''ಜೈಲಿಂದ ದರ್ಶನ್ ಹೊರಬಂದರೆ ಮನೆ ತಲುಪೋಕೆ ಒಂದು ದಿನ ಬೇಕಾಗುತ್ತೆ''...!
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅರೆಸ್ಟ್ ಆಗಿ ಒಂದು ತಿಂಗಳು ಕಳೆದಿದೆ. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ನಟ ಮತ್ತು ಅವರ ಗ್ಯಾಂಗ್ ಮಾಡಿದ ಕೃತ್ಯವನ್ನು ಕಂಡು ಮರುಕ ಪಟ್ಟಿದ್ದಾರೆ. ʻಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಒಬ್ಬ ನಟ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಕೊರಗುತ್ತಿದ್ದಾರೆ.
ಆದರೆ.. ಇನ್ನೂ ಕೆಲವರು ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಮಾಡಬಾರದ ಕೆಲಸಗಳನ್ನೆಲ್ಲಾ ಮಾಡುತ್ತಿದ್ದಾರೆ. ಉಳಿದವರು ದರ್ಶನ್ ಮಾಡಿರುವ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ, ಭಾವನಾ.. ಸಂಜನಾ.. ಸೇರಿ ಕನ್ನಡ ಚಿತ್ರರಂಗದ ಅನೇಕರು ದರ್ಶನ್ ಗೆ ಬಹುಪರಾಕ್ ಹಾಕುತ್ತಿದ್ದಾರೆ. ಈ ಸಾಲಿಗೀಗ ಅಯೋಗ್ಯ ಮಹೇಶ್ ಕೂಡ ಸೇರಿಕೊಂಡಿದ್ದಾರೆ.

ಹೌದು, ಮಹೇಶ್ ಕುಮಾರ್.. ಒಂದ್ಕಾಲದಲ್ಲಿ ಯೋಗರಾಜ್ ಭಟ್ ಅವರ ಕ್ಯಾಂಪಿನ ಖಾಯಂ ಸದಸ್ಯ. ಆ ನಂತರ ಅಯೋಗ್ಯ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಮಹೇಶ್ ಮದಗಜ ಎಂಬ ಚಿತ್ರವನ್ನೂ ಕೂಡ ನಿರ್ದೇಶಿಸಿದ್ದರು. ಇನ್ನೂ ಮಹೇಶ್ ಅವರದ್ದು ಮಾರ್ಕೆಟಿಂಗ್‌ನಲ್ಲಿ ಕೂಡ ಎತ್ತಿದ ಕೈ. ಹೀಗಾಗಿಯೇ ಅನೇಕ ನಿರ್ದೇಶಕರು-ನಿರ್ಮಾಪಕರು ತಮ್ಮ ಚಿತ್ರದ ಪ್ರಚಾರಕ್ಕೆ ಇವರ ನೆರವನ್ನೂ ಪಡೆಯುತ್ತಾರೆ ಕೂಡ. ಹೀಗೆ ನಿರ್ದೇಶಕ.. ಪ್ರಚಾರ ಮಾಂತ್ರಿಕ ಎಂದೆಲ್ಲ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾದ ಮಹೇಶ್ ರಾಬರ್ಟ್ ಚಿತ್ರದ ಮುಖೇನ ದರ್ಶನ್ ಅವರಿಗೂ ಕೂಡ ಹತ್ತಿರವಾಗಿದ್ದರು. ಕಾಟೇರ ಚಿತ್ರದ ಪ್ರಚಾರದಲ್ಲಿ ಕೂಡ ಕೈ ಜೋಡಿಸಿದ್ದರು.
ಇಂಥಾ ಮಹೇಶ್ ಈಗ ದರ್ಶನ್ ಪರ ಮಾತನಾಡಿದ್ದಾರೆ. ಎಲ್ಲರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ದರ್ಶನ್ ಈ ಬಾರಿ ಜೈಲಿಂದ ಆಚೆ ಬಂದರೆ ಮನೆ ತಲುಪಲು ಒಂದು ದಿನ ಆಗಬಹುದು ಎಂದು ಹೇಳಿದ್ಧಾರೆ. ತಮ್ಮ ಈ ಮಾತುಗಳಿಗೆ ಸಾರಥಿ ಚಿತ್ರದ ಉದಾಹರಣೆಯನ್ನಾಗಿಯೂ ಕೂಡ ನೀಡಿದ್ದಾರೆ.

ಹೌದು, ಮಾಧ್ಯಮದವರ ಜೊತೆ ಮಾತನಾಡಿರುವ ಮಹೇಶ್, ಅಂದು ಜೈಲಿಂದ ದರ್ಶನ್ ರಿಲೀಸ್ ಆದಾಗ, 'ಸಾರಥಿ' ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಬಳಿ ಬರುವುದಕ್ಕೆ ದರ್ಶನ್ ಅವರಿಗೆ 2-3 ಗಂಟೆ ಬೇಕಾಗಿತ್ತು. ಆ ರೀತಿಯ ಮೆರವಣಿಗೆ ನಡೆದಿತ್ತು. ಈಗ ಅವರು ಜೈಲಿಂದ ರಿಲೀಸ್ ಆದರೆ, ಅಲ್ಲಿಂದ ಅವರು ಮನೆಗೆ ತಲುಪುವುದಕ್ಕೆ ಬಹುಶಃ ಒಂದು ದಿನ ಆಗಬೋದು. ಅದಕ್ಕಾಗಿ ಫ್ಯಾನ್ಸ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ ಮಹೇಶ್.
ಇಷ್ಟೇ ಅಲ್ಲ ದರ್ಶನ್ ಅವರನ್ನು ಭೇಟಿಯಾಗೋಕೆ ಜೈಲಿಗೆ ನಾನು ಹೋಗುತ್ತೇನೆ. 10-12 ವರ್ಷಗಳಿಂದ ದರ್ಶನ್ ಅವರು ನನಗೆ ಗೊತ್ತು. 'ರಾಬರ್ಟ್' ಸಿನಿಮಾದಿಂದ ನಾನು ಅವರಿಗೆ ತುಂಬ ಹತ್ತಿರವಾದೆ. 'ಕಾಟೇರ' ಸಿನಿಮಾದಿಂದ ನಮ್ಮ ನಡುವಿನ ಒಡನಾಟ ಇನ್ನೂ ಜಾಸ್ತಿ ಆಯಿತು ಎಂದಿರುವ ಮಹೇಶ್ ಕುಮಾರ್, ನನ್ನನ್ನು ಅವರು ನಿರ್ದೇಶಕರೇ ಎಂದು ಗೌರವದಿಂದ ಮಾತನಾಡಿಸುತ್ತಿದ್ದರು. ಯಾರೇ ನಿರ್ದೇಶಕರಿದ್ದರೂ, ಅವರನ್ನು ಹೆಸರಿಡಿದು ಕರೆಯೋದಿಲ್ಲ. ನಿರ್ದೇಶಕರೇ ಎಂದೇ ಕರೆಯುತ್ತಾರೆ ಎಂದು ಹೇಳುವ ಮೂಲಕ ದರ್ಶನ್ ಅವರ ಸರಳತೆ ವಿನಯತೆಗೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನು ಮಹೇಶ್ ಮಾಡಿದ್ದಾರೆ. ದರ್ಶನ್ ಅವರ ಮೇಲೆ ಆಪಾದನೆ ಅಷ್ಟೇ ಇದೆ.ಅವರಿನ್ನೂ ಆರೋಪಿ ಅಷ್ಟೇ. ಅಪರಾಧಿ ಅಲ್ಲ ಎಂದು ವಕಾಲತ್ತನ್ನೂ ಮಾಡಿದ್ದಾರೆ.

ಇನ್ನೂ ಆ ದಿನ ಅಲ್ಲಿ ಏನು ನಡೆಯಿತು ಎಂಬುದು ನಮಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಅದಕ್ಕೆಂದೇ ತುಂಬ ವರ್ಷಗಳು ಓದಿಕೊಂಡಿರುವ ಲಾಯರ್‌ಗಳು, ಜಡ್ಜ್‌ಗಳು ಇದ್ದಾರೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿರುವ ಮದಗಜ ಚಿತ್ರದ ನಿರ್ದೇಶಕ ಮಹೇಶ್, ಅವರು ಅಪರಾಧಿನಾ? ಅಲ್ವಾ ಅಂತ ಹೇಳೋದಕ್ಕೆ ನಮಗ್ಯಾರಿಗೂ ಹಕ್ಕುಗಳಿಲ್ಲ. ಆ ಹಕ್ಕು ಇರುವುದು ನ್ಯಾಯಾಲಯಕ್ಕೆ ಮಾತ್ರ. ಆದಷ್ಟು ಬೇಗ ಸತ್ಯ ಆಚೆ ಬರಲಿ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಮಹೇಶ್, ಬಾಸ್ ಜೈಲಲ್ಲಿ ಇದ್ದರೂ ಹವಾ ನಡೆಯುತ್ತದೆ, ಹೊರಗೆ ಬಂದರೂ ಹವಾ ಇರುತ್ತೆ ಎಂದು ಹೇಳಿದ್ದಾರೆ. ದರ್ಶನ್ ಅವರು ಚಿತ್ರರಂಗದ ಮೆರುನಟ, ಚಿತ್ರರಂಗಕ್ಕೆ ಒಂದು ತೂಕ. ಅವರು ಎಷ್ಟು ಬೇಗ ಆಚೆ ಬರುತ್ತಾರೋ, ಅಷ್ಟು ಚಿತ್ರರಂಗಕ್ಕೆ ಒಳ್ಳೇದಾಗುತ್ತದೆ ಎಂದಿದ್ದಾರೆ. ಅವರು ಕನ್ನಡ ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡಲ್ಲ. ಅವರಿದ್ದರೆ, ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ದರ್ಶನ್ ಅವರು ನಿರಪರಾಧಿಯಾಗಿ ಹೊರಗೆ ಬರಲಿ ಎಂಬುದು ನನ್ನ ಪ್ರಾರ್ಥನೆ ಎಂದು ಹೇಳಿದ್ದಾರೆ ಮಹೇಶ್ ಕುಮಾರ್.


Click it and Unblock the Notifications











