For Quick Alerts
  ALLOW NOTIFICATIONS  
  For Daily Alerts

  'ಬಡವ ರಾಸ್ಕಲ್‌'ಗೂ ಪೈರಸಿ ಕಾಟ, 'ರೈಡರ್‌'ಗಾಗಿ ಠಾಣೆ ಮೆಟ್ಟಿಲೇರಿದ ಲಹರಿ ವೇಲು

  |

  ಕಳೆದ ಶುಕ್ರವಾರ ಬಿಡುಗಡೆ ಆದ ಎರಡೂ ಕನ್ನಡ ಸಿನಿಮಾಗಳಿಗೆ ಪೈರಸಿ ಕಾಟ ಆರಂಭವಾಗಿದೆ. ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಸಿನಿಮಾ ಪೈರಸಿ ಆಗಿತ್ತು. ಅದರ ಬಳಿಕ ಡಾಲಿ ಧನಂಜಯ್ ಅವರ 'ಬಡವ ರಾಸ್ಕಲ್' ಸಿನಿಮಾ ಸಹ ಪೈರಸಿ ಆಗಿದೆ.

  ಕಳೆದ ಶುಕ್ರವಾರ ಬಿಡುಗಡೆ ಆಗಿದ್ದ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಸೋಮವಾರದಂದು ಸಿನಿಮಾದ ಪೈರಸಿ ಕಾಪಿ ಅಂತರ್ಜಾಲದಲ್ಲಿ ಹರಿದಾಡಲು ಆರಂಭಿಸಿದೆ.

  ಈ ಬಗ್ಗೆ ಆತಂಕಿತರಾಗಿರುವ 'ಬಡವ ರಾಸ್ಕಲ್' ತಂಡ ತಮ್ಮ ಸಿನಿಮಾದ ಪೈರಸಿ ಲಿಂಕ್‌ಗಳನ್ನು ಅಂತರ್ಜಾಲದಿಂದ ತೆಗೆಸಿ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

  ''ಯಾರೊ ಕ್ರಿಮಿಗಳು ನಮ್ಮ ಸಿನಿಮಾದ ವಿರುದ್ಧ ಈ ಕುತಂತ್ರ ಮಾಡಿದ್ದಾರೆ. ಸಿನಿಮಾ ಪೈರಸಿ ಮಾಡಿದ ಕ್ರಿಮಿನಲ್‌ಗಳನ್ನು ಸುಮ್ಮನೆ ಬಿಡಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡೇ ತೀರುತ್ತೇವೆ'' ಎಂದು 'ಬಡವ ರಾಸ್ಕಲ್' ನಿರ್ದೇಶಕ ಶಂಕರ್ ಅಬ್ಬರಿಸಿದರು.

  'ಬಡವ ರಾಸ್ಕಲ್' ಸಿನಿಮಾ ಬಿಡುಗಡೆ ಆದ ದಿನದಂದೇ ಬಿಡುಗಡೆ ಆಗಿರುವ ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಸಿನಿಮಾಕ್ಕೂ ಪೈರಸಿ ಕಾಟ ಎದುರಾಗಿದೆ. ಸಿನಿಮಾದ ಪೈರಸಿ ಕಾಪಿಯು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

  ತಮ್ಮ ಸಿನಿಮಾವನ್ನು ಪೈರಸಿ ಮಾಡಿದವರ ವಿರುದ್ಧ ಸಿನಿಮಾದ ನಿರ್ಮಾಪಕ ಲಹರಿ ಸಂಸ್ಥೆಯ ವೇಲು ಅವರು ದೂರು ನೀಡಿದ್ದಾರೆ. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಅವರನ್ನು ಭೇಟಿಯಾಗಿದ್ದ ಲಹರಿ ವೇಲು ತಮ್ಮ ನಿರ್ಮಾಣ ಸಂಸ್ಥೆಯಿಂದ ದೂರು ನೀಡಿದ್ದಾರೆ. ಪೈರಸಿ ಮಾಡಿದವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.

  'ರೈಡರ್' ಸಿನಿಮಾದ ಪೈರಸಿ ಬಗ್ಗೆ ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ನಟ ನಿಖಿಲ್ ಕುಮಾರಸ್ವಾಮಿ, ''ನಮ್ಮ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಳ್ತಾ ಇದೆ. ಆದರೆ ಇದೀಗ ಇಡೀ ತಂಡಕ್ಕೆ ದುಃಖ ಆಗುವ ಘಟನೆ ನಡೆದಿದೆ. ಇಂದು ಲಹರಿ ಸಂಸ್ಥೆಯ ವೇಣು ಅವರು ಕರೆ ಮಾಡಿ, 'ರೈಡರ್' ಸಿನಿಮಾದ ಪೈರಸಿ ಆಗಿದೆ, ತಮಿಳು ರಾಕರ್ಸ್ ವೆಬ್‌ಸೈಟ್‌ನಲ್ಲಿ ಸಿನಿಮಾ ಇದೆ ಎಂದರು. ತುಂಬ ಕಷ್ಟ ಪಟ್ಟು, ಎರಡು ವರ್ಷ ಶ್ರಮ ಹಾಕಿ 'ರೈಡರ್' ಸಿನಿಮಾ ಮಾಡಿದ್ದೇವೆ. ಸಿನಿಮಾದ ಒಬ್ಬ ನಿರ್ಮಾಪಕರಾದ ಸಂತೋಶ್ ಅವರು ಬಡ್ಡಿಗೆ ಹಣ ತಂದು ಸಿನಿಮಾದ ಮೇಲೆ ಹಾಕಿದ್ದಾರೆ'' ಎಂದಿದ್ದರು.

  ''ಇದು ಬಹಳ ಕಷ್ಟದ ಸಮಯ. ಈ ಸಂದರ್ಭದಲ್ಲಿ ಒಂದು ಒಳ್ಳೆ ಸಿನಿಮಾ ಮಾಡುವುದು ಬಹಳ ಕಷ್ಟವಿದೆ. ನಾನು ಇಂದು ಕನ್ನಡಿಗರಲ್ಲಿ ಕೈ ಜೋಡಿಸಿ ಮನವಿ ಮಾಡ್ತೇನೆ, ಕನ್ನಡಿಗರು ಪೈರಸಿಗೆ ಬೆಂಬಲ ಕೊಡಬಾರದು, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ನಮ್ಮ ಸಿನಿಮಾ ಚೆನ್ನಾಗಿದೆ ಎಂದೇ ನಾವು ಹೇಳುತ್ತೇವೆ, ಆದರೆ ನೀವು 'ರೈಡರ್' ಸಿನಿಮಾ ವೀಕ್ಷಿಸಿರುವ ನಿಮ್ಮ ಸ್ನೇಹಿತರು, ಬಂಧುಗಳ ಅಭಿಪ್ರಾಯ ಕೇಳಿಕೊಂಡು ಸಿನಿಮಾಕ್ಕೆ ಬನ್ನಿ , ನಾವು ಪೈರಸಿಗೆ ಬಲಿ ಆಗ್ತಾ ಇದ್ದೀವಿ. ಒಟಿಟಿ, ಸ್ಯಾಟಲೈಟ್, ಡಿಜಿಟಲ್ ಆಗಮನದಿಂದ ಚಿತ್ರಮಂದಿರಕ್ಕೆ ಜನ ಬರುವುದಿಲ್ಲ ಎಂದುಕೊಂಡಿದ್ದೆವು. ಆದರೆ ನಮ್ಮ 'ರೈಡರ್' ಸಿನಿಮಾಕ್ಕೆ ಜನ ಬರುತ್ತಿದ್ದಾರೆ. ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಕೈ ಬಿಡುವುದಿಲ್ಲ ಎಂಬುದನ್ನು ತೋರಿಸಿದ್ದಾರೆ. ಆದರೆ ಈ ಪೈರಸಿಯಿಂದ ನಮ್ಮ ಸಿನಿಮಾ ಬಲಿ ಆಗಬಾರದು. ನಾನು ಪ್ರಚಾರ ಕಾರ್ಯದಲ್ಲಿರುವ ಕಾರಣ ನಿರ್ಮಾಪಕರೊಟ್ಟಿಗೆ ಈ ಬಗ್ಗೆ ಮಾತನಾಡಲು ಆಗಿಲ್ಲ. ಇಂದು ರಾತ್ರಿ ನಿರ್ಮಾಪಕರ ಬಳಿ ಮಾತನಾಡಿ, ಪೈರಸಿ ವಿರುದ್ಧ ಕೈಗೊಳ್ಳಬೇಕಾದ ಕಾನೂನು ಕ್ರಮದ ಬಗ್ಗೆ ಚರ್ಚೆ ಮಾಡುತ್ತೇನೆ'' ಎಂದಿದ್ದರು.

  English summary
  Kannada movie Badava Rascal and Rider movies were pirated by unknowns. Rider movie pirated copy available on Tamil Rockers, Badava Rascal movie copy also available on Internet.
  Tuesday, December 28, 2021, 12:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X