V R Bhaskar: ನಟ ವಿಷ್ಣುವರ್ಧನ್ ಆಪ್ತ, ನಿರ್ದೇಶಕ ವಿ ಆರ್ ಭಾಸ್ಕರ್ (65) ನಿಧನ
ಸ್ಯಾಂಡಲ್‌ವುಡ್ ಈ ಬಾರಿ ಸಾಲು ಸಾಲು ಸಾವುಗಳನ್ನು ನೋಡುತ್ತಿದೆ. ಒಂದಾದ ಮೇಲೆ ಒಂದು ಸಾವಿನ ಸುದ್ದಿಗಳು ಚಂದನವನಕ್ಕೆ ಆಘಾತ ನೀಡುತ್ತಿದೆ. ಇತ್ತೀಚೆಗಷ್ಟೇ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವಿನಿಂದ ಚೇತರಿಸಿಕೊಳ್ಳುತ್ತುದ್ದ ಚಿತ್ರರಂಗಕ್ಕೆ ನಿರ್ದೇಶಕ ವಿ ಆರ್ ಭಾಸ್ಕರ್ ಅವರ ನಿಧನ ಶೋಕಕ್ಕೆ ನೂಕಿದೆ.
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕರಾಗಿ, ಸಹಾಯಕ ನಿರ್ದೇಶಕರಾಗಿ ಮತ್ತು ಸಂಭಾಷಣೆ ಬರಹಗಾರರಾಗಿ ಗುರುತಿಸಿಕೊಂಡಿದ್ದ, ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದ ವಿ ಆರ್ ಭಾಸ್ಕರ್ (65) ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಗುರುವಾರ (ಸೆಪ್ಟಂಬರ್ 14) ಕೊನೆಯುಸಿರೆಳೆದಿದ್ದಾರೆ.

ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದ ನಿರ್ದೇಶಕ ವಿ ಆರ್ ಭಾಸ್ಕರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕೆಲವು ದಿನಗಳ ಹಿಂದೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಅವರು ಕೊನೆಯುಸಿರೆಳೆದರು.
ದಿವಂಗತ ವಿ ಆರ್ ಭಾಸ್ಕರ್ ಅವರು ಕನ್ನಡ ಸಿನಿಮಾ ರಂಗಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ವರ ಆಪ್ತರಾಗಿದ್ದ ಅವರು ಹೆಚ್ಚಾಗಿ ವಿಷ್ಣುವರ್ಧನ್ ಅವರ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಜೊತೆಗೆ ನಟನಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ವಿಷ್ಣುವರ್ಧನ್ ಅವರ ಜೊತೆಗಿನ ಒಡನಾಟದಿಂದಲೇ ಅವರು ಚಿತ್ರಂಗಕ್ಕೆ ಪಾದರ್ಪಣೆ ಮಾಡಿದ ಬಗ್ಗೆ ಅವರೆ ಹೇಳಿಕೊಂಡಿದ್ದರು.
ವಿ ಆರ್ ಭಾಸ್ಕರ್ ಸಿನಿಮಾಗಳು
ವಿ ಆರ್ ಭಾಸ್ಕರ್ ಅವರು ರುದ್ರ ನಾಗ, ಕರ್ತವ್ಯ, ನನ್ನ ಶತ್ರು, ಪೊಲೀಸ್ ಮತ್ತು ದಾದಾ, ರುದ್ರವೀಣೆ, ದಾದಾ, ಆರಾಧನೆ, ಕರುಳಿನ ಕುಡಿ, ಹಾಲು ಸಕ್ಕರೆ, ರವಿವರ್ಮ, ಕದಂಬ, ಸುಪ್ರಭಾತ, ಲಯನ್ ಜಗಪತಿ ರಾವ್, ಹೃದಯವಂತ, ಆಪ್ತಮಿತ್ರ, ಆಪ್ತ ರಕ್ಷಕ, ಗಾಡ್ ಫಾದರ್ ಮತ್ತು ಡಾ.ಕೃಷ್ಣ ಸೇರಿದಂತೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ ಮತ್ತು ಸಂಭಾಷಣೆಕಾರರಾಗಿ ಕೊಡುಗೆ ನೀಡಿದ್ದಾರೆ.
ದುರದೃಷ್ಟವಶಾತ್, ನಿರ್ದೇಶಕ ವಿ ಆರ್ ಭಾಸ್ಕರ್ ಅವರ ವೈಯಕ್ತಿಕ ಜೀವನ ಕೂಡ ತೀರಾ ಕಷ್ಟಕ್ಕೆ ಗುರಿಯಾಗಿತ್ತು. ಆರು ತಿಂಗಳ ಹಿಂದೆ ಅವರು ಮಗನ ಬಗ್ಗೆ ವಿಡಿಯೋ ಮಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಗನಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಪತ್ನಿ ಮತ್ತು ಮಗನನ್ನು ಕಳೆದುಕೊಂಡಿದ್ದರು. ಇದರ ಒಂದು ದಶಕದ ಹಿಂದೆ ಇನ್ನೊಬ್ಬ ಮಗನು ನಿಧನ ಹೊಂದಿದ್ದರು.
ಮೈಸೂರಿನಲ್ಲೇ ವಿ.ಆರ್. ಭಾಸ್ಕರ್ ಅಂತ್ಯಕ್ರಿಯೆ ನಡೆಯಲಿದೆ. ಭಾಸ್ಕರ್ ಅವರ ತಾಯಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಿದ್ದಾರೆ ಎಂಬ ಮಾಹಿತಿಯಿದೆ.


Click it and Unblock the Notifications











