ದೊಡ್ಡ ನಟರ ಬಳಿಕ ಹೊಸ ಕಲಾವಿದರನ್ನು ಪರಿಚಯ ಮಾಡಿದ ಶಿವ ತೇಜಸ್
ಆರ್.ಚಂದ್ರು ಶಿಷ್ಯರಾಗಿದ್ದ ಶಿವ ತೇಜಸ್ ಬಳಿಕ ತಾವೇ ನಿರ್ದೇಶಕರಾದರು. ಈಗಾಗಲೇ ತಮ್ಮ ನಿರ್ದೇಶನದಲ್ಲಿ ಎರಡು ಸಿನಿಮಾಗಳನ್ನು ಮಾಡಿರುವ ಇವರ ಮೂರನೇ ಸಿನಿಮಾ ಆಗಸ್ಟ್ 10 ಎಂದು ಬಿಡುಗಡೆಯಾಗಲಿದೆ.
ಈ ಹಿಂದೆ 'ಮಳೆ' ಹಾಗೂ 'ಧೈರ್ಯಂ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಶಿವ ತೇಜಸ್ ಈಗ 'ಲೌಡ್ ಸ್ಪೀಕರ್' ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ತಮ್ಮ ಕಳೆದ ಎರಡು ಚಿತ್ರಗಳಲ್ಲಿ ನೆನಪಿರಲಿ ಪ್ರೇಮ್ ಹಾಗೂ ಅಜಯ್ ರಾವ್ ರೀತಿಯ ದೊಡ್ಡ ನಟರ ಜೊತೆಗೆ ಕೆಲಸ ಮಾಡಿದ್ದ ಇವರು ಈಗ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ.
ಸಿನಿಮಾದ ಲೀಡ್ ರೋಲ್ ಗಳಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ. ಸುಮಂತ್ ಭಟ್, ಕಾರ್ತಿಕ್ ರಾವ್, ನೀನಾಸಂ ಭಾಸ್ಕರ್, ಕಾವ್ಯಾ ಶಾ, ಅನುಷಾ, ದಿಶಾ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಉಳಿದ ಪಾತ್ರಗಳಿಗೆ ರಂಗಾಯಣ ರಘು ಹಾಗೂ ದತ್ತಣ್ಣ ಜೀವ ತುಂಬಿದ್ದಾರೆ.

'ಲೌಡ್ ಸ್ಪೀಕರ್' ಚಿತ್ರ ಹೆಸರೇ ಹೇಳುವಂತೆ ಮೊಬೈಲ್ ಬಗ್ಗೆ ಇದೆ. ಇಂದಿನ ಗುಟ್ಟಿನ ಜೀವನದಲ್ಲಿ ಲೌಡ್ ಸ್ಪೀಕರ್ ಹಾಕಿ ಮಾತನಾಡಿದರೆ ಏನೆಲ್ಲ ತೊಂದರೆ ಆಗುತ್ತದೆ ಎನ್ನುದನ್ನು ಹಾಸ್ಯಮಯವಾಗಿ ತೋರಿಸಲಾಗಿದೆಯಂತೆ.

ಅಂದಹಾಗೆ, ಡಾ.ಕೆ.ಆರ್ ರಾಜು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದರೆ, ಆಗಸ್ಟ್ 10 ರಂದೇ ಸಿನಿಮಾ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಸಹ ತೆರೆಗೆ ಬರಲಿದೆ.


Click it and Unblock the Notifications











