ಸ್ಯಾಂಡಲ್ ವುಡ್ ಬಾಕ್ಸಾಫೀಸ್ ನಲ್ಲಿ 'ಚಂದ್ರಿಕ' ಹೊಸ ಅಲೆ
ಕನ್ನಡ ಚಿತ್ರರಂಗದಲ್ಲಿ ಹಾರರ್ ಮೂವಿ ಅಂದ್ರೆ ಕೆಲವರಿಗೆ ತಮಾಷೆಯ ವಸ್ತು ಯಾಕಂದ್ರೆ, ಸ್ಯಾಂಡಲ್ ವುಡ್ ನಲ್ಲಿ ಹಾರರ್ ಮೂವಿ ಅಂದ್ರೆ ಕಿಟಕಿಯ ಬಳಿ ನೆರಳಾಡಿ, ಯಾರೋ ಅತ್ತಿತ್ತ ಚಲಿಸಿದಂತಾಗುವುದು ಜೊತೆಗೆ ಬಿಳಿ ಸೀರೆ ಉಟ್ಟ ಯುವತಿಯೊಬ್ಬಳು ಕತ್ತಲಲ್ಲಿ ನಡೆದಾಡುವುದು ಇವಿಷ್ಟು ಇದ್ದರೆ ಹಾರರ್ ಮೂವಿ ಆಗುತ್ತೆ ಅಂತ ಭಾವಿಸುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ.
ಆದ್ರೆ ಮೊನ್ನೆ ಶುಕ್ರವಾರ (ಸೆಪ್ಟೆಂಬರ್ 25) ದಂದು ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ನಿರ್ದೇಶಕ ಯೋಗೀಶ್ ಅವರ 'ಚಂದ್ರಿಕ' ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿರುವುದು ಗಾಂಧಿನಗರದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಜೊತೆಗೆ 2015ರಲ್ಲಿ ಬಿಡುಗಡೆಯಾದ ಉತ್ತಮ ಹಾರರ್ ಚಿತ್ರಕ್ಕೆ 'ಚಂದ್ರಿಕ' ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ ಎಂದು ಕನ್ನಡ ಚಿತ್ರರಂಗ ಕ್ಷೇತ್ರದ ಅಭಿಪ್ರಾಯ.
ಕಿರುತೆರೆ ಕ್ಷೇತ್ರದಲ್ಲಿ ತಮ್ಮ ಸ್ಟೈಲಿಷ್ ಹಾಗೂ ಖಡಕ್ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿರುವ 'ಅಶ್ವಿನಿ ನಕ್ಷತ್ರ' ಖ್ಯಾತಿಯ ಜೆಕೆ ಅಲಿಯಾಸ್ ಕಾರ್ತೀಕ್ ಜಯರಾಮ್, ಪರಬಾಷಾ ನಟಿ ಕಾಮ್ನಾ ಜೇಠ್ಮಲಾನಿ ಹಾಗೂ ಶ್ರೀಮುಖಿ ಲೀಡ್ ರೋಲ್ ನಲ್ಲಿ ನಟಿಸಿರುವ 'ಚಂದ್ರಿಕ' ಅತ್ತ ಹಾರರ್ ಅಲ್ಲದೆ ಇತ್ತ ಫ್ಯಾಮಿಲಿ ಡ್ರಾಮಾ ಅಲ್ಲದೇ ವಿಭಿನ್ನವಾಗಿದ್ದು, ಪ್ರೇಕ್ಷಕರ ಮನಗೆಲ್ಲುತ್ತಿದೆ.
ಒಟ್ನಲ್ಲಿ ಈ ವರ್ಷ ಬಿಡುಗಡೆಯಾದ ಕೆಲವಾರು ಹೊಸಬರ ಚಿತ್ರಗಳು ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ, ಇದಕ್ಕೆ ಉತ್ತಮ ನಿದರ್ಶನಗಳೆಂದರೆ ಭಂಡಾರಿ ಸಹೋದರರ ಸಸ್ಪೆನ್ಸ್ ಥ್ರಿಲ್ಲರ್-ಮಿಸ್ಟರಿ 'ರಂಗಿತರಂಗ'['ರಂಗಿತರಂಗ' ಚಿತ್ರಕ್ಕೆ ವಿಮರ್ಶಕರು ಜೈ ಅಂದ್ರಾ?] ಈ ವರ್ಷದ ಪ್ರಪಂಚದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನು ಮೊನ್ನೆ ಮೊನ್ನೆ ತೆರೆಕಂಡು ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ನಿರ್ದೇಶಕ ದುನಿಯಾ ಸೂರಿ ಅವರು ಹೊಸ ನಾಯಕ-ನಾಯಕಿಯರನ್ನು ಸೇರಿಸಿಕೊಂಡು ಮಾಡಿರುವ 'ಕೆಂಡಸಂಪಿಗೆ'['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']. ಸದ್ಯಕ್ಕೆ ಇದೀಗ ಇವೆಲ್ಲರ ಸಾಲಿಗೆ ಹೊಸ ಸೇರ್ಪಡೆ ಕಿರುತೆರೆ ನಟನ ಹಾರರ್ ಚಿತ್ರ 'ಚಂದ್ರಿಕ'.
ಅಂದಹಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ಕಲ್ಪನಾ' ಚಿತ್ರದ ನಂತರ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ನೋಡಬಹುದು ಅನ್ನುವಷ್ಟರಮಟ್ಟಿಗೆ 'ಚಂದ್ರಿಕ' ಚಿತ್ರವನ್ನು ನಿರ್ದೇಶಕ ಯೋಗೀಶ್ ಮಾಡಿದ್ದಾರೆ ಎಂದು ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಾರೆ.
ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ ಕೂಡ ಬೆಳ್ಳಿತೆರೆಯಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಇನ್ನೂ ಅಂಬೆಗಾಲಿಕ್ಕುತ್ತಿರುವ ನಟ ಜೆಕೆ ಅವರಿಗೆ 'ಚಂದ್ರಿಕ' ಒಂದೊಳ್ಳೆ ಬ್ರೇಕ್ ನೀಡುವಲ್ಲಿ ಯಶಸ್ವಿಯಾಗಬಹುದೇ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications













