ಬುಡಕಟ್ಟಿನವರ ನಡುಕಟ್ಟು ಬಲು ಚೆಂದ, ಕಾಶೀನಾಥ್
ಎರಡು ದಶಕಗಳ ಹಿಂದೆ 'ಭೂಮಿಗೀತ' ಎನ್ನುವ ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಬದುಕು ಬವಣೆಯನ್ನು ತೋರಿಸಲಾಗಿತ್ತು. ನಂತರ ಅಂತಹ ಪ್ರಯೋಗಾತ್ಮಕ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಪ್ರಸಕ್ತ 'ಗೊರೂಕನ' ಎಂಬ ಹೊಸ ಚಿತ್ರದಲ್ಲಿ ಬಿಳಿಗಿರಿರಂಗನ ಬೆಟ್ಟದ ಸೂಲಿಗಾರರ ಕಥೆಯನ್ನು ಹೆಕ್ಕಿಕೊಂಡು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆ ಹಂತಕ್ಕೆ ಬಂದಿದೆ.
ಚಿತ್ರದ ಪ್ರಚಾರ ಕಾರ್ಯ ಮೊದಲ ಅಂಗವಾಗಿ ಹಾಡುಗಳ ಧ್ವನಿಸಾಂದ್ರಿಕೆ ಇತ್ತೀಚೆಗೆ ಹೊಂಬೆಗೌಡ ಕಾಲೇಜಿನಲ್ಲಿ ಅನಾವರಣಗೊಂಡಿತು. ಐದು ಹಾಡುಗಳಿಗೆ ಸಂಗೀತ ಒದಗಿಸಿರುವ ವಿ.ಮನೋಹರ್ ಮಾತನಾಡುತ್ತಾ ಕಾಮಿಡಿ, ಸೆಂಟಿಮೆಂಟ್, ಆಕ್ಷನ್ ನಂತಹ 100 ಚಿತ್ರಗಳು ಬರುವುದು ಸಾಮಾನ್ಯವಾಗಿದೆ. ಆದರೆ 50 ವರ್ಷದ ಹಿಂದೆ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡಿರುವುದು ನಿರ್ಮಾಪಕಿ ಭಾಗ್ಯ ಚಿನ್ನಸ್ವಾಮಿರವನ್ನು ಮೆಚ್ಚಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಸಿಡಿ ಬಿಡುಗಡೆ ಮಾಡಿದ ಹಿರಿಯ ನಟ ಕಾಶೀನಾಥ್ ಕಾಲೇಜು ದಿನಗಳನ್ನು ನೆನಪಿಸಿಕೊಂಡು, ಈಗಿನ ಕಾಲೇಜು ಹುಡುಗರನ್ನು ನೋಡಿದರೆ ಅಸೂಯೆ ಆಗುತ್ತದೆ. ಕೊನೆಯ ಬೆಂಚ್ ವಿದ್ಯಾರ್ಥಿಯಾಗಿದ್ದರಿಂದಲೇ ನಟ, ನಿರ್ದೇಶಕನಾದೆ. ಬುಡಕಟ್ಟು ಜನಾಂಗದವರ ನಡುಕಟ್ಟು, ತಲೆಕಟ್ಟು ಎಲ್ಲವು ಚೆನ್ನಾಗಿರುತ್ತದೆ.
ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿ ಅಂತ ಅಲವತ್ತುಕೊಂಡು ತಾವೆ ವಂದಾನಾರ್ಪಣೆ ಮಾಡುವಾಗ ಮತ್ತೊಬ್ಬ ಅತಿಥಿ ನಟ ದೀಪಕ್ ಜಸ್ಟ್ ಎರಡು ಗಂಟೆ ತಡವಾಗಿ ಬಂದು ಚಿತ್ರದ ಬಗ್ಗೆ ಕಡಿಮೆ ಮಾತನಾಡಿ ತನ್ನ ವೈಯಕ್ತಿಕ ಸಿನಿಮಾರಂಗದ ಬಗ್ಗೆ ಹೆಚ್ಚು ಹೇಳಿಕೊಂಡರು. ಇದಕ್ಕೂ ಮೊದಲು ನಾಯಕ ನಿಶಾಂತ್ ಮತ್ತು ನಾಯಕಿ ಸೌಜನ್ಯಾ ಚಿತ್ರ ನೋಡಿ ಹರಸಿ ಎಂಬ ಒಕ್ಕೊರಲ ಮಾತುಗಳು ಕೇಳಿಬಂದವು.
ಸಂಭಾಷಣೆಗೆ ಪ್ರಹ್ಲಾದ್ ಪೆನ್ನು ಕೆಲಸ ಮಾಡಿದೆ. ಭಾಗ್ಯ ಚಿನ್ನಸ್ವಾಮಿ ಪುತ್ರನ ವ್ಯಾಮೋಹಕ್ಕೋಸ್ಕರ ನಿರ್ಮಾಣ ಮಾಡಿದ್ದಾರೆ. ಕಾಶಿನಾಥ್ ರ ಸಿನಿಮಾ ಹಾಡಿಗೆ ನೃತ್ಯ ಹಾಗೂ ಹಲವು ಹಿಟ್ ಗೀತೆಗಳಿಗೆ ಕಾಲೇಜು ವಿದ್ಯಾರ್ಥಿಗಳಿಂದ ಡ್ಯಾನ್ಸ್ ಕಾರ್ಯಕ್ರಮವು ಕಣ್ಣಿಗೆ ತಂಪು ತಂದಿತು. ಪ್ರೋ.ಎಸ್.ಜಿ.ಸಿದ್ದರಾಮಯ್ಯ ರವರು ರಚಿಸಿದ ಸಾಹಿತ್ಯವನ್ನು ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಚಿತ್ರವು ಸದ್ಯದಲ್ಲೆ ತೆರೆಗೆ ಬರಲಿದೆ.
ಚಿತ್ರ ತಂಡ, ನಟ ಹರ್ಷ, ಮರಿಯಪ್ಪ ಕಾಲೇಜಿನ ಕಾರ್ಯದರ್ಶಿಗಳಾದ ಲೋಕೇಶ್ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಕಾಲೇಜು ಪ್ರಿನ್ಸಿಪಾಲ್ ನಿರೂಪಣೆಯಲ್ಲಿ ಎಲ್ಲರನ್ನು ವಾದ್ಯಗೋಷ್ಠಿಯಲ್ಲಿ ಹೇಳುವಂತೆ ಹಾಗೂ ಉತ್ರೇಕ್ಷೆ ಮಾತುಗಳು ಅನಾಸಿನ್ ಮಾತ್ರೆಗೆ ಮೊರೆ ಹೋಗುವಂತೆ ಮಾಡಿತು. (ಒನ್ಇಂಡಿಯಾ ಕನ್ನಡ)


Click it and Unblock the Notifications











