ನೈಜ ಘಟನೆಗಳ ಆಧಾರಿತ ಚಿತ್ರ 'ಗಾಂಧೀಜಿ ಕನಸು'
ನವಭಾರತ ನಿರ್ಮಾಣಕ್ಕಾಗಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಹಲವಾರು ಕನಸುಗಳನ್ನು ಕಂಡಿದ್ದರು. ಶುಚಿತ್ವ ಶೌಚಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಅವರು ಕಂಡ ಪ್ರಮುಖ ಕನಸಾಗಿತ್ತು. ಆ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಚಲನಚಿತ್ರವೊಂದು ನಿರ್ಮಾಣವಾಗಿದೆ.
ಈ ಹಿಂದೆ 7-8 ಚಿತ್ರಗಳಲ್ಲಿ ಅಭಿನಯಿಸಿರುವ ರಮೇಶ್.ಎಸ್.ಪರವಿ ನಾಯ್ಕರ್ ನಿರ್ಮಾಣದ ಜೊತೆ ನಿರ್ದೇಶನ ಮಾಡಿರುವ ಗಾಂಧೀಜಿ ಕನಸು ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ. ಗಾಂಧೀಜಿಯವರ ಚಳವಳಿ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದಂಥ ನೈಜ ಘಟನೆಗಳನ್ನು ಈ ಚಿತ್ರಕ್ಕೆ ಕಥಾ ವಸ್ತುವನ್ನಾಗಿ ಬಳಸಿಕೊಳ್ಳಲಾಗಿದೆ. ['ನವರಂಗಿ' ತಾರೆ ರೂಪಿಕಾ ಪಂಚರಂಗಿ ಚಿತ್ರಗಳು]
ಬೆಳಗಾವಿ, ಗದಗ, ಗೋವಾ ಬಾರ್ಡರ್ ಆನೇಕಲ್ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಾಗಿ ಅಸ್ತಿತ್ವದಲ್ಲಿದ್ದ ಅಸ್ಪೃಷ್ಯತೆ, ಬಾಲ್ಯವಿವಾಹದಂಥ ಗಂಭೀರ ಸಮಸ್ಯೆಗಳನ್ನು ಕೂಡ ಈ ಚಿತ್ರದಲ್ಲಿ ಹೇಳಲಾಗಿದ್ದು ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಶೌಚಾಲಯಗಳನ್ನು ನಿರ್ಮಿಸದೇ ಜನಕ್ಕೆ ವಂಚಿಸುವ ಕಂಟ್ರಾಕ್ಟರ್ ಗಳ ಬಗ್ಗೆ ಕೂಡ ವಿವರಿಸಲಾಗಿದೆ.ಚಿತ್ರದಲ್ಲಿ ಸಚಿವರುಗಳಾದ ಎಸ್.ಆರ್.ಪಾಟೀಲ್, ಹೆಚ್.ಕೆ.ಪಾಟೀಲ್ ಹಾಗೂ ಮಾಜಿ ಸಚಿವ ಆರ್.ವಿ.ತಿಮ್ಮಾಪುರ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಎಸ್.ರಮೇಶ್, ರೂಪಿಕಾ, ಎಂ.ಎನ್.ಲಕ್ಷ್ಮೀದೇವಿ, ಬ್ಯಾಂಕ್ ಜನಾರ್ಧನ್, ಎಂ.ಎಸ್.ಉಮೇಶ್, ಹೊನ್ನವಳ್ಳಿ ಕೃಷ್ಣ, ಮೂಗ್ ಸುರೇಶ್, ರೇಖಾದಾಸ್, ಗುರುರಾಜ ಹೊಸಕೋಟೆ ತಾರಾಗಣವಿದೆ.
ಈ ಚಿತ್ರಕ್ಕೆ ಆರ್.ಗಿರಿಯವರ ಛಾಯಾಗ್ರಹಣ, ಗುರುರಾಜ್ ಹೊಸಕೋಟೆ ಸಂಗೀತ, ಮದನ್ ಹರಿಣಿ ನೃತ್ಯ ನಿರ್ದೇಶನ ಮನು ಸಂಭಾಷಣೆ, ಕೆ.ಈಶ್ವರ್ ಸಂಕಲನ, ಎಸ್.ರಮೇಶ್ ಕಥೆ, ಚಿತ್ರಕಥೆ ರಚಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












