ಹನುಮಂತಪ್ಪ ಕೊಪ್ಪದ್ ಕಂಡಿದ್ದ ಕನಸನ್ನ ಹೊತ್ತು ಬಂದಿದೆ 'ಮುಕ್ತಿ'
ಸಿಯಾಚಿನ್ ಹಿಮಪಾತದಲ್ಲಿ ಆರು ದಿನಗಳ ಕಾಲ ಸಿಲುಕಿ ದೇಶಕ್ಕಾಗಿ ಪ್ರಾಣಬಿಟ್ಟ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರ ಹೆಸರಿನಿಂದ ಕುತೂಹಲ ಹುಟ್ಟುಹಾಕಿರುವ ಸಿನಿಮಾ 'ಮುಕ್ತಿ' ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಈಗಾಗಲೇ ತೆರೆಮೇಲೆ ಯೋಧನ ಕುರಿತು ಹಲವು ಚಿತ್ರಗಳು ಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಸಿನಿಮಾ ಇದು. ಅಂದ್ಹಾಗೆ, ಇದು ಹನುಮಂತಪ್ಪ ಕೊಪ್ಪದ್ ಅವರ ಜೀವನ ಕಥೆಯಲ್ಲ, ಅವರು ಕಂಡಿದ್ದ ಕನಸೊಂದನ್ನು ತೆರೆಮೇಲೆ ತಂದಿರುವ ಕ್ರಾಂತಿ ಕಥೆ.
ಕೆ.ಶಂಕರ್ ಎಂಬುವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸಿ.ಕೆ.ಕೃಷ್ಣಮೂರ್ತಿ ಬಂಡವಾಳ ಹಾಕಿದ್ದಾರೆ. ನಿರ್ದೇಶಕರಿಗೆ ಈ ಸಿನಿಮಾ ಮಾಡಬೇಕೆಂದು ಎನಿಸಿದ್ದಕ್ಕೂ ಕಾರಣವಿದೆ. ಹನುಮಂತಪ್ಪ ಕೊಪ್ಪದ್ ಅವರು ರಜಾದಿನ ಕಳೆಯಲು ತನ್ನ ಹುಟ್ಟೂರಿಗೆ ಬಂದಾಗ ಗೆಳೆಯರ ಜೊತೆ ದೇಶದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಮತ್ತು ಆ ಸಮಸ್ಯೆಗೆ ಪರಿಹಾರ ಕುರಿತ ಚರ್ಚೆ ಮಾಡುತ್ತಿದ್ದರು. ಈ ಅಶಂಗಳನ್ನಿಟ್ಟು ನಿರ್ದೇಶಕರು ಕಥೆ ಮಾಡಿದ್ದಾರೆ.

ಹನುಮಂತಪ್ಪ ಕೊಪ್ಪದ್ ಅವರ ಗೌರವಕ್ಕೆ, ಅವರ ವೃತ್ತಿಗೆ ಅವರ ಆದರ್ಶಕ್ಕೆ ಯಾವುದೇ ಧಕ್ಕೆ ಬರದಂತೆ, ಅವರ ಕುಟುಂಬದ ಬಳಿಯೂ ಅನುಮತಿ ಪಡೆದು ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ನಕುಲ್, ದೀಪಿಕಾ ಗೌಡ, ರಘುರಂಜನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿಯೊಬ್ಬ ದೇಶ ಪ್ರೇಮಿಯೂ ಈ ಚಿತ್ರವನ್ನ ವೀಕ್ಷಿಸುವ ಮೂಲಕ ಅಗಲಿದ ಯೋಧನಿಗೊಂದು ಗೌರವ ಸಲ್ಲಿಸಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿದ್ದು, ಬೆಟ್ಟದೂರು ಹಾಗೂ ಉತ್ತರಕರ್ನಾಟಕ ಸುತ್ತಮುತ್ತಲು ಚಿತ್ರೀಕರಣ ನಡೆಸಲಾಗಿದೆ.


Click it and Unblock the Notifications











