'ದೃಶ್ಯಂ- 3' ಚಿತ್ರಕ್ಕೆ ಕರ್ನಾಟಕದಲ್ಲಿ ಯಾಕೆ ಈ ಅನ್ಯಾಯ? ಕನ್ನಡ ಸಿನಿರಸಿಕರ ಅಸಮಾಧಾನ
ಮೋಹನ್ ಲಾಲ್ ನಟನೆಯ 'ದೃಶ್ಯಂ- 3' ಸಿನಿಮಾ ಈ ವಾರ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳಿಗೂ ಸಿನಿಮಾ ಡಬ್ ಆಗಿ ಬಿಡುಗಡೆ ಆಗ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
'ದೃಶ್ಯಂ' ಸರಣಿಯ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಹಿಂದಿನ 2 ಸಿನಿಮಾಗಳು ಕನ್ನಡಕ್ಕೆ ರೀಮೆಕ್ ಆಗಿತ್ತು. ಸೇಮ್ ಟು ಸೇಮ್ ಅದೇ ಕಥೆ ಇತ್ತು. ಹಾಗಾಗಿ ಮೂರನೇ ಭಾಗ ಕನ್ನಡಕ್ಕೆ ಡಬ್ ಅಗಿ ಬಿಡುಗಡೆ ಆಗುತ್ತಿರುವುದು ಕುತೂಹಲ ಮೂಡಿಸಿದೆ. ಕನ್ನಡಿಗರು ಕನ್ನಡದಲ್ಲೇ ಸಿನಿಮಾ ನೋಡಲು ಉತ್ಸುಕರಾಗಿದ್ದರೂ ಸರಿಯಾಗಿ ಶೋ ಕೊಡದೇ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ. ಕನ್ನಡಕ್ಕಿಂತ ಮಲಯಾಳಂ ಶೋಗಳ ಸಂಖ್ಯೆ ಹೆಚ್ಚಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಕೂಡ ಇದೇ ಸ್ಥಿತಿ ನಿರ್ಮಾಣವಾಗಿದೆ.

ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಇಂತಹ ಸಮಯದಲ್ಲಿ ಕನ್ನಡ ವರ್ಷನ್ ಹೆಚ್ಚು ಕಡೆಗಳಲ್ಲಿ ಬಿಡುಗಡೆ ಆಗುವುದರಿಂದ ಕನ್ನಡ ಡಬ್ಬಿಂಗ್ ಚಿತ್ರಗಳಿಗೆ ಹೆಚ್ಚಿನ ಬಲ ಸಿಗುತ್ತದೆ. ತಮ್ಮದೇ ಭಾಷೆಗಳಲ್ಲಿ ಕರ್ನಾಟಕದಲ್ಲಿ ಬಲವಂತವಾಗಿ ಕೆಲವರು ಸಿನಿಮಾ ತೋರಿಸಲು ಮನಸ್ಸು ಮಾಡಿದಂತೆ ಕಾಣುತ್ತಿದೆ. 'ದೃಶ್ಯಂ'-3 ರೀತಿಯ ಕ್ರೇಜ್ ಇರುವ ಸಿನಿಮಾಗಳನ್ನು ಅದಕ್ಕೆ ಬಳಸಿಕೊಳ್ಳುತ್ತಿರುವುದು ಗೊತ್ತಾಗುತ್ತಿದೆ. ಸಿನಿಮಾ ಬಿಡುಗಡೆ ಕೆಲವೇ ಗಂಟೆಗಳು ಬಾಕಿಯಿದೆ. ಆದರೆ ಕನ್ನಡ ಶೋಗಳ ಸಂಖ್ಯೆ ಬಹಳ ಕಮ್ಮಿಯಿದೆ.
ಬೇಕೆಂದೆ ಮಲಯಾಳಂ ಶೋಗಳು ಜಾಸ್ತಿ ಕೊಟ್ಟು ಎಲ್ಲರೂ ಟಿಕೆಟ್ ಬುಕ್ ಮಾಡಿದ ಬಳಿಕ ಕನ್ನಡ ಶೋಗಳಿಗೆ ಒಳ್ಳೆ ರೆಸ್ಪಾನ್ಸ್ ಇಲ್ಲ ಎನ್ನುವ ನಾಟಕ ಮಾಡಲು ತೀರ್ಮಾನಿಸಿದಂತೆ ಕಾಣುತ್ತಿದೆ. ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಂಜೆ ಮಾತ್ರ ಕನ್ನಡ ಶೋಗಳು ನಿಗದಿಯಾಗಿದೆ. ಈ ಬಗ್ಗೆ ವಿತರಕರನ್ನು ಕೇಳಿದ್ರೆ, ನೋಡೊಣ ಒಂದು ದಿನ ಬಾಕಿಯಿದೆ. ಕನ್ನಡ ಶೋ ಕೊಡ್ತೀವಿ ಎಂದು ಹೇಳುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲೇ ಮಲಯಾಳಂ ವರ್ಷನ್‌ಗೆ 230ಕ್ಕೂ ಅಧಿಕ ಶೋಗಳನ್ನು ಕೊಡಲಾಗಿದೆ. ಆದರೆ ಕನ್ನಡಕ್ಕೆ 38 ಶೋಗಳು ಮಾತ್ರ ಸಿಕ್ಕಿದೆ.

ಪ್ರತಿ ಬಾರಿ ಪರಭಾಷೆಯ ದೊಡ್ಡ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವಾಗ ಇದೇ ರೀತಿ ಅನ್ಯಾಯ ಮಾಡುತ್ತಾರೆ. ಮೊದಲಿಗೆ ಆಯಾ ಭಾಷೆಯ ಶೋಗಳು ಹೆಚ್ಚು ಕೊಟ್ಟು, ಜನ ಟಿಕೆಟ್ ಬುಕ್ ಮಾಡಿದ ಬಳಿಕ ಕನ್ನಡ ಶೋಗೆ ಡಿಮ್ಯಾಂಡ್ ಇಲ್ಲ, ಅದಕ್ಕೆ ಹೆಚ್ಚು ಶೋ ಕೊಡಲ್ಲ ಎನ್ನುತ್ತಾರೆ. ನಿಜಕ್ಕೂ ಬೆಂಗಳೂರಿನಲ್ಲಿ 'ದೃಶ್ಯಂ- 3' ಚಿತ್ರವನ್ನು ಮಲಯಾಳಂನಲ್ಲಿ ನೋಡಲು ಅಷ್ಟು ಜನ ಕಾಯುತ್ತಿದ್ದಾರಾ? ಎನ್ನುವ ಅನುಮಾನ ಮೂಡುತ್ತದೆ. ಮಲಯಾಳಂ ಶೋಗಳು ಪ್ರೇಕ್ಷಕರು ಇಲ್ಲದೇ ಖಾಲಿ ಇದ್ದರೂ ಪರವಾಗಿಲ್ಲ, ಕನ್ನಡ ಶೋ ಮಾತ್ರ ಕೊಡಲ್ಲ ಎನ್ನುವ ಉಡಾಫೆ ಕೆಲವರದ್ದು.
ಜಿತು ಜೋಸೆಫ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ- 3' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ವಿಶ್ವದಾದ್ಯಂತ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಸಿನಿಮಾ ಕಲೆಕ್ಷನ್ 25 ಕೋಟಿ ರೂ. ದಾಟಿದೆ. ಮೋಹನ್ ಲಾಲ್ ಜೊತೆ ಮತ್ತೆ ಮೀನಾ ನಟಿಸಿದ್ದಾರೆ. ಈ ಬಾರಿ ಜಾರ್ಜ್ ಕುಟ್ಟಿ ಸಿಕ್ಕಿಬೀಳ್ತಾನಾ? ಮತ್ತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಾನಾ? ಎನ್ನುವುದನ್ನು ಕಾದು ನೋಡಬೇಕಿದೆ. ವಿದೇಶಗಳಲ್ಲಿ ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ಆರಂಭವಾಗಲಿದೆ.
'ದೃಶ್ಯಂ' ಸರಣಿಯ 2 ಸಿನಿಮಾಗಳನ್ನು ರವಿಚಂದ್ರನ್ ರೀಮೆಕ್ ಮಾಡಿದ್ದರು. ಪಿ. ವಾಸು ಆಕ್ಷನ್ ಕಟ್ ಹೇಳಿದ್ದರು. ಇದೀಗ 3ನೇ ಭಾಗ ನೇರವಾಗಿ ಡಬ್ ಆಗಿ ಕನ್ನಡಕ್ಕೆ ಬರ್ತಿದೆ. ಹಾಗಾಗಿ ಮುಂದೆ ಕ್ರೇಜಿಸ್ಟಾರ್ ರೀಮೆಕ್ ಮಾಡುವುದಿಲ್ಲ ಎನ್ನುವುದು ಖಚಿತವಾಗುತ್ತಿದೆ. ಕನ್ನಡದಲ್ಲಿ 'ದೃಶ್ಯಂ'-2 ಸಿನಿಮಾ ಸೋತಿತ್ತು. ತಮಿಳು, ತೆಲುಗಿನಲ್ಲಿ ಕೂಡ ಸಿನಿಮಾ ರೀಮೆಕ್ ಆಗುವುದಿಲ್ಲ. ಆದರೆ ಹಿಂದಿಯಲ್ಲಿ ಅಜಯ್ ದೇವಗನ್ ರೀಮೆಕ್ ಮಾಡಲು ಮುಂದಾಗಿದ್ದಾರೆ.


Click it and Unblock the Notifications