ಬೆಳಗಿನ ಜಾವ 3 ಗಂಟೆಗೆ 'ಮಾಣಿಕ್ಯ' ಚಿತ್ರ ನಿರ್ಮಾಪಕನ ಬಂಧನ
ಕನ್ನಡ ಚಿತ್ರ ನಿರ್ಮಾಪಕ ಎನ್. ಎಂ ಕುಮಾರ್ ಬಂಧನವಾಗಿದೆ. ಶನಿವಾರ ಸಂತೆಯ ದೇವ್ಸ್ ವಿಲೇಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಎನ್. ಕುಮಾರ್ ಅವರನ್ನು ಉಪ್ಪಾರ ಪೇಟೆ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಚೆಕ್ ಬೌನ್ಸ್ ಪ್ರಕರಣ ಸಂಬಂಧ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಬೆಳಗಿನ ಜಾವ 3 ಘಂಟೆ ಸುಮಾರಿಗೆ ಉಪ್ಪಾರಪೇಟೆ ಪೊಲೀಸರು ಕನ್ನಡ ಚಿತ್ರ ನಿರ್ಮಾಪಕ ಎನ್. ಎಂ ಕುಮಾರ್ ಅವರನ್ನು ಬಂಧಿಸಿದ್ದಾರೆ. 'ಮಾಣಿಕ್ಯ', 'ಅಂಜನಿಪುತ್ರ', 'ಕಿರಿಕ್ ಶಂಕರ', 'ಮುಕುಂದ ಮುರಾರಿ', ಸೇರಿದಂತೆ ಹಲವು ಸಿನಿಮಾಗಳನ್ನು ಎಂ ಎನ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಕನ್ನಡ ಹಿರಿಯ ನಟರೊಬ್ಬರಿಗೆ 1.25 ಕೋಟಿ ರೂಪಾಯಿ ಹಣ ನೀಡಬೇಕಾದ ವಿಚಾರದಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿ ಎಂ. ಎನ್ ಕುಮಾರ್ ಅವರನ್ನು ಬಂಧಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಪ್ರಕರಣದ ಸಂಬಂಧ ಕೋರ್ಟ್‌ನಲ್ಲಿ ವಾದ, ವಿವಾದ ನಡೆದು ಬಳಿಕ ನ್ಯಾಯಾಧೀಶರ ಆದೇಶದಂತೆ ಎಂ ಎನ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೆಡಿಕಲ್ ಟೆಸ್ಟ್‌ಗೆ ಕರೆದುಕೊಂಡು ಹೋಗಲಾಗಿದೆ ಎನ್ನುವ ಮಾಹಿತಿ ಸಿಗುತ್ತಿದೆ.
ನಟ ಸುದೀಪ್ ತಮ್ಮಿಂದ ಅಡ್ವಾನ್ಸ್ ಹಣ ಪಡೆದು ಸಿನಿಮಾಗೆ ಡೇಟ್ಸ್ ಕೊಡದೇ ಸತಾಯಿಸುತ್ತಿದ್ದಾರೆ 2 ವರ್ಷದ ಹಿಂದೆ ನಿರ್ಮಾಪಕ ಎಂ. ಎನ್ ಕುಮಾರ್ ಆರೋಪ ಮಾಡಿದ್ದರು. ಈ ವಿಚಾರ ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಕುಮಾರ್ ಬೆನ್ನಲ್ಲೇ ಹುಚ್ಚ ಸಿನಿಮಾ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಆರೋಪಿಸಿದ್ದರು.
ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಿರ್ಮಾಪಕರಾದ ಎಂ.ಎನ್ ಕುಮಾರ್ ಹಾಗೂ ಎಂ.ಎನ್ ಸುರೇಶ್ ವಿರುದ್ಧ ನಟ ಸುದೀಪ್ ತಿರುಗಿ ಬಿದ್ದಿದ್ದರು. ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರ ಸಾರಿದ್ದರು. ಕ್ಷಮೆ ಕೇಳಬೇಕು, ಆರೋಪಕ್ಕೆ ಸೂಕ್ತ ದಾಖಲೆ ಕೊಡಬೇಕು ಎಂದು ಸುದೀಪ್ ಲೀಗಲ್ ನೋಟಿಸ್ ನೀಡಿದ್ದರು. ಉತ್ತರ ಸಿಗದ ಕಾರಣ ದೂರು ದಾಖಲಿಸಿದ್ದರು.
ಸುದೀಪ್ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಂತೆ ಎಂ. ಎನ್ ಕುಮಾರ್ ಸೈಲೆಂಟ್ ಆಗಿದ್ದರು. ವಾಣಿಜ್ಯ ಮಂಡಳಿಯಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಮುಂದಾಗಿದ್ದರು. ವಾಣಿಜ್ಯ ಮಂಡಳಿ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದರು. ಕೋರ್ಟಿನ ಹೊರಗೆ ಮಾತುಕಥೆ ನಡೆಸಿ ವಿಚಾರ ಇತ್ಯರ್ಥ ಮಾಡಿಕೊಳ್ಳುವುದಾಗಿ ತಿಳಿಸಿದ್ದರು.


Click it and Unblock the Notifications











