ಸಿನಿಮಾ ಬಂತು, ಈಗ ಮಕ್ಕಳಿಗಾಗಿ 'ಡಬ್ಬಿಂಗ್ ಕಾರ್ಯಕ್ರಮ' ಬರಲಿ
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಗೆ ವಿರೋಧವಿದೆ. ಈ ವಿರೋಧದ ನಡುವೆಯೂ ಡಬ್ಬಿಂಗ್ ಸಿನಿಮಾಗಳು ಈಗ ರಿಲೀಸ್ ಆಗುತ್ತಿವೆ. ಜನರ ಥಿಯೇಟರ್ ಗೆ ಹೋಗಿ ಡಬ್ಬಿಂಗ್ ಚಿತ್ರಗಳನ್ನ ನೋಡುವ ಆಸಕ್ತಿ ತೋರುತ್ತಿದ್ದಾರೆ. ಅದರ ಪರಿಣಾಮ ಹೆಚ್ಚು ಹೆಚ್ಚು ಡಬ್ಬಿಂಗ್ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿದೆ.
ಈಗ ಡಬ್ಬಿಂಗ್ ಗೆ ಸಂಬಂಧಪಟ್ಟಂತೆ ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ಡಬ್ಬಿಂಗ್ ಪರ ಬೆಂಬಲಿಗರು ಮನಸ್ಸು ಮಾಡಿದ್ದಾರೆ. ಹೌದು, ಮಕ್ಕಳಿಗಾಗಿ ಬೇರೆ ಭಾಷೆಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ಕನ್ನಡದಲ್ಲಿಯೂ ಬರಲಿ ಎಂದು ಹೊಸ ಅಭಿಯಾನ ಆರಂಭಿಸಿದ್ದಾರೆ.
ಉದಾಹರಣೆಗೆ ಪೋಗೋ, ಕಾರ್ಟೂನ್ ನೆಟ್ವರ್ಕ್ ಚಾನಲ್ ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ದೇಶದ ಹಲವು ಭಾಷೆಯಲ್ಲಿ ಲಭ್ಯವಿದೆ. ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಭಾಷೆಯಲ್ಲಿ ಬರ್ತಿದೆ. ಆದ್ರೆ, ಕನ್ನಡದಲ್ಲಿ ಮಾತ್ರ ಪ್ರಸಾರವಾಗುತ್ತಿಲ್ಲ. ಹೀಗಾಗಿ, ಈ ಕಾರ್ಯಕ್ರಮಗಳನ್ನ ಕನ್ನಡದಲ್ಲೂ ನೋಡುವಂತಾಗಬೇಕೆಂದು ಕನ್ನಡ ಗ್ರಾಹಕರ ಕೂಟ ತಮ್ಮ ಅಭಿಪ್ರಾಯವನ್ನ ಮಂಡಿಸಿದೆ.

''ಕನ್ನಡಕ್ಕೆ ಡಬ್ ಆದ ಚಿತ್ರಗಳು ಕರ್ನಾಟಕದಲ್ಲಿನ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿವೆ. ಇದನ್ನ ಪೋಗೋ, ಕಾರ್ಟೂನ್ ನೆಟ್ವರ್ಕ್ ಮೊದಲಾದ ಚಾನಲ್ ಗಳ ಗಮನಕ್ಕೆ ತಂದು ಕನ್ನಡದ ಮಕ್ಕಳಿಗೆ ಕನ್ನಡದಲ್ಲಿ ಕಾರ್ಯಕ್ರಮಗಳನ್ನ ಕೊಡಲು ಶುರುಮಾಡಿ ಎಂದು ತಿಳಿಸಬೇಕಿದೆ. ಕನ್ನಡದ ಮಕ್ಕಳಿಗೆ ಕನ್ನಡದಲ್ಲಿ ಮನೋರಂಜನೆ ಸಿಗುವಂತಾಗಿಸೋಣ'' ಎಂದು ಕನ್ನಡ ಗ್ರಾಹಕರ ಕೂಟ ಟ್ವೀಟ್ ಮಾಡಿದೆ.
ಇಂದು ತಮಿಳು ನಟ ಅಜಿತ್ ಅಭಿನಯದ ಡಬ್ಬಿಂಗ್ ಸಿನಿಮಾ 'ಕಮಾಂಡೊ' ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸುಮಾರು 80 ರಿಂದ 90 ಚಿತ್ರಮಂದಿರದಲ್ಲಿ 'ಕಮಾಂಡೊ' ಪ್ರದರ್ಶನವಾಗುತ್ತಿದೆ. ಈ ಮೂಲಕ ಡಬ್ಬಿಂಗ್ ಚಿತ್ರಗಳಿಗೆ ಈ ಹಿಂದೆ ಇದ್ದಂತಹ ಆತಂಕ ಈಗಿಲ್ಲದಂತಾಗಿದೆ.
ಇನ್ನು ಮಕ್ಕಳ ಕುರಿತು, ಮಕ್ಕಳು ನೋಡುವಂತಹ ಅನೇಕ ಸಿನಿಮಾಗಳು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮೂಡಿಬರುತ್ತೆ. ಆದ್ರೆ, ಆ ಸಿನಿಮಾಗಳನ್ನ ಕನ್ನಡದಲ್ಲಿ ಡಬ್ ಮಾಡುವುದಿಲ್ಲ. ಈ ರೀತಿಯ ಸಿನಿಮಾಗಳನ್ನ ಡಬ್ ಮಾಡುವುದರಿಂದ ನಮ್ಮ ಮಕ್ಕಳು ಕನ್ನಡದಲ್ಲಿಯೇ ಸಿನಿಮಾ ನೋಡುವಂತಾಗುತ್ತೆ ಎಂಬುದು ಹಲವರ ಅಭಿಪ್ರಾಯ.


Click it and Unblock the Notifications











