆ ಯಶಸ್ಸು ಸಿಕ್ಕಿದೆ. ನೀವು ಒಳ್ಳೆ ಸಿನಿಮಾ ಮಾಡಿ" ಎಂದು ತಿಳಿಸಿದ್ದಾರೆ.
ಇಷ್ಟ ಬಂದಾಗ ಸಿನಿಮಾ ಮಾಡೋದು ಕನ್ನಡ ಕಲಾಭಿಮಾನಿಗಳಿಗೆ ಅವಮಾನ!
"ಅಭಿಮಾನಿಗಳು, ಅಭಿಮಾನಿ ಸಂಘಗಳು ಹುಟ್ಟುವ ಮುಂಚೆ ಸ್ಟಾರ್ ನಟರನ್ನು ಬೆಳೆಸಿದ ಕನ್ನಡಿಗರು, ಫ್ಯಾಮಿಲಿ ಆಡಿಯನ್ಸ್ ಎಲ್ಲರು ಇದ್ದಾರೆ. ಅಭಿಮಾನಿಗಳಿಗಾಗಿ ಮಾತ್ರ ಸಿನಿಮಾ ಮಾಡುತ್ತೇನೆ ಎನ್ನುವುದು ಅವರಿಗೆ ಮಾಡಿದ ಅವಮಾನ. ಈ ಹಿರೋಗಳನ್ನೆಲ್ಲಾ ಹಿಟ್ ಮಾಡಿದ್ದು ಬೇರೆ ಭಾಷೆಯ ನಿರ್ದೇಶಕರಲ್ಲ. ನಮ್ಮವರೇ ಅಲ್ಲವೇ. ನಾವು ಡಬ್ಬ ಡೈರೆಕ್ಟರ್ ಇರಬಹುದು. ನೀವೇ ಕೆಲಸ ಹೇಳಿಕೊಡಿ. ಸಿನಿಮಾಗೆ ಸಂಬಂಧಿಸಿದಂತೆ ಕನ್ನಡ ಕನ್ನಡತನ ಮೋಸ ಮಾಡಬೇಡಿ" ಎಂದು ಮನವಿ ಮಾಡಿದ್ದಾರೆ.
"ನಮ್ಮಲ್ಲಿ ಒಳ್ಳೆ ಸಿನಿಮಾ ಮಾಡುತ್ತಿಲ್ಲ. ಅದರ ಸೋಲನ್ನು ಮೊದಲು ಒಪ್ಪಿಕೊಳ್ಳಬೇಕು. ಒಳ್ಳೆ ಕಥೆ ಇಲ್ಲ. ಎಲ್ಲರು ಕುಳಿತುಕೊಳ್ಳೋದಿಲ್ಲ ಮಾತಾಡೋಡಿಲ್ಲ. ಆದರೆ ಈ ಸಿನಿಮಾ ಸಕ್ಸಸ್ ಆಗುತ್ತೆ ಎನ್ನುತ್ತಾರೆ. ಆದರೆ ನಮ್ಮ ಸಿನಿಮಾ ಗೆಲ್ಲುತ್ತೆ ಎನ್ನಲು ಇವರಿಗೆ ಅಧಿಕಾರವಿಲ್ಲ. ಸಿನಿಮಾ ಗೆದ್ದಿದೆ ಎಂಬುದನ್ನು ಜನ ಹೇಳಬೇಕು. ಅದು ಅವರ ಅಧಿಕಾರ" ಎಂದು ಸಂದರ್ಶನದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.


Click it and Unblock the Notifications











