ಭರವಸೆ ಮೂಡಿಸುವ 'ಅಂದವಾದ' ಟ್ರೈಲರ್: ಇದೇ 25ಕ್ಕೆ ಚಿತ್ರ ಬಿಡುಗಡೆ
ನವಿರಾದ ಪ್ರೇಮಕಥೆ ಹೊಂದಿರುವ 'ಅಂದವಾದ' ಟ್ರೈಲರ್ ಬಿಡುಗಡೆ ಆಗಿದೆ. ಬಹುತೇಕ ಹೊಸಬರೇ ಸಿದ್ಧಪಡಿಸಿರುವ 'ಅಂದವಾದ' ಚಿತ್ರದ ಟ್ರೈಲರ್ ಇದೀಗ ಯೂಟ್ಯೂಬ್ ನಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.
ಗುರುಕಿರಣ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿರುವ 'ಅಂದವಾದ' ಚಿತ್ರದ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಅಂದವಾದ' ಟ್ರೈಲರ್ ನೋಡಿದ್ರೆ, ಚಿತ್ರದಲ್ಲಿ ಅಂದವಾದ ಪ್ರೇಮ ಕಥೆ ಇರುವುದು ಸ್ಪಷ್ಟವಾಗುತ್ತದೆ.
ನಾಯಕ-ನಾಯಕಿಯ ಪ್ರೇಮ ಸನ್ನಿವೇಶ, ತಾಕಲಾಟ, ಮೌನ ಸಂಭಾಷಣೆ ನೋಡುಗರನ್ನು ಸೆಳೆದಿಡುತ್ತಿದೆ. ನವಿರಾದ ಬಾಲ್ಯದ ಎಳೆಯೂ ಒಂದು ದೃಶ್ಯದಲ್ಲಿ ಕಾಣುತ್ತದೆ. ಒಟ್ಟಾರೆ ಚಿತ್ರವು ಯುವ ಮನಸ್ಸುಗಳಿಗೆ ಮುದ ನೀಡುತ್ತದೆ ಎಂಬುದನ್ನು ಟ್ರೈಲರ್ ಬಿಚ್ಚಿಡುತ್ತದೆ.

Recommended Video
ಚಿತ್ರವನ್ನು ಚಲ ಎಂಬುವವರು ನಿರ್ದೇಶನ ಮಾಡಿದ್ದಾರೆ. ಮಧುಶ್ರೀ ಗೋಲ್ಡನ್ ಫ್ರೇಮ್ಸ್ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಕ್ರಮ್ ವರ್ಮನ್ ರಾಗ ಸಂಯೋಜನೆ ಮಾಡಿದ್ದಾರೆ.
'ಅಂದವಾದ' ಚಿತ್ರದಲ್ಲಿ ಜೈ ನಾಯಕನಾಗಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರ ಅಕ್ಕ ಅನುಷಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮುನ್ನ ಅನುಷಾ ರಂಗನಾಥ್ 'ಸೋಡಾಬುಡ್ಡಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯ ಧಾರಾವಾಹಿಯಲ್ಲೂ ಅಭಿನಯಿಸಿದ್ದರು. ಉಳಿದಂತೆ ಚಿತ್ರದಲ್ಲಿ ಶ್ರೀಧರ್, ಹರೀಶ್ ರೈ, ಅಮರ್ ಸಲ್ವಾ ತಾರಾಗಣದಲ್ಲಿದ್ದಾರೆ. 'ಅಂದವಾದ' ಚಿತ್ರವು ಇದೇ 25 ರಂದು ತೆರೆಗೆ ಅಪ್ಪಳಿಸಲಿದೆ.


Click it and Unblock the Notifications











