ಹೊಸ ವಿವಾದದ ಸುಳಿಯಲ್ಲಿ ಸಿಲುಕಿದ ಮೇಘನಾ ರಾಜ್ 'ಜಿಂದಾ'
ನಟಿ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಜಿಂದಾ' ಚಿತ್ರ, ಕಳೆದ ವಾರವಷ್ಟೇ ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲನೇ ವಾರ ಪ್ರದರ್ಶನವಾಗುತ್ತಿದೆ. ಈ ಮಧ್ಯೆ 'ಜಿಂದಾ' ಚಿತ್ರ ಹೊಸದೊಂದು ವಿವಾದಕ್ಕೆ ಸಿಲುಕಿಕೊಂಡಿದೆ.
ಬಿಡುಗಡೆಗೂ ಮುಂಚೆ ನಟಿ ಮೇಘನಾ ರಾಜ್ ಬಾಯಿಂದ ಬಂದಿದ್ದ ಡೈಲಾಗ್ ದೊಡ್ಡ ಮಟ್ಟದ ಕಾಂಟ್ರವರ್ಸಿಯನ್ನ ಹುಟ್ಟಿಹಾಕಿತ್ತು. ಈಗ ಬಿಡುಗಡೆಯ ನಂತರ ಮತ್ತೊಂದು ಕಿರಿಕ್ ಶುರುವಾಗಿದೆ. ಈ ಹೊಸ ವಿವಾದ ಹುಟ್ಟಿಕೊಳ್ಳಲು ಕಾರಣ ಕನ್ನಡದ ದೊಡ್ಡ ನಿರ್ಮಾಪಕ ಕೆ.ಮಂಜು.
ಅಷ್ಟಕ್ಕೂ, 'ಜಿಂದಾ' ಚಿತ್ರಕ್ಕೂ, ನಿರ್ಮಾಪಕ ಕೆ.ಮಂಜು ಅವರಿಗೇನು ಸಂಬಂಧ? ಕೆ.ಮಂಜು ಅವರಿಂದ ಸೃಷ್ಟಿಯಾಗಿರುವ ಈ ಕಿರಿಕ್ ಏನು ಎಂಬುದನ್ನ ಮುಂದೆ ನೋಡಿ.........

ಕಥೆ ಕದ್ದಿರುವ ಆರೋಪ
ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡಿರುವ 'ಜಿಂದಾ' ಸಿನಿಮಾ, ಕಥೆ ಕದ್ದಿದೆ ಎಂಬ ಆರೋಪವನ್ನ ನಿರ್ಮಾಪಕ ಕೆ.ಮಂಜು ಮಾಡುತ್ತಿದ್ದಾರೆ.

ಯಾವ ಚಿತ್ರದ ಕಥೆ
ಕನ್ನಡದ 'ಜಿಂದಾ' ಚಿತ್ರ ತಮಿಳಿನ 'ತಗರಾರು' (ತಕರಾರು) ಚಿತ್ರದ ಕಥೆಯನ್ನ ಹೋಲುತ್ತೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರ ಸಂಘಕ್ಕೆ ದೂರಿದ್ದಾರೆ.

ಕೆ.ಮಂಜು ಆರೋಪ ಮಾಡಲು ಕಾರಣ
'ಜಿಂದಾ' ಚಿತ್ರದ ವಿರುದ್ಧ ಕೆ.ಮಂಜು ಆರೋಪ ಮಾಡಲು ಕಾರಣ ತಮಿಳಿನ 'ತಗರಾರು' (ತಕರಾರು) ಚಿತ್ರ. ಯಾಕಂದ್ರೆ, 'ತಗರಾರು' (ತಕರಾರು) ಚಿತ್ರವನ್ನ, ಕನ್ನಡದಲ್ಲಿ ರೀಮೇಕ್ ಮಾಡಲು ನಿರ್ಮಾಪಕ ಕೆ.ಮಂಜು 45 ಲಕ್ಷಕ್ಕೆ ರೀಮೇಕ್ ಹಕ್ಕು ಖರೀದಿಸಿದ್ದಾರೆ. ಹಾಗಾಗಿ, 'ಜಿಂದಾ' ಚಿತ್ರದ ಕಥೆಯೂ, 'ತಗರಾರು' (ತಕರಾರು) ಕಥೆಯೂ ಒಂದೇ ಆಗಿದೆ ಎಂದು ಆರೋಪಿಸಿದ್ದಾರೆ.

ಎರಡು ಚಿತ್ರದಲ್ಲಿ ಒಂದೇ ವ್ಯತ್ಯಾಸವಂತೆ!
ಅಂದ್ಹಾಗೆ, ಕನ್ನಡದ 'ಜಿಂದಾ' ಚಿತ್ರಕ್ಕೂ, ತಮಿಳಿನ 'ತಗರಾರು' (ತಕರಾರು) ಚಿತ್ರಕ್ಕೂ ಇರುವುದು ಒಂದೇ ವ್ಯತ್ಯಾಸವಂತೆ. ತಮಿಳಿನ 'ತಗರಾರು' (ತಕರಾರು) ಚಿತ್ರದಲ್ಲಿ 4 ಜನ ಯುವಕರಂತೆ, ಕನ್ನಡದ 'ಜಿಂದಾ' ಚಿತ್ರದಲ್ಲಿ 6 ಜನ ಯುವಕರಂತೆ. ಅದನ್ನ ಬಿಟ್ಟರೇ, ಉಳಿದ ಕಥೆ ಎಲ್ಲವೂ ಸೇಮ್ ಇದೆ ಎಂದು ಕೆ.ಮಂಜು ಹೇಳುತ್ತಿದ್ದಾರೆ.

ರೀಮೇಕ್ ನಲ್ಲಿ ಪ್ರಜ್ವಲ್ ನಾಯಕ
'ತಗರಾರು' (ತಕರಾರು) ಚಿತ್ರದ ಕನ್ನಡ ರೀಮೇಕ್ ನಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸಲಿದ್ದಾರಂತೆ. ಈ ಚಿತ್ರವನ್ನ ಖ್ಯಾತ ನಿರ್ದೇಶಕ ಸಾಯಿ ಪ್ರಕಾಶ್ ಅವರ ಮಗ ಸಾಯಿಕೃಷ್ಣ ನಿರ್ದೇಶನ ಮಾಡಲಿದ್ದಾರಂತೆ.

ಮುಸ್ಸಂಜೆ ಮಹೇಶ್ ಏನು ಹೇಳ್ತಾರೆ
ಇನ್ನು ಕೆ.ಮಂಜು ಅವರ ಆರೋಪಗಳಿಗೆ ಆಶ್ಚರ್ಯ ವ್ಯಕ್ತಪಡಿಸಿರುವ ಮುಸ್ಸಂಜೆ ಮಹೇಶ್, ಇದು ಕೊಳ್ಳೆಗಾಲದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರವೆಂದು ಸಮರ್ಥಿಸಿಕೊಳ್ಳುತ್ತಾರೆ.


Click it and Unblock the Notifications











