ಸೈಕಾಲಾಜಿಕಲ್ ಥ್ರಿಲ್ಲರ್ 'ಮನರೂಪ' ಚಿತ್ರದ ಚಿತ್ರೀಕರಣ ಮುಕ್ತಾಯ
ದಟ್ಟ ಕಾಡನ್ನು ಸೀಳಿಕೊಂಡ ರಸ್ತೆಯಲ್ಲಿ ಸಾಗುತ್ತಿರುವ ಒಂಟಿ ಕಾರನ್ನು ತೋರಿಸುವ ಟೈಟಲ್ ಪೋಸ್ಟರ್ ಮೂಲಕವೇ ಸಿನಿಮಾಸಕ್ತರ ಗಮನ ಸೆಳೆದ 'ಮನರೂಪ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.
ಹೊಸ ತಲೆಮಾರಿನ, ಹೊಸ ಬಗೆಯ ಬಿಕ್ಕಟ್ಟಿನ ಕಥೆಯನ್ನು 'ಮನರೂಪ' ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸದ್ಯದಲ್ಲೇ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಸಿ.ಎಂ.ಸಿ.ಆರ್. ಮೂವೀಸ್ ನಿರ್ಮಾಣ ಮಾಡಿರುವ 'ಮನರೂಪ' ಸಿನಿಮಾದಲ್ಲಿ ಎಲ್ಲಾ ಕಲಾವಿದರೂ ಹೊಸಬರೇ. ಚಿತ್ರೀಕರಣದ ಪೂರ್ವದಲ್ಲಿ 15 ದಿನಗಳ ಕಾಲ ಅಭಿನಯ ತಾಲೀಮು ನಡೆಸಲಾಗಿದೆ. ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಭಾಗಗಳಲ್ಲಿ 'ಮನರೂಪ' ಚಿತ್ರೀಕರಣ ಮಾಡಲಾಗಿದೆ. ಮುಂದೆ ಓದಿರಿ...

ತಾರಾಗಣದಲ್ಲಿ ಯಾರ್ಯಾರು ಇದ್ದಾರೆ.?
ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದ ಕಥಾಹಂದರ ಏನು.?
'ಮನರೂಪ' ಸಿನಿಮಾ 1980 ಮತ್ತು 2000 ನಡುವಿನ ವರ್ಷಗಳ ಅವಧಿಯಲ್ಲಿ ಹುಟ್ಟಿರುವವರ ಕಥೆ. ಹೊಸ ತಲೆಮಾರು ಎಂದು ಕರೆಯಿಸಿಕೊಳ್ಳುವ ಈ ಅವಧಿಯಲ್ಲಿ ಜನಿಸಿದ ಸಮೂಹದಲ್ಲಿ ಕಾಣುವ ಎರಡು ಬಗೆಯ ಭಿನ್ನತೆಯನ್ನು 'ಮನರೂಪ' ಸಿನಿಮಾದಲ್ಲಿ ನಿರೂಪಿಸಲಾಗಿದೆ.

ನಿರ್ದೇಶಕರು ಏನಂತಾರೆ.?
"ಖಂಡಿತವಾಗಿಯೂ, ಮನರೂಪ ಹೊಸ ತಲೆಮಾರಿನ ಸಿನಿಮಾ. ಪರಸ್ಪರ ಪ್ರೀತಿ ವಿಶ್ವಾಸದಿಂದ ಕುಟುಂಬದಲ್ಲಿ ಇರಲಾಗದ, ಹೊಂದಿಕೊಂಡು ಜೀವಿಸಲಾಗದ, ಒಂಟಿಯಾಗೇ ಉಳಿಯಲು ಇಚ್ಚಿಸುವ, ಆದರೆ ತಮ್ಮನ್ನೇ ಗಮನಿಸಬೇಕು ಎನ್ನುವ ಮನೋಭಾವದ ಯುವ ಮನಸ್ಸಿನ ಕಥೆ ಇದು," ಎಂದು 'ಮನರೂಪ' ಸಿನಿಮಾ ನಿರ್ದೇಶಕ ಕಿರಣ್ ಹೆಗಡೆ ತಿಳಿಸಿದರು. "ತಾವು ತಮ್ಮದೇ ವಿವಿಧ ಬಿಂಬಗಳಲ್ಲಿ ಸಿಲುಕಿ ಒದ್ದಾಡುವ ಪಾತ್ರಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿವೆ. 'ಮನರೂಪ' ಸಿನಿಮಾ ಹಲವು ಕಾರಣಗಳಿಂದ ಗಮನ ಸೆಳೆಯಲಿದೆ'' ಎಂಬುದು ನಿರ್ದೇಶಕ ಕಿರಣ್ ಹೆಗಡೆ ವಿಶ್ವಾಸ. ಸಿನಿಮಾ ಡಿವೋರ್ಸ್, ಪ್ರೀತಿ, ಗೆಳೆತನ ಮುಂತಾದ ಮನುಷ್ಯನ ಸ್ವಾಭಾವಿಕ ಗುಣಗಳ ಬಗ್ಗೆ ಮಾತನಾಡುತ್ತಲೇ, ನಾಗರಿಕ ನಿಯಮಗಳ ಉಲ್ಲಂಘನೆಯ ಹೆಜ್ಜೆಗಳನ್ನು ತೋರಿಸುವ ಪ್ರಯತ್ನ ಮಾಡಲಿದೆ. ಇದನ್ನೇ ಮನುಷ್ಯನ ಮನಸಿನ ಕತ್ತಲೆ ಜಗತ್ತು ಎಂದೂ, ಈ ಕತ್ತಲೆ ಜಗತ್ತನ್ನು ಕರಡಿ ಗುಹೆಯ ಕತ್ತಲೆಗೆ ಹೋಲಿಸುವ ಪ್ರಯತ್ನವನ್ನು 'ಮನರೂಪದಲ್ಲಿ' ಮಾಡಲಾಗಿದೆ.

ಚಿತ್ರ ಬಿಡುಗಡೆ ಯಾವಾಗ.?
ಗೋವಿಂದರಾಜ್ ಛಾಯಾಗ್ರಹಣ, ಸೂರಿ-ಲೋಕಿ ಸಂಕಲನ, ಸರವಣ ಅವರ ಸಂಗೀತ ಹಾಗೂ ನಾಗರಾಜ್ ಹುಲಿವಾನ ಅವರ ಶಬ್ಧಗ್ರಹಣ 'ಮನರೂಪ' ಚಿತ್ರಕ್ಕಿದೆ. ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿದೆ. ಅಂದುಕೊಂಡಂತೆ ಆದರೆ, 'ಮನರೂಪ' ಮೇ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











