ಅಪರೂಪದ ಸಿನಿಮಾಗಳ ಕುರಿತ ಕೃತಿ 'ಗಾಂಧಿ ಸೀಟು'
'ಕನ್ನಡಪ್ರಭ' ಪತ್ರಿಕೆಯ ಸಿನಿಮಾ ವರದಿಗಾರ ಆರ್. ಕೇಶವಮೂರ್ತಿ ಅವರ ಚೊಚ್ಚಲ ಕೃತಿ 'ಗಾಂಧಿ ಸೀಟು' ಲೋಕಾರ್ಪಣೆಗೆ ಸಿದ್ಧವಾಗಿದೆ. ಕಳೆದ ಕೆಲವರ್ಷಗಳಿಂದ ಅವರು 'ಕನ್ನಡಪ್ರಭ'ದ ಸಾಪ್ತಾಹಿಕ ಪುರವಣೆ 'ಖುಷಿ'ಯಲ್ಲಿ ಬರೆದ ಲೇಖನಗಳ ಸಂಗ್ರಹ ಈಗ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.
ಇದೇ ಡಿಸೆಂಬರ್ 22ರ ಭಾನುವಾರ ಬೆಳಿಗ್ಗೆ 10.30ಕ್ಕೆ ಶಿವಾನಂದ ಸರ್ಕಲ್ ಬಳಿ ಇರುವ ಚಿತ್ರಕಲಾ ಪರಿಷತ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಜಾಗತಿಕ ಸಿನಿಮಾ ಬರಹಗಳ ಪುಸ್ತಕ ಅಪರೂಪ ಕೃತಿ ಇದು.

ಖ್ಯಾತ ಚಲನಚಿತ್ರ ನಟ ಮತ್ತು ನಿರ್ದೇಶಕ ಪ್ರಕಾಶ್ ರೈ ಬುಕ್ ಬಿಡುಗಡೆ ಮಾಡಿದರೆ, ಚಿತ್ರ ನಿರ್ದೇಶಕ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾದ ರಾಧಾಕೃಷ್ಣ ಎಸ್. ಭಡ್ತಿ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ.
ಸಿನಿಮಾ ಬರಹಗಳೆಂದರೆ ಅದು ಸಾಹಿತ್ಯವಲ ಕೇವಲ ವರ್ಣರಂಜಿತ ಬರಹವೆಂಬ ಭಾವನೆ ಇದೆ. ಆದರೆ ಗಂಭೀರವಾದ ಸಾಹಿತ್ಯವೊಂದು ಕಟ್ಟಿಕೊಡುವ ಬದುಕಿನ ವಿವಿಧ ಆಯಾಮಗಳ ಅನುಭೂತಿ ಸಿನಿಮಾ ಬರಹದಲ್ಲೂ ಸಾಧ್ಯವೆಂದು ಈ ಕೃತಿ ರುಜುವಾತು ಮಾಡಿದೆ. ಕೃತಿ ಓದುತ್ತಾ ಹೋರಟರೆ ಜಗತ್ತಿನ ಸಿನಿಮಾಗಳಲ್ಲಿನ ಒಂದು ಪಯಣ ನಿಮಗೆ ಗ್ಯಾರಂಟಿ ಎನ್ನುತ್ತದೆ ಕೃತಿಯ ಬೆನ್ನುಡಿ.
ದೇಶ, ವಿದೇಶಗಳ ಹತ್ತಾರು ಕ್ಲಾಸಿಕ್ ಸಿನಿಮಾಗಳ ಒಳಗೊಂಡ 'ಗಾಂಧಿ ಸೀಟು' ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿದೆ. ಹೋಗಿ ಬನ್ನಿ ಒಂದು, ಈ ವಾರಾಂತ್ಯವನ್ನು ಪುಸ್ತಕ ಓದುತ್ತಾ ಎಂಜಾಯ್ ಮಾಡಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











