ನಾಲ್ಕು ದಿನಕ್ಕೆ ರು.4 ಕೋಟಿ ಬಾಚಿದ 'ಭಜರಂಗಿ'
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರದ ಹವಾ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಎಲ್ಲಕಡೆಯಿಂದಲೂ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ.
ಇನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲೂ ಭಜರಂಗಿ ಹೊಸ ದಾಖಲೆ ಕಡೆಗೆ ಮುಂದಡಿ ಇಟ್ಟಿದೆ. ನಾಲ್ಕೇ ದಿನಕ್ಕೆ ನಾಲ್ಕು ಕೋಟಿ ರುಪಾಯಿ ಬಾಚಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಮಂಜುನಾಥ್ ಗೌಡ. ಈಗಾಗಲೆ ಸ್ಯಾಟಲೈಟ್ ರೈಟ್ಸ್ ರು.3.15 ಕೋಟಿಗೆ ಮಾರಾಟವಾಗಿದೆಯಂತೆ. [ಭಜರಂಗಿ ಚಿತ್ರವಿಮರ್ಶೆ]
ಸರಿಸುಮಾರು ರು.9 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ 'ಭಜರಂಗಿ' ಚಿತ್ರದ ಮುಕ್ಕಾಲು ಪಾಲು ಈಗಾಗಲೆ ಕಲೆಕ್ಷನ್ ಆಗಿದೆ. ಇನ್ನೇನಿದ್ದರೂ ಲಾಭದ ಲೆಕ್ಕಾಚಾರವಷ್ಟೇ. ಶಿವಣ್ಣ ಸಹ ಭಾರಿ ಬ್ರೇಕ್ ನಿರೀಕ್ಷೆಯಲ್ಲಿದ್ದರು. ಅವರ ವೃತ್ತಿ ಜೀವನದಲ್ಲಿ ಭಜರಂಗಿ ಚಿತ್ರ ಮತ್ತೊಂದು ತಿರುವು ನೀಡಿದೆ.
ಶಿವಣ್ಣ ಅಭಿನಯದ 105ನೇ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಎ. ಹರ್ಷ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಯೋಗಾನಂದ್ ಮುದ್ದಾನ್ ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಚಿತ್ರದ ಪಾತ್ರವರ್ಗದಲ್ಲಿ ಊರ್ವಶಿ, ಬುಲೆಟ್ ಪ್ರಕಾಶ್, ಸಾಧು ಕೋಕಿಲ, ತಬಲ ನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್. ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್. ಲಕ್ಷ್ಮೀದೇವಿ ಇತರರು ಚಿತ್ರದ ತಾರಾಗಣದಲ್ಲಿ ಇದ್ದಾರೆ. (ಏಜೆನ್ಸೀಸ್)


Click it and Unblock the Notifications












